ಗುವಾಹಟಿ: ತಮ್ಮ ಕಷ್ಟಕಾಲದಲ್ಲಿ ನೆರವಾದ ಟ್ರಕ್ ಡ್ರೈವರ್ ಗಳಿಗೆ ಒಲಿಂಪಿಕ್ ಬೆಳ್ಳಿ ಪದಕದ ವಿಜಯಶಾಲಿ ಮೀರಾಬಾಯಿ ಚಾನು ಅವರು ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ವೇಟ್ ಲಿಫ್ಟರ್ ಮೀರಾಬಾಯಿ ಚಾನು ತಾನು ಅಭ್ಯಾಸ ನಡೆಸಲು ನೆರವು ನೀಡಿದ ಟ್ರಕ್ ಡ್ರೈವರ್‌ಗಳಿಗೆ ಮನೆಗೆ ಕರೆದು ಅವಿಗೆ ವಿಶೇಷವಾದ ಉಡುಗೊರೆಗಳನ್ನು ನೀಡಿ ಗೌರವಿಸಿದ್ದಾರೆ.
ಜಪಾನ್‌ನ ಟೋಕಿಯೋದಲ್ಲಿ ನಡೆಯುತ್ತಿರುವ 32ನೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಚಾನು ಬೆಳ್ಳಿ ಪದಕ ಜಯಿಸಿದ್ದರು. ತನ್ನ ಈ ಸಾಧನೆಗೆ ನೆರವಾದ ಎಲ್ಲರಿಗೂ ಧನ್ಯವಾದ ಹೇಳಿರುವ ಅವರು, ತಾವು ನಿತ್ಯ ಪ್ರ್ಯಾಕ್ಟಿಸ್ ಗೆ ತೆರಳುತ್ತಿದ್ದ ವೇಳೆ ಉಚಿತವಾಗಿ ಡ್ರಾಪ್ ನೀಡುತ್ತಿದ್ದ ಟ್ರಕ್ ಡ್ರೈವರ್ ಗಳಿಗೆ ಗಿಫ್ಟ್ ನೀಡಿದ್ದಾರೆ.
ಮಣಿಪುರದ ರಾಜಧಾನಿ ಇಂಪಾಲ್‌ನ ಪೂರ್ವ ಭಾಗದ ನಾನ್‌ಪೋಕ್ ಕಾಕ್ಚಿಂಗ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಮೀರಾಬಾಯಿ ಅಭ್ಯಾಸಕ್ಕೆ ಹೋಗಬೇಕಿದ್ದರೆ ಕ್ರೀಡಾಕೇಂದ್ರ ಹತ್ತಿರದಲ್ಲಿರಲಿಲ್ಲ. ಇಂಪಾಲದಲ್ಲಿನ ಕ್ರೀಡಾಕೇಂದ್ರಕ್ಕೆ ಹೋಗಬೇಕಾದರೆ ಚಾನು 25 ಕಿಮೀ ಕ್ರಮಿಸಬೇಕಿತ್ತು, ಸಾರ್ವಜನಿಕ ವಾಹನ ಬಳಸಬೇಕಿತ್ತು. ಮಧ್ಯಮ ಆರ್ಥಿಕ ಕುಟುಂಬದಲ್ಲಿ ಹುಟ್ಟಿದ ಚಾನುಗೆ ಖಾಸಗಿ ವಾಹನದಲ್ಲಿ ದಿನಾಲು ಕ್ರೀಡಾಕೇಂದ್ರಕ್ಕೆ ಹೋಗಿಬರಲು ಆಗುತ್ತಿರಲಿಲ್ಲ. ಆ ಆಯ್ಕೆಯೇ ಚಾನುಗೆ ಇರಲಿಲ್ಲ. ಹೀಗಾಗಿ ಇಂಪಾಲಕ್ಕೆ ಮರಳು ಸಾಗಿಸುತ್ತಿದ್ದ ಟ್ರಕ್, ಲಾರಿಗಳಲ್ಲಿ ಚಾನು ಅಭ್ಯಾಸಕ್ಕೆ ಹೋಗಿಬರುತ್ತಿದ್ದರು. ಟ್ರಕ್ ಡ್ರೈವರ್‌ಗಳೂ ಕೂಡ ಚಾನು ಅಭ್ಯಾಸಕ್ಕೆ ಹೋಗಿ ಬರಲು ಉಚಿತ ಲಿಫ್ಟ್ ನೀಡುತ್ತಿದ್ದರು. ಹೀಗಾಗಿ ಚಾನು ಅವರ ಸಹಾಯ ಮರೆತಿಲ್ಲ.
ತಾನು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆಲ್ಲಲು ಸಹಾಯ ನೀಡಿದ ಸುಮಾರು 150 ಟ್ರಕ್ ಡ್ರೈವರ್‌ಗಳನ್ನು ಕರೆಸಿ ಚಾನು ಉಪಚರಿಸಿದ್ದಾರೆ, ಗೌರವಿಸಿದ್ದಾರೆ. ಆ ಎಲ್ಲಾ ಟ್ರಕ್ ಚಾಲಕರಿಗೂ ಒಂದು ಅಂಗಿ, ಒಂದು ಮಣಿಪುರದ ಸ್ಕಾರ್ಫ್ ಮತ್ತು ಒಂದು ಹೊತ್ತಿನ ಭೂರಿಭೋಜನ ನೀಡಿದ್ದಾರೆ. ತನ್ನ ಸಾಧನೆಗೆ ನೆರವಾದ ಟ್ರೈವರ್‌ಗಳಿಗೆ ಚಾನು ಭಾವುಕರಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.