ಬೆಂಗಳೂರು: ವೃದ್ಧನೊಬ್ಬ ತನ್ನ ಮದುವೆಯಾಗುವುದಾಗಿ ನಂಬಿಸಿ ಇದೀಗ ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿ ವೃದ್ಧೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಲಸೂರು ನಿವಾಸಿ ದಯಾವಾಣಿ (63) ಎಂಬುವರು ನೀಡಿದ ದೂರಿನ ಮೇರೆಗೆ ಪೂರ್ವವಿಭಾಗದ ಶಿವಾಜಿನಗರ ಮಹಿಳಾ ಠಾಣೆ ಪೊಲೀಸರು ಲೋಕನಾಥನ್ (70) ಎಂಬುವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ದಯಾಮಣಿ ಮತ್ತು ಲೋಕನಾಥನ್ ಅಕ್ಕ-ಪಕ್ಕದ ನಿವಾಸಿಗಳಾಗಿದ್ದಾರೆ. ದೂರುದಾರೆ ಪತಿ ಹಾಗೂ ಆರೋಪಿ ಲೋಕನಾಥನ್ ಪತ್ನಿ ಮೃತಪಟ್ಟಿದ್ದಾರೆ. ಐದು ವರ್ಷಗಳ ಹಿಂದೆ ಆರೋಪಿ ತನ್ನ ಮಗನ ಮದುವೆಗೆ ವಧು ಹುಡುಕುತ್ತಿದ್ದಾಗ ವೃದ್ಧೆಯ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಇಬ್ಬರೂ ಸಹ ಮೈಸೂರು, ದಾವಣಗೆರೆೆ, ಬೆಳಗಾವಿ ಕಡೆ ಪ್ರವಾಸಕ್ಕೂ ಹೋಗಿದ್ದರು. ಅದೇ ಸಂದರ್ಭದಲ್ಲಿ ತನ್ನನ್ನು ಮದುವೆಯಾಗುವಂತೆ ದೂರುದಾರೆ ಆರೋಪಿಗೆ ಕೇಳಿದ್ದರು. ಆರಂಭದಲ್ಲಿ ಒಪ್ಪಿದ ಆರೋಪಿ, ನಂತರ ಆಕೆಯನ್ನು ನಿರ್ಲಕ್ಷಿಸಿದ್ದು, ಇದೀಗ ಮದುವೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಅದನ್ನು ಪ್ರಶ್ನಿಸಿದಾಗ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ವೃದ್ಧೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಶಿವಾಜಿನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗನ ಮದುವೆಯಲ್ಲಿ ಪ್ರೇಮಾಂಕುರ :
ಲೋಕನಾಥ್ ಕುಟುಂಬದೊಂದಿಗೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದ ಮಹಿಳೆ, ಹೆಣ್ಣು ನೋಡುವ ಸಲುವಾಗಿ ಲೋಕನಾಥ್ ಜತೆಯಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ನಿನ್ನನ್ನು ಮದುವೆಯಾಗುತ್ತೇನೆಂದು ಲೋಕನಾಥ್ ಭರವಸೆ ನೀಡಿದ್ದರು. 5 ವರ್ಷಗಳಿಂದ ಇಬ್ಬರ ನಡುವೆ ಉತ್ತಮ ಸಂಬಂಧವಿತ್ತು. ಅವರನ್ನು ನಂಬಿ ಮನೆ ಬಿಟ್ಟು ಬಂದಿದ್ದೇನೆ. ಆದರೆ, ಇದೀಗ ಲೋಕನಾಥನ್ ಮದುವೆಗೆ ನಿರಾಕರಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.