Advertisement
ಒಂದು ದೇಶದ ಅಥವಾ ಸಮುದಾಯವೊಂದರ ಶ್ರೀಮಂತಿಕೆಯನ್ನು ಅದರ ಲಲಿತಕಲೆಗಳ ಮೂಲಕ ಅರಿಯುವುದು ಸುಲಭವಾಗುತ್ತದೆ. ನಮ್ಮ ಭಾರತದ ಲಲಿತಕಲೆಗಳು, ಅದರಲ್ಲೂ ಮುಖ್ಯವಾಗಿ ಸಂಗೀತವು, ಈ ಭಾರತೀಯರಲ್ಲಿ ಭಾರತದಿಂದ ಬರೋಬ್ಬರಿ ನೂರಾ ಎಪ್ಪತ್ತು ವರ್ಷಗಳ ಹಿಂದೆ ಹೊರಬಂದು ತಮ್ಮ ಮೂಲ ಮಣ್ಣಿನ ವಾಸನೆಯಿಂದ ಐದರಿಂದ ಆರು ತಲೆಮಾರುಗಳಷ್ಟು ದೀರ್ಘವಾದ ದಾರಿಯನ್ನು ಸಾಗಿದರೂ ಸಂಸ್ಕೃತಿಯ ಮುಖ್ಯಭೂಮಿಕೆಯಾಗಿ ಮತ್ತು ಮಹತ್ವದ ಗುರುತಾಗಿ ಉಳಿದೊಂಡಿದೆ.
ಕಾಲಕ್ರಮೇಣ ಮೊದಲ ತಲೆಮಾರಿಗೆ ಬಾರದಿದ್ದ ಆಯಾ ದೇಶಗಳ ಭಾಷೆಯನ್ನು ಎರಡನೆಯ ತಲೆಮಾರು ಕಲಿತುಕೊಂಡಿತು. ಮತ್ತು ಹೊಸ ಭಾಷೆಯು ಅಲ್ಲಿನ ಭಾರತೀಯ ಸಮುದಾಯದ ಮೂಲ ಭಾಷೆಯ ಜನಪದ ಗೀತೆಗಳ ಮೇಲೆಯೂ ಪ್ರಭಾವಿಸತೊಡಗಿತು. ಹೀಗೆ ಮೂಲ ಭಾರತೀಯ ಪ್ರಭಾವದ ಸಂಗೀತದ ಹಿನ್ನೆಲೆಯಲ್ಲಿ ಮೂಲ ತಮಿಳಿನ ಅಥವಾ ಭೋಜಪುರಿ ಇತ್ಯಾದಿ ಭಾಷೆಗಳ ಜೊತೆಗೆ ಸ್ಥಳೀಯ ಭಾಷೆಯ ಸಾಲುಗಳು ಸೇರಿ ಹುಟ್ಟಿದ್ದು ಚಟ್ನಿ- Chutney ಎಂಬ ಸಂಗೀತ ಪ್ರಕಾರ! ಮನುಷ್ಯನ ಜಂಗಮ ಸಂಸ್ಕೃತಿಯು ಮಾಡುವ ಅವಘಡಕ್ಕೊಂದು ದೊಡª ಉದಾಹರಣೆ ಚಟ್ನಿ! ಸದ್ಯ ಈ ಸಂಗೀತ ಪ್ರಕಾರವು ಕೆರಿಬಿಯನ್ ದ್ವೀಪ ಸಮೂಹದ ಭಾರತೀಯ ಸಮುದಾಯದಲ್ಲಿ ಮತ್ತು ದಕ್ಷಿಣ ಆಫ್ರಿಕಾದ ನಟಾಲ್ ಪ್ರಾಂತ್ಯದ ಭಾರತೀಯ ಸಮುದಾಯದಲ್ಲಿ ಬಹಳ ಪ್ರಸಿದ್ಧವಾದ ಸಂಗೀತ ಪ್ರಕಾರ. ಒಂದಷ್ಟು ಡಬ್ಬಲ್ ಮೀನಿಂಗಿನ ಇಂಗ್ಲಿಶ್ ಸಾಲುಗಳು, ಸಾಲುಗಳ ಅಂತ್ಯದಲ್ಲಿ ಆಗಾಗ ಬರುವ ಯಾವುದಾದರೂ ಒಂದು ಹಿಂದಿಯ ಅಥವಾ ತಮಿಳಿನ ಸಾಲು ಮತ್ತು ನೂರೈವತ್ತು ವರ್ಷಗಳ ಹಿಂದಿನಂತೆಯೇ ಇಂದೂ ಲಂಗ-ದಾವಣಿ ಉಟ್ಟು ಗಿರಗಿರನೆ ತಿರುಗುತ್ತ ಕುಣಿಯುವ ಹುಡುಗರು, ಹೀಗೆ ಚಟ್ನೀ ಕಾನ್ಸರ್ಟುಗಳು ಮೂಲ ಮಣ್ಣಿನ ಹಳೇ ವಾಸನೆಗೆ ಹೊಸಬಗೆಯ ರಾಪ್ ಮತ್ತು ಹಿಪ್ ಹಾಪ್ ಶೈಲಿಯ ಫ್ಲೇವರನ್ನು ಹಚ್ಚಿ ವಾರಾಂತ್ಯದ ಅಮಲಿನಲ್ಲಿ ಈಗ ರಾತ್ರಿಯಡೀ ನಡೆಯುತ್ತವೆ. ಐವತ್ತಕ್ಕೂ ಹೆಚ್ಚು ಇಂಥ ಬ್ಯಾಂಡುಗಳು ಡರ್ಬನ್‌ನಲ್ಲಿಯೇ ಇ¨ªಾವೆ ಮತ್ತು ಇಂಥ ಬ್ಯಾಂಡುಗಳನ್ನು ನಗಾರಾ ಬ್ಯಾಂಡ್ ಎಂದು ಕರೆಯುತ್ತಾರೆ.
Related Articles
Advertisement
ಡರ್ಬನ್‌ನ ಪ್ರಖ್ಯಾತ ಸಂಗೀತಗಾರರೊಬ್ಬರೊಂದಿಗೆ ಕುಶಾಲಿನ ಸಮಯವನ್ನು ಕಳೆಯುವಾಗ ಅವರು ಹೇಳುತ್ತಿದ್ದರು, “ಈ ಚಟ್ನಿ ಸಂಗೀತವು ನಮ್ಮ ಅಜ್ಜನ ಕಾಲದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಬೇಕಾಗಿತ್ತು. ಈಗ ನಾವು ಬೇಡ ಎಂದರೆ ಹೇಗೆ? ಅವರನ್ನೆಲ್ಲ ಕರೆದು ನಾವು ಸರಳ ವರಸೆಗಳ ಪಾಠ ಹೇಳಲು ಸಾಧ್ಯವಿಲ್ಲ. ಅವರಿಗೂ ಅದು ಬೇಕಾಗಿರುವುದಿಲ್ಲ ಮತ್ತು ಬೇಡ ಕೂಡ. ಒಂದು ಲೆಕ್ಕದಲ್ಲಿ ಹಿಪ್‌ಹಾಪ್ ಕೇಳುವುದಕ್ಕಿಂತ ಚಟ್ನಿ ಹಾಡುಗಳನ್ನು ಕೇಳುವುದೇ ವಾಸಿ!’
ಇದ್ದಕ್ಕಿದ್ದಂತೆ ಮೂಲವನ್ನು ತೊರೆದು ತನ್ನದಲ್ಲದ ನಾಡು ನುಡಿಯನ್ನು ಅಪ್ಪಿಕೊಂಡ ನಂತರ ಕಳೆದುಕೊಳ್ಳುವುದು ಮತ್ತು ಉಳಿಸಿಕೊಳ್ಳುವುದು ಎಂಬುದು ಸಾಮಾನ್ಯವಾಗಿ ಲೆಕ್ಕಾಚಾರಗಳನ್ನು ಮೀರಿದ ತಾಕಲಾಟ. ಇಲ್ಲಿ ಸಂಸ್ಕೃತಿಯು ಉಳಿಯುತ್ತದಾ ಅಥವಾ ಬೆಳೆಯುತ್ತದಾ ಎಂಬ ಲೆಕ್ಕಾಚಾರಕ್ಕಿಂತ ನಾವು ಅದೆಷ್ಟು ಕಳೆದುಕೊಂಡೆವು ಎಂಬ ಕೊರಗೇ ಎದ್ದು ನಿಲ್ಲುತ್ತದೆ ಮತ್ತು ಮೇಲ್ನೋಟಕ್ಕೆ ಇದು ಸರಿ ಅಥವಾ ಇದು ಸರಿಯಲ್ಲ ಎಂಬ ಸಿದ್ಧಾಂತದಂಥ ಮಾತುಗಳನ್ನಾಡುವುದು ಸುಲಭವಾದರೂ ತನ್ನದಲ್ಲದ ನೆಲದಲ್ಲಿ ಅದೂ ಸ್ವಾತಂತ್ರ್ಯಕ್ಕಿಂತ ಮುಂಚಿನ ಆ ಕಾಲಘಟ್ಟದಲ್ಲಿ ಮನುಷ್ಯ ಎಲ್ಲ ರೀತಿಯ ದಬ್ಟಾಳಿಕೆಯ ನಡುವೆ ತನ್ನ ಮೂಲವನ್ನು ಉಳಿಸಿಕೊಳ್ಳುತ್ತಾನೋ ಅಥವಾ ಕಳೆದುಕೊಳ್ಳುತ್ತಾನೋ, ಅವನಂತೂ ಉಳಿದಿ¨ªಾನೆ. ಅವನು ಉಳಿದಿದ್ದರಿಂದ ಅವನ ಯಾವುದೋ ಜೀನ್ ಉಳಿದುಕೊಂಡಿದೆ. ಆ ಜೀನ್ ಅವನ ಘರಾನೆಯ ದಿಕ್ಸೂಚಿಯಷ್ಟೆ. ಒಂದು ಸಂಗೀತದ ಪ್ರಕಾರ ಹುಟ್ಟುವುದು ಸುಲಭದ ಮಾತಲ್ಲ. ನಮ್ಮಲ್ಲಿನ ಘರಾಣೆಗಳಂತೆ ಚಟ್ನೀ ಸಂಗೀತದಲ್ಲೂ ಘರಾಣೆಗಳಿವೆ. 1960ರಲ್ಲಿ ಬದುಕಿದ್ದ ಹ್ಯಾರಿ ಸಿಂಗ್ ಚಟ್ನೀ ಹಾಡುಗಳನ್ನು ಹಾಡುವಾಗ ನಡುವೆ ಸರಗಮ್ ಹಚ್ಚುತ್ತಿದ್ದನಂತೆ! ಅವನ ಕಾಲದವರೆಲ್ಲ ಇಂದಿನ ಚಟ್ನೀ ಹಾಡುಗಾರರನ್ನು ನಿಂದಿಸುತ್ತಾರೆ. ಇದು ಹೀಗಿರಲಿಲ್ಲ ಎಂದು ಕೊರಗುತ್ತಾರೆ. ನಮ್ಮಲ್ಲಿಯೂ ನಾವು ಇದನ್ನೇ ನೋಡುತ್ತೇವಲ್ಲ? ಖಯಾಲ್ ಹಾಡುಗಾರಿಕೆ ಬಂದಾಗ ಅದೂ ಸಂಪೂರ್ಣವಾಗಿ ಹೊಸದಾಗಿತ್ತು. ಅಲ್ಲಿಗಿಂತ ಹಿಂದಿನವರು ಹೊಸ ಬಗೆಯನ್ನು ಅಲ್ಲಿಯೂ ದೂಷಿಸಿದ್ದರು. ಮೂಲ ಕಳೆದುಹೋಗುತ್ತದೆಂದು ಕೊರಗಿದ್ದರು. ನಿಜವಾಗಿ ಗಮನಿಸಿದರೆ ಯಾವುದನ್ನೂ ನಾವು ಕಳೆದುಕೊಂಡಿಲ್ಲ, ಅಡಗಿಸಿಟ್ಟಿದ್ದೇವಷ್ಟೆ. ಹೀಗೆ ಭಾರತದಿಂದ ಬದುಕಿಗಾಗಿ ನೂಕಲ್ಪಟ್ಟ ಅಂದಿನ ಭಾರತೀಯ ಬಡ ಸಮುದಾಯದ ಜನಪದ ಹಾಡುಗಳು ಕಾಲಕ್ರಮೇಣ ಚಟ್ನೀ ಎಂಬ ಸಂಗೀತ ಪ್ರಕಾರವಾಗಿ ಇಂದು ಕೆರಿಬಿಯನ್ ದ್ವೀಪಗಳಲ್ಲಿ, ದಕ್ಷಿಣ ಆಫ್ರಿಕಾದ ನಟಾಲ್ ಪ್ರಾಂತ್ಯದ ಭಾರತೀಯ ಸಂಸ್ಕೃತಿಯಲ್ಲಿ ಹಾಸಿಹೋಗುತ್ತದೆ ಎಂದು ಮದ್ರಾಸಿನ ಬಂದರಿನಲ್ಲಿ ಹಡಗು ಹತ್ತಿದ ಸಂಗೀತ ಬಲ್ಲ ಮೊದಲ ಕೂಲಿಗೆ ನಿಜವಾಗಿಯೂ ಗೊತ್ತಿರಲಿಲ್ಲ !
– ಕಣಾದ ರಾಘವ