ಭುವನೇಶ್ವರ: ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ತಂಡದ ಸದಸ್ಯ ವಿವೇಕ್ ಸಾಗರ್ ಪ್ರಸಾದ್ ಮುಂಬರುವ ಕಿರಿಯರ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.
2018ರ ಯುವ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ತಂಡದ ಸದಸ್ಯ, ಡಿಫೆಂಡರ್ ಸಂಜಯ್ ಉಪನಾಯಕರಾಗಿದ್ದಾರೆ. ನ.24ರಿಂದ ಭುವನೇಶ್ವರದಲ್ಲಿ ಈ ಪಂದ್ಯಾವಳಿ ಆರಂಭವಾಗಲಿದ್ದು, 16 ಅಗ್ರ ತಂಡಗಳು ಪಾಲ್ಗೊಳ್ಳಲಿವೆ. ಕಳೆದ 2016ರ ಕೂಟದಲ್ಲಿ ಭಾರತ ಚಾಂಪಿಯನ್ ಆಗಿ ಮೂಡಿಬಂದಿತ್ತು. ದೀನಚಂದ್ರ ಸಿಂಗ್ ಮತ್ತು ಬಾಬಿ ಸಿಂಗ್ ಧಾಮಿ ಮೀಸಲು ಆಟಗಾರರಾಗಿದ್ದಾರೆ. 18 ಸದಸ್ಯರ ತಂಡದಲ್ಲಿ ಯಾರಾದರೂ ಗಾಯಾಳಾದರಷ್ಟೇ ಇವರಿಗೆ ಆಡುವ ಅವಕಾಶ ಲಭಿಸಲಿದೆ.
ಫ್ರಾನ್ಸ್ ಮೊದಲ ಎದುರಾಳಿ: ಹಾಲಿ ಚಾಂಪಿಯನ್ ಭಾರತ ತನ್ನ ಮೊದಲ ಪಂದ್ಯವನ್ನು ಫ್ರಾನ್ಸ್ ವಿರುದ್ಧ ನ.24ರಂದು ಆಡಲಿದೆ. ಬಳಿಕ ಕೆನಡಾ (ನ. 25) ಹಾಗೂ ಪೋಲೆಂಡ್ (ನ. 27) ವಿರುದ್ಧ ಸೆಣೆಸಲಿದೆ. ನಾಕೌಟ್ ಪಂದ್ಯಗಳು ಡಿ.1ರಿಂದ 5ರ ತನಕ ನಡೆಯಲಿವೆ. ಕೂಟದ ಉಳಿದ ತಂಡಗಳೆಂದರೆ ಬೆಲ್ಜಿಯಂ, ನೆದರ್ಲೆಂಡ್ಸ್, ಅರ್ಜೆಂಟೀನ, ಜರ್ಮನಿ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಪಾಕಿಸ್ತಾನ, ಕೊರಿಯಾ, ಮಲೇಷ್ಯಾ, ಫ್ರಾನ್ಸ್, ಚಿಲಿ, ಸ್ಪೇನ್ ಮತ್ತು ಯುಎಸ್‌ಎ.
ಇದನ್ನೂ ಓದಿ:ಅಪಘಾತಗಳು ಸಂಭವಿಸಿದರೆ ಅಧಿಕಾರಿಗಳೇ ಹೊಣೆ: ಹೈಕೋರ್ಟ್
ಭಾರತ ತಂಡ: ವಿವೇಕ್ ಸಾಗರ್ ಪ್ರಸಾದ್ (ನಾಯಕ), ಸಂಜಯ್ (ಉಪನಾಯಕ), ಶಾರದಾನಂದ ತಿವಾರಿ, ಪ್ರಶಾಂತ್ ಚೌಹಾಣ್ (ಗೋ.ಕೀ.), ಪವನ್ (ಗೋ.ಕೀ.), ಸುದೀಪ್ ಚಿರ್ಮಾಕೊ, ರಾಹುಲ್ ಕುಮಾರ್ ರಾಜ್‌ಭಾರ್, ಮಣಿಂದರ್ ಸಿಂಗ್, ವಿಷ್ಣುಕಾಂತ್ ಸಿಂಗ್, ಅಂಕಿತ್ ಪಾಲ್, ಉತ್ತಮ್ ಸಿಂಗ್, ಸುನೀಲ್ ಜೋಜೊ, ಮನ್‌ಜಿತ್, ರಬಿಚಂದ್ರ ಸಿಂಗ್, ಅಭಿಷೇಕ್ ಲಾಕ್ರಾ, ಯಶ್‌ದೀಪ್ ಸಿವಾಕ್, ಗುರ್ಮುಖ್ ಸಿಂಗ್, ಅರೈಜೀತ್ ಸಿಂಗ್.
ಮೀಸಲು ಆಟಗಾರರು: ದೀನಚಂದ್ರ ಸಿಂಗ್, ಬಾಬಿ ಸಿಂಗ್ ಧಾಮಿ.