Advertisement

ಒಲಿಂಪಿಕ್ಸ್‌ ಸ್ಪರ್ಧಿಗಳಿಗೆ 4 ದ್ರವ್ಯ ಪರೀಕ್ಷೆ

01:30 AM Jul 24, 2019 | sudhir |

ಹೊಸದಿಲ್ಲಿ: ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳು ಕಠಿನ ದ್ರವ್ಯ ಪರೀಕ್ಷೆ ಎದುರಿಸಬೇಕಾಗುತ್ತದೆ.

Advertisement

ಪ್ರತಿ ಸ್ಪರ್ಧಿಯನ್ನು 3-4 ದ್ರವ್ಯ ಪರೀಕ್ಷೆಗೆ ಒಳಪಡಿಸಿದ ಬಳಿಕವೇ ಸರ್ಟಿಫಿಕೆಟ್‌ ನೀಡಲಾ ಗುವುದು ಎಂದು ರಾಷ್ಟ್ರೀಯ ದ್ರವ್ಯ ವಿರೋಧಿ ದಳ (ನಾಡಾ)ದ ಮಹಾ ನಿರ್ದೇಶಕ ನವೀನ್‌ ಅಗರ್ವಾಲ್‌ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ನಾಡಾ ಟಾರ್ಗೆಟೆಡ್‌ ಟೆಸ್ಟಿಂಗ್‌ ಎಂಬ ಹೊಸ ವಿಧಾನವೊಂದನ್ನು ಅಳವಡಿಸಿಕೊಂಡ ಬಳಿಕ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿ ಬೀಳುತ್ತಿರುವ ಕ್ರೀಡಾಪಟುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷದ ಎಪ್ರಿಲ್‌ನಿಂದ ಈ ವರ್ಷದ ಮಾರ್ಚ್‌ ತನಕ 187 ಕ್ರೀಡಾಪಟುಗಳು ಡೋಪಿಂಗ್‌ ವಂಚನೆ ಎಸಗಿರುವುದು ಪತ್ತೆಯಾಗಿದೆ. ಇದೊಂದು ದುರದೃಷ್ಟಕರ ಬೆಳವಣಿಗೆ ಎಂದು ಅಗರ್ವಾಲ್‌ ಹೇಳಿಕೊಂಡಿದ್ದಾರೆ.

ಪರಿಶುದ್ಧ ಮತ್ತು ನೈಜ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕು ಎನ್ನುವುದು ನಮ್ಮ ಉದ್ದೇಶ. ಆಯ್ಕೆಯಾದ ಬಳಿಕ ಅವಮಾನಿತರಾಗುವುದಕ್ಕಿಂತ ಆಯ್ಕೆಯಾಗುವ ಮೊದಲೇ ದ್ರವ್ಯ ಪರೀಕ್ಷೆಯಲ್ಲಿ ಸಾಚಾತನವನ್ನು ಸಾಬೀತುಪಡಿಸುವುದು ಆಟಗಾರರ ಹಿತದೃಷ್ಟಿ ಯಿಂದಲೂ ಉತ್ತಮ ಕ್ರಮ ಎಂದವರು ಕಠಿನ ಪರೀಕ್ಷೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಹಿಳಾ ಹಾಕಿ ಆಟಗಾರರಿಗೆ ಸಿಹಿ-ಖಾರ ಪಥ್ಯ
ಮಹಿಳಾ ಹಾಕಿ ಆಟಗಾರರಿಗೆ ಈಗಲೇ ತಯಾರಿ ಶುರುವಾಗಿದೆ. ಆಯ್ಕೆ ಸುತ್ತಿನಲ್ಲಿ ತೇರ್ಗಡೆಯಾಗುವ ಸಲುವಾಗಿ ವನಿತೆಯರು ತಮ್ಮ ಮೆಚ್ಚಿನ ಸಿಹಿ ಮತ್ತು ಖಾರ ತಿಂಡಿಗಳಿಂದ ದೂರವಿರಬೇಕೆಂದು ಸೂಚಿಸಲಾಗಿದೆ.

Advertisement

ಹಿರೋಶಿಮಾದಲ್ಲಿ ಕಳೆದ ತಿಂಗಳು ನಡೆದ ಎಫ್ಐಎಚ್‌ ಸರಣಿಯಲ್ಲಿ ಕಪ್‌ ಗೆದ್ದ ಬಳಿಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ವನಿತೆಯರು ನವೆಂಬರ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಅರ್ಹತಾ ಸುತ್ತಿಗಾಗಿ ಕಠಿನ ಅಭ್ಯಾಸ ನಿರತರಾಗಿದ್ದಾರೆ. ಪ್ರಸ್ತುತ ಇರುವುದು ಅತ್ಯುತ್ತಮ ಮತ್ತು ಅತಿ ಸಂತುಲಿತವಾಗಿರುವ ತಂಡ. ವೈಜ್ಞಾನಿಕ ಸಲಹೆಗಾರ ವಾಯ್ನ ಲೋಂಬರ್ಡ್‌ ಸಲಹೆಯನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ ಎಂದು ನಾಯಕಿ ರಾಣಿ ರಾಮ್‌ಪಾಲ್‌ ಪ್ರತಿಕ್ರಿಯಿಸಿದ್ದಾರೆ. ಮೈದಾನದಲ್ಲಿ ಉತ್ತಮ ನಿರ್ವಹಣೆ ತೋರಿಸಬೇಕಿದ್ದರೆ ಕಟ್ಟುನಿಟ್ಟಿನ ಆಹಾರ ಪಥ್ಯ ಪಾಲಿಸಬೇಕೆಂದು ಲೋಂಬರ್ಡ್‌ ವನಿತೆಯರಿಗೆ ಹೇಳಿದ್ದಾರೆ. ಅವರ ಸಲಹೆಯಂತೆ ವನಿತೆಯರು ಈಗ ಸಿಹಿ, ಖಾರ, ಚಾಕೊಲೇಟ್‌, ಎಣ್ಣೆ ಪದಾರ್ಥ ತಿನ್ನುವುದನ್ನು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next