Advertisement
ಪ್ರತಿಭಾನ್ವಿತ ಓಪನರ್ ಶುಭಂ ಗಿಲ್ ಬಾರಿಸಿದ ಸತತ 2ನೇ ಶತಕ, ವನ್‌ಡೌನ್ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರ 105 ರನ್ ಸಾಹಸದಿಂದ ಅಂಡರ್-19 ಸರಣಿಯ 4ನೇ ಏಕದಿನ ಪಂದ್ಯವನ್ನು ಭಾರತ 230 ರನ್ನುಗಳ ಬೃಹತ್ ಅಂತರದಿಂದ ಗೆದ್ದು ಸರಣಿ ಮೇಲೆ ಹಕ್ಕು ಸ್ಥಾಪಿಸಿತು.
ಪಂಜಾಬ್ ಆರಂಭಕಾರ ಶುಭಂ ಗಿಲ್ ಮತ್ತೂಮ್ಮೆ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ 160 ರನ್ ಸಿಡಿಸಿದರು. ಇದು ಈ ಸರಣಿಯಲ್ಲಿ ಗಿಲ್ ಬಾರಿಸಿದ ಸತತ 2ನೇ ಶತಕ ಹಾಗೂ ಜೀವನಶ್ರೇಷ್ಠ ಸಾಧನೆ. 3ನೇ ಪಂದ್ಯದಲ್ಲಿ ಗಿಲ್ ಅಜೇಯ 138 ರನ್ ಮಾಡಿ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ್ದರು. ಸೋಮವಾರದ ಮುಖಾಮುಖೀಯಲ್ಲಿ ಇವರಿಗೆ ಮುಂಬಯಿಯ ಪೃಥ್ವಿ ಶಾ ಉತ್ತಮ ಬೆಂಬಲವಿತ್ತರು. ವನ್‌ಡೌನ್‌ನಲ್ಲಿ ಬ್ಯಾಟ್ ಹಿಡಿದು ಬಂದ ಶಾ ಗಳಿಕೆ 105 ರನ್. ಇವರಿಬ್ಬರ 3ನೇ ವಿಕೆಟ್ ಜತೆಯಾಟದಲ್ಲಿ 231 ರನ್ ಹರಿದು ಬಂತು.
Related Articles
Advertisement
ಇಂಗ್ಲೆಂಡ್ ಬ್ಯಾಟಿಂಗ್ ಸರದಿಗೆ ಗಂಡಾಂತರ ತಂದಿತ್ತವರು ರಾಜಸ್ಥಾನದ ಮಧ್ಯಮ ವೇಗಿ ಕಮಲೇಶ್ ನಾಗರ್ಕೋಟಿ (31ಕ್ಕೆ 4). ಜತೆಗೆ ವಿವೇಕಾನಂದ ತಿವಾರಿ (20ಕ್ಕೆ 3) ಮತ್ತು ಶಿವಂ ಮಾವಿ (18ಕ್ಕೆ 2) ಕೂಡ ಮಿಂಚಿನ ಬೌಲಿಂಗ್ ನಡೆಸಿದರು. 16 ರನ್ ಆಗುವಷ್ಟರಲ್ಲಿ 3 ವಿಕೆಟ್ ಉದುರಿಸಿಕೊಂಡ ಇಂಗ್ಲೆಂಡ್ ಯಾವ ಹಂತದಲ್ಲೂ ಹೋರಾಟದ ಲಕ್ಷಣ ತೋರಲಿಲ್ಲ. ಕೀಪರ್ ಒಲೀ ಪೋಪ್ 59, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ವಿಲ್ ಜಾಕ್ಸ್ 44 ರನ್ ಮಾಡಿದ್ದೇ ದೊಡ್ಡ ಮೊತ್ತಗಳಾಗಿ ದಾಖಲಾದವು.
ಸಂಕ್ಷಿಪ್ತ ಸ್ಕೋರ್: ಭಾರತದ ಕಿರಿಯರು-9 ವಿಕೆಟಿಗೆ 382 (ಗಿಲ್ 160, ಶಾ 105, ರಾಣ 33, ಬ್ರೂಕ್ಸ್ 58ಕ್ಕೆ 2, ಗೋಡ್ಸಲ್ 78ಕ್ಕೆ 2, ರಾಲಿನ್ಸ್ 78ಕ್ಕೆ 2). ಇಂಗೆಂಡ್ ಕಿರಿಯರು-37.4 ಓವರ್‌ಗಳಲ್ಲಿ 152 (ಪೋಪ್ 59, ಜಾಕ್ಸ್ 44, ನಾಗರ್ಕೋಟಿ 31ಕ್ಕೆ 4, ತಿವಾರಿ 20ಕ್ಕೆ 3, ಮಾವಿ 18ಕ್ಕೆ 2).