Advertisement

ಮುಂಬೈಗೆ ಓಲೆಕ್ಟ್ರಾದಿಂದ 2100 ಎಲೆಕ್ಟ್ರಿಕ್‌ ಬಸ್‌ಗಳ ಸರಬರಾಜು

08:46 PM May 23, 2022 | Team Udayavani |

ಮುಂಬಯಿ: ದೇಶದ ಎಲೆಕ್ಟ್ರಿಕ್‌ ಬಸ್‌ಗಳ ಕ್ಷೇತ್ರದಲ್ಲಿ ಮುಂಚೂಣಿ ಸಂಸ್ಥೆಯಾಗಿ ಹೊರಹೊಮ್ಮಿರುವ ಓಲೆಕ್ಟ್ರಾ ಗ್ರೀನ್‌ಟೆಕ್‌ ಲಿಮಿಟೆಡ್‌ಗೆ ಬೃಹತ್‌ ಮುಂಬೈ ವಿದ್ಯುತ್‌ ಸರಬರಾಜು ಮತ್ತು ಸಾರಿಗೆ ಇಲಾಖೆ (ಬೆಸ್ಟ್) 2100 ಎಲೆಕ್ಟ್ರಿಕ್‌ ಬಸ್‌ಗಳ ಸರಬರಾಜಿಗೆ ಆದೇಶ ನೀಡಿದೆ.

Advertisement

ಈ ಮೊದಲು ಈ ಬೃಹತ್‌ ಪ್ರಮಾಣದ ಎಲೆಕ್ಟ್ರಿಕ್‌ ಬಸ್‌ಗಳ ಸರಬರಾಜು ಟೆಂಡರ್‌ನಲ್ಲಿ ಎಲ್-1 ಆಗಿ ಹೊರ ಹೊಮ್ಮಿದ್ದ ಓಲೆಕ್ಟ್ರಾಗೆ ಬೆಸ್ಟ್‌ ಆದೇಶ ನೀಡಿದ್ದು, ಒಟ್ಟಾರೆ 3675 ಕೋಟಿ ರೂಪಾಯಿಗಳ ಈ ಸರಬರಾಜು ಆದೇಶ ದೇಶದ ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರದ ಅತಿ ದೊಡ್ಡ ವಹಿವಾಟಾಗಿದೆ.

ಮುಂದಿನ 12 ತಿಂಗಳುಗಳಲ್ಲಿ ಓಲೆಕ್ಟ್ರಾ ಈ ಬಸ್‌ಗಳನ್ನು ತಯಾರಿಸಿ ಬೆಸ್ಟ್‌ ಸಂಸ್ಥೆಗೆ ನೀಡಲಿದ್ದು, ಒಟ್ಟು ವೆಚ್ಚದ ಒಪ್ಪಂದದ ಆಧಾರದಲ್ಲಿ 12 ವರ್ಷಗಳ ಕಾಲ ಓಲೆಕ್ಟ್ರಾ ಗ್ರೀನ್‌ಟೆಕ್‌ ಸೋದರ ಸಂಸ್ಥೆ ಈವೆ ಟ್ರಾನ್ಸ್‌ ನಿರ್ವಹಿಸಲಿದೆ. ಓಲೆಕ್ಟ್ರಾ ಮತ್ತು ಈವೇ ನಡುವಿನ ಈ ವಹಿವಾಟನ್ನು ʼಸಂಬಂಧಿತ ಸಂಸ್ಥೆ ವಹಿವಾಟುʼ ಎಂದು ಹೇಳಲಾಗಿದ್ದು, ಈ ಆದೇಶದಂತೆ 12 ವರ್ಷಗಳ ನಿರ್ವಹಣೆ ಅವಧಿಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಅಗತ್ಯ ತಾಂತ್ರಿಕ ನಿರ್ವಹಣೆಯನ್ನು ಓಲೆಕ್ಟ್ರಾ ಸಂಸ್ಥೆಯೇ ಮಾಡಲಿದೆ.

ಈ ಬೃಹತ್‌ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಓಲೆಕ್ಟ್ರಾ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿದೇಶಕ ಕೆ.ವಿ. ಪ್ರದೀಪ್‌, “ಬೃಹನ್‌ ಮುಂಬೈ ವಿದ್ಯುತ್‌ ಸರಬರಾಜು ಮತ್ತು ಸಾರಿಗೆ ಇಲಾಖೆಯ ಈ ಬೃಹತ್‌ ಎಲೆಕ್ಟ್ರಿಕ್‌ ಬಸ್‌ಗಳ ಸರಬರಾಜು ಆದೇಶ ದೊರಕಿರುವುದು ಸಂತಸ ತಂದಿದೆ. ದೇಶದ ಆರ್ಥಿಕ ಕೇಂದ್ರವಾಗಿರುವ ಮುಂಬೈಗೆ ಈ ಸೇವೆ ಒದಗಿಸುವ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ, ನಿಗಧಿತ ಅವಧಿಯಲ್ಲಿ ಬಸ್‌ಗಳನ್ನು ಸರಬರಾಜು ಮಾಡಲಾಗುವುದು ಮತ್ತು ಮುಂಬೈ ಜನತೆಗೆ ಉತ್ತಮ ಸಾರಿಗೆ ಸೇವೆ ನೀಡಲು ಓಲೆಕ್ಟ್ರಾ ಬದ್ಧವಾಗಿದೆ” ಎಂದು ಹೇಳಿದ್ದಾರೆ.

ದೇಶದ ಎಲೆಕ್ಟ್ರಿಕ್‌ ಬಸ್‌ಗಳ ತಯಾರಿಕೆಯಲ್ಲಿ ನೈಪುಣ್ಯತೆ ಹೊಂದಿರುವ ಓಲೆಕ್ಟ್ರಾ ಗ್ರೀನ್‌ಟೆಕ್‌ ಸಂಸ್ಥೆಯು ಬೆಸ್ಟ್‌ನ ಈ ಕಾರ್ಯಾದೇಶ ಜಾರಿಗೆ 12 ಮೀಟರ್‌ಗಳ ಅತ್ಯಾಧುನಿಕ ಎ.ಸಿ. ಬಸ್‌ಗಳನ್ನು ತಯಾರಿಸಲಿದ್ದು, ಈಗಾಗಲೇ ಬೆಸ್ಟ್‌ ಸಂಸ್ಥೆಯು ಓಲೆಕ್ಟ್ರಾದ 40 ಬಸ್‌ಗಳನ್ನು ನಿರ್ವಹಿಸುತ್ತಿದೆ. ಪ್ರಸ್ತುತ ಓಲೆಕ್ಟ್ರಾ ಮತ್ತು ಈವೇ ಸಂಸ್ಥೆಗಳು ಜಂಟಿಯಾಗಿ ಪುಣೆ, ಹೈದರಾಬಾದ್‌, ಗೋವಾ, ಡೆಹ್ರಾಡುನ್‌, ಸೂರತ್‌, ಅಹ್ಮದಾಬಾದ್‌, ಸಿಲ್ವಾಸ ಮತ್ತು ನಾಗ್ಪುರಗಳಲ್ಲಿ ಯಶಸ್ವಿ ನಿರ್ವಹಿಸುತ್ತಿದೆ.

Advertisement

ಕಳೆದ 2000 ಇಸವಿಯಲ್ಲಿ ಆರಂಭವಾದ ಓಲೆಕ್ಟ್ರಾ ಗ್ರೀನ್‌ ಟೆಕ್‌ ಸಾರ್ವಜನಿಕ ಹೂಡಿಕೆ ಸಂಸ್ಥೆಯಾಗಿದ್ದು, ದೇಶದ ನಿರ್ಮಾಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಎಂ.ಇ.ಐ.ಎಲ್‌ನ ಸಮೂಹ ಸಂಸ್ಥೆಗಳಲ್ಲಿ ಒಂದಾಗಿದೆ. 2015ರಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಸಂಸ್ಥೆಯು ವಿದ್ಯುತ್‌ ಸರಬರಾಜು ಕ್ಷೇತ್ರದ ಸಿಲಿಕಾನ್‌ ರಬ್ಬರ್‌ ಮತ್ತು ಕಾಂಪೋಸಿಟ್‌ ಇನ್ಸುಲೇಟರ್‌ಗಳ ಬೃಹತ್‌ ತಯಾರಿಕೆಯಲ್ಲಿ ತೊಡಗಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next