Advertisement

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

05:22 PM Mar 17, 2024 | Team Udayavani |

ಒಂದು ಕಾಲವಿತ್ತು. ಪರಿಚಿತರ/ನೆಂಟರ ಊರಿಗೆ ಹೋದಾಗ ಮನೆ ಬಾಗಿಲಲ್ಲಿ ಗುಬ್ಬಚ್ಚಿಗಳ ಚಿಲಿಪಿಲಿ ಸ್ವಾಗತಿಸುತ್ತಿತ್ತು. ಬಂಧುಗಳು ನಮ್ಮನ್ನು ನೋಡಿ ಮಾತನಾಡಿಸುವ ಮೊದಲೇ, ಗುಬ್ಬಿಗಳು ಯೋಗಕ್ಷೇಮ ವಿಚಾರಿಸುತ್ತಿದ್ದವು. ಮನೆಯ ಹೊರಗೆ, ಮನೆಯ ಒಳಗೆ, ಓಣಿಗಳಲ್ಲಿ, ಗಲ್ಲಿಗಳಲ್ಲಿ, ಕಣಗಳಲ್ಲಿ, ಹೊಲಗಳಲ್ಲಿ ಎಲ್ಲಿ ನೋಡಿದರಲ್ಲಿ ಈ ಮಾಯಕದ ಅಮಾಯಕ ಜೀವಿಗಳ ದಂಡೇ ಇರುತ್ತಿತ್ತು. ಯಾರಿಗೂ ಕೇರ್‌ ಮಾಡದೆ ಭರ್ರನೆ ಮನೆಯೊಳಗೆ ಹಾರಿಬಂದು ಕನ್ನಡಿಯ ಮುಂದೆ ಕೂತು ಅದರಲ್ಲಿ ಕಾಣುತ್ತಿದ್ದ ತನ್ನದೇ ಪ್ರತಿಬಿಂಬವನ್ನು ಶತ್ರುವೆಂದು ಬಾವಿಸಿ ಗುಬ್ಬಚ್ಚಿ ಕುಕ್ಕುವುದನ್ನು ನೋಡುವುದರಲ್ಲಿ ಒಂದು ಖುಷಿಯಿತ್ತು.

Advertisement

ಹೊಲದಲ್ಲಿ ರಾಶಿ ಮಾಡುವಾಗ ಕಣದ ಸುತ್ತ ಹಂತಿ ಹಾಡು ಹಾಡುವಂತೆ ಗುಬ್ಬಚ್ಚಿಗಳ ಹಿಂಡು ಬಂದು ಕೂರುತ್ತಿದ್ದವು. ಕಣದ ತುಂಬಾ ಗೋಧಿಯೋ, ಜೋಳವೋ, ಬತ್ತವೋ, ಹೆಸರು ಕಾಳ್ಳೋ, ಅಲಸಂದಿ ಕಾಳ್ಳೋ ಹರವಿದಾಗ ಗುಬ್ಬಿಗಳು ನಾ ಮುಂದು ತಾ ಮುಂದು ಅಂತ ಹರವಿದ ಕಾಳುಗಳ ಮಧ್ಯೆ ಬಂದು, ಹುಳು ಹುಪ್ಪಟೆಗಳ ಹುಡುಕಿ ತಿನ್ನುತ್ತಿದ್ದವು. ಪುಟ್ಟ ಕೊಕ್ಕಿಗೆ ನಿಲುಕಬಹುದಾದ ಕಾಳುಗಳನ್ನ ತಿನ್ನುತ್ತಿದ್ದವು. ಆ ಪುಟ್ಟ ಕೊಕ್ಕಿನಲ್ಲಿ ಹಿಡಿಸುವಷ್ಟು ತುತ್ತು ಹಿಡಿದುಕೊಂಡು ಗೂಡಲ್ಲಿರುವ ಮರಿಗಳಿಗೆ ತಿನ್ನಿಸಲು ಹಾರಿಹೋಗುವ ಚಿತ್ರ ಆಗ ಸಾಮಾನ್ಯವಾಗಿತು.

ಎದೆಯ ಹಾಡು ಕಳೆದುಹೋಗಿದೆ…

ಹಿಂದೆ ಎಲ್ಲಾ ಊರುಗಳಲ್ಲೂ ಮಣ್ಣಿನ ಮನೆಗಳಿದ್ದವು. ಆ ಮನೆಗಳ ಹಂಚಿನ ಅಥವಾ ಛಾವಣಿಯ ಕೆಳಗೋ, ಜಂತಿಗಳ ಸಂದಿಗಳಲ್ಲೋ ನೆಮ್ಮದಿಯಿಂದ ಇದ್ದು, ಮರಿ ಮಾಡಿಕೊಂಡು ತಿಂದುಂಡು ಸುಖವಾಗಿರಲು ಗುಬ್ಬಿಗಳಿಗೆ ಅವಕಾಶವಿತ್ತು. ಆದರೀಗ ಎಲ್ಲವೂ ಸಿಮೆಂಟ್‌ಮಯ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಕೊರೆದರೂ ಬೊಗಸೆ ತಾವು ಸಿಗದ ಅಸಹಾಯಕ ಸ್ಥಿತಿ ಗುಬ್ಬಚ್ಚಿಗಳದ್ದು. ಪರಿಣಾಮ; ಅವು ಈಗ ಮಾಯವಾಗಿವೆ. ಊರ ತುಂಬಾ ಚಿಲಿಪಿಲಿ ಗುಟ್ಟುತ್ತಿದ್ದ ಗುಬ್ಬಚ್ಚಿಗಳು ಎಲ್ಲಿ ಹೋದವು ಎಂದು ಹುಡುಕುವ ವಿಪರ್ಯಾಸಕ್ಕೆ ನಾವಿಂದು ಬಂದಿದ್ದೇವೆ. ನಮ್ಮದೇ ಎದೆಯ ಹಾಡೊಂದು ಕಳೆದುಹೋದ ಖಾಲಿತನ ಇಂದಿನ ಮಕ್ಕಳ ಬಾಲ್ಯವನ್ನ ಆವರಿಸಿದೆ. ಈಗ ಎಲ್ಲಿ ನೋಡಿದರಲ್ಲಿ ಕಾಂಕ್ರೀಟ್‌ ಕಾಡುಗಳು, ಮನೆ ಮನೆಗಳಲ್ಲಿ ಸಿಮೆಂಟ್‌ ಗೋಡೆಗಳು, ಓಣಿಗಳಲ್ಲಿ ಡಿಜೆ ಸೌಂಡು, ಊರ ತುಂಬಾ ಅಸಹನೀಯ ಗದ್ದಲಗಳು. ಹೊಲಗಳಲ್ಲಿ ಕಣಗಳಿಲ್ಲ. ಡಾಂಬರು ರಸ್ತೆಗಳೇ ಕಣಗಳು. ಅಪ್ಪಿತಪ್ಪಿ ಅಲ್ಲೊಂದು ಇಲ್ಲೊಂದು ಗುಬ್ಬಕ್ಕ ಕಂಡರೂ ನಮ್ಮ ಮಕ್ಕಳು ಅದನ್ನು ಕಣ್ಣಲ್ಲಿ ತುಂಬಿಕೊಳ್ಳಲಾರರು, ಏಕೆಂದರೆ ಅವರ ಕಣ್ಣು ಮೊಬೈಲ್‌ನಲ್ಲಿ ನೆಟ್ಟಿವೆ.

ನೋಡಲೂ ಸಿಗುತ್ತಿಲ್ಲ… ಗುಬ್ಬಚ್ಚಿಗಳು ಸಂಘ ಜೀವಿಗಳು. ಮನುಷ್ಯರೊಂದಿಗೆ ಬದುಕು ಹಂಚಿಕೊಳ್ಳುವುದು ಅವುಗಳ ಹಕ್ಕಾಗಿತ್ತು. ಕಾಲ ಸರಿದಂತೆ ನಮ್ಮ ಕಾಳಜಿಗಳು ಬದಲಾದವು ಆದ್ಯತೆಗಳು ಬದಲಾದವು. ಮನೆಯಲ್ಲಿ ಗುಬ್ಬಚ್ಚಿಗಳಿದ್ದರೆ ಚಂದ ಎನ್ನುವ ಮನಸ್ಥಿತಿಯಿಂದ ಬಹುದೂರ ಬಂದ ನಾವು, ಗುಬ್ಬಿಗಳು ನಮಗ್ಯಾಕೆ ಎಂದೆಲ್ಲ ಯೋಚಿಸಿ, ಮನೆಯಲ್ಲಿ ಗುಬ್ಬಿಗಳ ವಾಲ್‌ಪೇಪರ್‌ ಅಂಟಿಸಿಕೊಳ್ಳುವ ಹಂತ ತಲುಪಿದ್ದೇವೆ. ಹೊಲದಲ್ಲಿ ರಂಟೆ ಹೊಡೆಯುವಾಗ ಎತ್ತುಗಳ ಬೆನ್ನ ಮೇಲೆ ಕೂತು ಹೊಲವೆಲ್ಲ ಸುತ್ತುತ್ತಿದ್ದ ಗುಬ್ಬಿಗಳು ಇಂದು ನೋಡಲೂ ಸಿಗುತ್ತಿಲ್ಲ. ಬೆಳೆ ಕುಯಿಲಿಗೆ ಬಂದ ಸಮಯದಲ್ಲಿ ಹೊಲ ಕಾಯಲು ಕವಣಿಯೊಂದಿಗೆ ಬರುತ್ತಿದ್ದ ರೈತ ತೆನೆಯ ಮೇಲೆ ಕೂತ ಗುಬ್ಬಿಗಳಿಗೆ ಕವಣೆ ಬೀಸಿ ಹೆದರಿಸಿ ಕಳುಹಿಸುತ್ತಿದ್ದ. ಆದರೆ, ಇಂದು ಆಧುನಿಕತೆಯ ಬೆನ್ನೇರಿದ ಮನುಷ್ಯ ಕಾಣದ ತರಂಗಗಳ ಸೃಷ್ಟಿಸಿ ಗುಬ್ಬಚ್ಚಿಗಳ ಕುತ್ತಿಗೆ ಹಿಚುಕಿ ಅವುಗಳ ವಂಶಕ್ಕೇ ಕುತ್ತು ತಂದಿದ್ದಾನೆ. ಗ್ಲೋಬಲ್‌ ವಾರ್ಮಿಂಗ್‌ ಎಂಬುದು ಈ ಪುಟ್ಟ ಜೀವಿಗಳ ವಿನಾಶಕ್ಕೆ ನಾಂದಿ ಹಾಡಿದೆ.

Advertisement

ಮನಸ್ಸುಗಳಲ್ಲಿ ಜಾಗ ಕೊಡೋಣ..

ಹಾಗಾದರೆ, ಗುಬ್ಬಚ್ಚಿಗಳ ಮರಳಿ ಮನೆಗೆ ಕರೆತರುವ ದಾರಿಗಳಾವವು, ಅಂದಿರಾ? ಮೊದಲು ನಮ್ಮ ನಮ್ಮ ಮನಸ್ಸುಗಳಲ್ಲಿ ಗುಬ್ಬಿಗಳಿಗೆ ತಾವು ನೀಡಬೇಕು. ಅವುಗಳನ್ನ ನಮ್ಮ ಹೃದಯಕ್ಕೆ ಹತ್ತಿರ ಕರೆದುಕೊಳ್ಳಬೇಕು. ಆಗ ಗುಬ್ಬಚ್ಚಿಗಳ ಕರೆತರುವ ನಮ್ಮ ಪ್ರಯತ್ನಕ್ಕೆ ಬಲ ಬರುತ್ತದೆ. ಗುಬ್ಬಚ್ಚಿಗಳಿಗೆ ಕೃತಕ ಗೂಡು ನಿರ್ಮಾಣ, ನೀರು, ಕಾಳು ಹಾಕುವುದು ಕೇವಲ ತಾಂತ್ರಿಕ ಕೆಲಸ ಮತ್ತು ಅಗತ್ಯ. ಇಂದಿನ ಮಕ್ಕಳಿಗೆ ನಾವು ಗುಬ್ಬಿಗಳ ಗೆಳೆತನ ಕಲಿಸಬೇಕಿದೆ. ಮೊಬೈಲ್‌ ನಾಚೆಗೂ ನಮಗೆ ಅತ್ಯಾನಂದ ನೀಡುವ ಗುಬ್ಬಿಗಳಂಥ ಪಕ್ಷಿಗಳ ಸ್ನೇಹ, ನೋಟ ಅಮೂಲ್ಯವಾದದ್ದು ಎಂಬುದನ್ನು ತಿಳಿಸಿ ಹೇಳಬೇಕಾಗಿದೆ.

ಮಕ್ಕಳ ಧ್ಯಾನವನ್ನು ಮೊಬೈಲ್‌ನಾಚೆ ಎಳೆತಂದು ಗುಬ್ಬಿಚ್ಚಿಗಳ ಸ್ನೇಹದ ಮಾಧುರ್ಯ ಮನಗಾಣುವಂತೆ ಮಾಡಿದರೆ, ಎಲ್ಲಿಯೋ ಹೋಗಿರುವ ಗುಬ್ಬಚ್ಚಿಗಳು ನಮ್ಮೆದೆಯ ತಾವು ಹುಡುಕಿ ಬಂದು ನಮ್ಮ ಅಂಗೈ ಬೊಗಸೆಯಲ್ಲಿ ಬಂದು ಕೂರುವುದು ಕನಸೇನೂ ಅಲ್ಲ.

ಶಾಲೆ ತುಂಬ ಗುಬ್ಬಿಗಳು: ರಾಯಭಾಗ ತಾಲೂಕಿನ ನಿಡಗುಂದಿಯ ಅಂಬೇಡ್ಕರ್‌ ನಗರದಲ್ಲಿರುವ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ಅಪರೂಪದ ಪ್ರಯೋಗ ಮಾಡಿದೆವು. ನಮ್ಮ ಶಾಲೆಯ ಮಕ್ಕಳಿಗೆ ಗುಬ್ಬಿಗಳ ಗೆಳೆತನದ ಸವಿಯನ್ನು ಅನುಭವಕ್ಕೆ ತರುವ ಭಾಗವಾಗಿ 100 ಕೃತಕ ಗುಬ್ಬಿ ಗೂಡುಗಳನ್ನು ತಯಾರು ಮಾಡಿ ಶಾಲೆಯ ಆವರಣದಲ್ಲಿ ಜೋಡಿಸಿದೆವು. ಅವುಗಳಿಗೆ ನಿರ್ಭಯವಾಗಿ ಬದುಕುವ ವಾತಾವರಣ ಸೃಷ್ಟಿಸಿದೆವು. ಸಾಕಷ್ಟು ನೀರು ಮತ್ತು ಕಾಳುಗಳನ್ನು ಇಟ್ಟೆವು. ಸ್ವಲ್ಪ ಸಮಯದಲ್ಲೇ ನಮ್ಮ ಮಕ್ಕಳ ಪ್ರಾಮಾಣಿಕ ಪ್ರೀತಿಯನ್ನು ಅರ್ಥ ಮಾಡಿಕೊಂಡ ಗುಬ್ಬಚ್ಚಿಗಳು ತಮ್ಮ ತಮ್ಮ ಗೂಡುಗಳನ್ನು ಆಯ್ಕೆ ಮಾಡಿಕೊಂಡು ತತ್ತಿ ಇಟ್ಟು ಸಂತಾನಾಭಿವೃದ್ಧಿ ಮಾಡತೊಡಗಿದವು. ನೋಡ ನೋಡುತ್ತಲೇ ಎಲ್ಲ ಗೂಡುಗಳೂ ಭರ್ತಿಯಾದವು. ಈಗ ಗುಬ್ಬಿಗಳ ಆಟ, ಹಾರಾಟ, ಚಿಲಿಪಿಲಿಯನ್ನು ಕಣ್ಣು, ಕಿವಿ, ಮನಸು ತುಂಬಿಕೊಳ್ಳುವ ಭಾಗ್ಯ ನಮ್ಮ ಶಾಲೆಯ ಮಕ್ಕಳದ್ದು. ಇಂದು ನಮ್ಮ ಶಾಲೆಯಲ್ಲಿ 119 ಮಕ್ಕಳು ಮತ್ತು 300ಕ್ಕೂ ಹೆಚ್ಚು ಗುಬ್ಬಿಗಳು ಅಡ್ಮಿಶನ್‌ ಮಾಡಿಸಿವೆ.

-ವೀರಣ್ಣ ಮಡಿವಾಳ

Advertisement

Udayavani is now on Telegram. Click here to join our channel and stay updated with the latest news.

Next