ಭಾರತದಲ್ಲಿ ಜ್ಯೋತಿಗೆ ಅಂದರೆ ಬೆಳಕಿಗೆ ಮಹತ್ವದ ಸ್ಥಾನವಿದೆ. ಇಲ್ಲಿ ಒಬ್ಬೊಬ್ಬರು ಒಂದೊಂದು ದೇವರನ್ನು ನಂಬುತ್ತಾರೆ. ಆದರೆ ಅಷ್ಟೂ ಮಂದಿ ಬೆಳಕಿಗೆ ಮಾತ್ರ ತಪ್ಪದೇ ಗೌರವ ನೀಡುತ್ತಾರೆ. ದೀಪ ಹಚ್ಚದೇ ಕಾರ್ಯಕ್ರಮಗಳೇ ಇಲ್ಲ. ಬೆಳಕಿಗೆ ಅಷ್ಟೇ ಪ್ರಾಮುಖ್ಯತೆ ಪ್ರಾಚೀನ ಗ್ರೀಸ್‌ನಲ್ಲೂ ಇತ್ತು ಎನ್ನುವುದು ಗೊತ್ತೇ?
ಪ್ರಾಚೀನ ಗ್ರೀಕ್ ನಗರಿ ಒಲಿಂಪಿಯಾದಲ್ಲಿ ಹೆಸ್ಟಿಯಾ ಎನ್ನುವ ದೇವಸ್ಥಾನವಿದೆ. ಅಲ್ಲಿ 776ರಲ್ಲಿ ಕ್ರೀಡಾಕೂಟ ಆರಂಭವಾಯಿತು. ಗ್ರೀಸ್‌ನ ಮೂಲೆ ಮೂಲೆಗಳಿಂದ ಕ್ರೀಡಾ ಪಟುಗಳು ಬರುತ್ತಿದ್ದರು. ಅಲ್ಲಿ ಜೀಯಸ್ ಮತ್ತು ಆತನ ಪತ್ನಿ ಹೆರಾರನ್ನು ಪೂಜಿಸಲಾಗುತ್ತಿತ್ತು. ಈ ಇಬ್ಬರ ಗೌರವಾರ್ಥ ಹೆಸ್ಟಿಯಾ ಬಲಿಪೀಠದಲ್ಲಿ ಅಗ್ನಿಯನ್ನು ಉರಿಸುತ್ತಿದ್ದರು. ಅದಕ್ಕೆ ಅಸಾಮಾನ್ಯ ಶಕ್ತಿಯಿದೆ ಎನ್ನುವುದು ಅವರ ನಂಬಿಕೆ.
ಒಲಿಂಪಿಯಾದಲ್ಲಿ ಕ್ರಿಸ್ತಶಕ 4ನೇ ಶತಮಾನದವರೆಗೆ ಕೂಟ ನಡೆಯಿತು. ಅನಂತರ ರೋಮನ್ನರ ಆಡಳಿತದ ಪರಿಣಾಮ ಈ ಕ್ರೀಡಾಕೂಟ ನಿಂತು ಹೋಯಿತು. ರೋಮ್ ರಾಜರು ಕ್ರೈಸ್ತಮತವನ್ನು ಹೇರಲು ಹೀಗೆ ಮಾಡಿದರು ಎನ್ನುವ ಅಭಿಪ್ರಾಯವಿದೆ.
1894ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ರಚನೆಯಾಯಿತು. 1896ರಲ್ಲಿ ಗ್ರೀಸ್‌ನಲ್ಲೇ ಮೊದಲ ಆಧುನಿಕ ಒಲಿಂಪಿಕ್ಸ್ ನಡೆಯಿತು. ಆದರೆ ಆಗ ಜ್ಯೋತಿ ಬೆಳಗುವ ಕಾರ್ಯಕ್ರಮ ಇರಲಿಲ್ಲ. 1928ರಲ್ಲಿ ನೆದರ್ಲೆಂಡ್‌ನ ಆ್ಯಮ್‌ಸ್ಟರ್‌ಡಮ್‌ನಲ್ಲಿ ಕೂಟ ನಡೆದಾಗ ಪುರಾತನ ಒಲಿಂಪಿಕ್ಸ್ ಗೂ ಆಧುನಿಕ ಒಲಿಂಪಿಕ್ಸ್‌ಗೂ ಒಂದು ಬೆಸುಗೆ ಹಾಕುವ ಲೆಕ್ಕಾಚಾರ ಮಾಡಲಾಯಿತು. ಹಾಗೆ ಶುರುವಾಗಿದ್ದೇ ಒಲಿಂಪಿಕ್ಸ್ ಜ್ಯೋತಿಯಾತ್ರೆ! ಆಗ ಮತ್ತೆ ಮೊದಲ ಬಾರಿಗೆ ಒಲಿಂಪಿಕ್ಸ್ ಜ್ಯೋತಿ ಬೆಳಗಲಾಯಿತು.
ಪ್ರತೀ ನಾಲ್ಕು ವರ್ಷಕ್ಕೊಮ್ಮೆ ಕೂಟ ನಡೆದಾಗ ಗ್ರೀಸ್‌ನ ಒಲಿಂಪಿಯಾದಲ್ಲೇ ಜ್ಯೋತಿ ಬೆಳಗಲಾಗುತ್ತದೆ. ಆಗ 11 ಮಂದಿ ಸ್ತ್ರೀದೇವತೆಗಳ ಸಂಕೇತವಾಗಿ 11 ಯುವತಿಯರು ಅಲ್ಲಿ ಬಿಳೀ ಉಡುಪಿನಲ್ಲಿರುತ್ತಾರೆ. ಅಲ್ಲಿ ಬೆಳಗಲ್ಪಟ್ಟ ಜ್ಯೋತಿ ಮೊದಲು ಗ್ರೀಸ್ ಸಂಚರಿಸಿ ನಂತರ ಕೂಟ ನಡೆಯುವ ದೇಶಕ್ಕೆ ಬರುತ್ತದೆ. ಅನಂತರ ವಿಶ್ವದ ಮೂಲೆಮೂಲೆಗಳಿಗೆ ಸಂಚರಿಸಿ ಆತಿಥೇಯ ದೇಶಕ್ಕೆ ಮರಳುತ್ತದೆ. ಅಲ್ಲಿ ಉದ್ಘಾಟನಾ ಸಮಾರಂಭ ದಲ್ಲಿರುವ ಕುಂಡವನ್ನು ಈ ಜ್ಯೋತಿ ಮೂಲಕ ಬೆಳಗಲಾಗುತ್ತದೆ. ಅಲ್ಲಿಗೆ ಯಾತ್ರೆ ಮುಗಿಯುತ್ತದೆ. ಕೂಟ ಮುಗಿದಾಗ ಜ್ಯೋತಿಯನ್ನು ನಂದಿಸಲಾಗುತ್ತದೆ.
ಜಪಾನಿನ ಫುಕುಶಿಮದಲ್ಲಿ ಒಲಿಂಪಿಕ್ಸ್ ಜ್ಯೋತಿ ವಾಸ್ತವ್ಯ
ಮಾ.12ರಿಂದ ಒಲಿಂಪಿಕ್ಸ್ ಜ್ಯೋತಿಯಾತ್ರೆ ಶುರುವಾಗಿದೆ. ಗ್ರೀಸ್‌ನ ಪ್ರಾಚೀನ ನಗರ ಒಲಿಂಪಿಯಾದಲ್ಲಿ ಬೆಳಗಲ್ಪಟ್ಟ ಅದು, ಇದೀಗ ಆತಿಥೇಯ ಜಪಾನಿನಲ್ಲಿ ಸಂಚರಿಸುತ್ತಿದೆ. ಸದ್ಯ ಫುಕುಶಿಮ ನಗರವನ್ನು ಪ್ರವೇಶಿಸಿದೆ. ಇನ್ನೊಂದು ತಿಂಗಳು ಅಲ್ಲೇ ಅದರ ವಾಸ್ತವ್ಯ. ಆದರೆ ಎಂದಿನಂತೆ ಜನರು ರಾಶಿರಾಶಿಯಾಗಿ ಬಂದು ನೋಡಲು ಸಾಧ್ಯವಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಬಿಡಿ ಬಿಡಿಯಾಗಷ್ಟೇ ಬಂದು ನೋಡಬೇಕು. ದುರಂತವೆಂದರೆ ಸ್ವತಃ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವುದು