Advertisement

ಈ ಅಜ್ಜ ಹೆದರಿಸ್ತಾರೆ…

06:00 AM Aug 10, 2018 | |

ನಿರ್ದೇಶಕ ವೇಮಗಲ್‌ ಜಗನ್ನಾಥ್‌ ಹಿರಿಯ ನಟ ದತ್ತಣ್ಣ ಅವರ ಬಳಿ ಹೋಗಿ “ಅಜ್ಜ’ ಚಿತ್ರದ ಕಥೆ ಹೇಳಿದಾಗ ಮೊದಲು ಅರ್ಥವಾಗಲಿಲ್ಲವಂತೆ. ಆ ನಂತರ ನಿರ್ದೇಶಕರು ಎಲ್ಲವನ್ನು ಸಾವಧಾನವಾಗಿ ವಿವರಿಸಿದಾಗ ಕಥೆ ಹಾಗೂ ಪಾತ್ರ ಎರಡೂ ಇಷ್ಟವಾಯಿತಂತೆ. ಜೊತೆಗೆ ಅವರಿಗೊಂದು ಭಯ ಕೂಡಾ ಕಾಡಿತ್ತಂತೆ. ಅದು ಈ ಪಾತ್ರವನ್ನು ಮಾಡೋಕೆ ಸಾಧ್ಯನಾ ಎಂದು. ಏಕೆಂದರೆ, ದತ್ತಣ್ಣ ಅವರೇ ಹೇಳುವಂತೆ ಅವರಿಗಿದು ಹೊಸ ಜಾನರ್‌ನ ಸಿನಿಮಾ. ಹಾಗಾಗಿ, ಸ್ವಲ್ಪ ಆಲೋಚಿಸಿ ಒಪ್ಪಿಕೊಂಡರಂತೆ. 

Advertisement

“ನನಗೆ ಈ ಜಾನರ್‌ ತುಂಬಾ ಹೊಸದು. ಆ ಕಾರಣದಿಂದಲೂ ನನಗೆ ಈ ಪಾತ್ರ ಮಾಡಬಹುದಾ ಎಂಬ ಯೋಚನೆ ಬಂತು. ನನ್ನ ಕೆರಿಯರ್‌ನಲ್ಲಿ ನಾನು ಈ ತರಹದ ಪಾತ್ರ ಮಾಡಿಲ್ಲ. ನಿರ್ದೇಶಕ ವೇಮಗಲ್‌ ಜಗನ್ನಾಥ್‌ ಇಡೀ ಸಿನಿಮಾವನ್ನು ತುಂಬಾ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ನನ್ನ ಮೊಮ್ಮಗಳಾಗಿ ನಟಿಸಿದ ಬೇಬಿ ಪೃಥ್ವಿ ತುಂಬಾ ಚೆನ್ನಾಗಿ ನಟಿಸಿದ್ದಾಳೆ. ಪ್ರಶಸ್ತಿ ಕೊಡುವವರ ಕಣ್ಣಿಗೆ ಬೀಳುತ್ತಾಳಾ ನೋಡಬೇಕು’ ಎಂದರು. “ಅಜ್ಜ’ ಚಿತ್ರ ಈಗಾಗಲೇ ಸೆನ್ಸಾರ್‌ ಆಗಿ, ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಆದರೆ, ದತ್ತಣ್ಣ ಅವರಿಗೆ “ಎ’ ಅಷ್ಟೇ ಕಂಡಿದೆ. ಸಹಜವಾಗಿಯೇ ಕೊಂಚ ಗಾಬರಿಯಾಗಿದೆ. “ಎ’ ಕೊಡುವಂಥದ್ದು ಈ ಚಿತ್ರದಲ್ಲಿ ಏನಿದೆ ಎಂದು. ವೇದಿಕೆಯಲ್ಲಿ ನೇರ ನಿರ್ದೇಶಕರನ್ನು ಕೇಳಿಬಿಟ್ಟರು ದತ್ತಣ್ಣ. ಆದರೆ, ನಿರ್ದೇಶಕರು, “ಎ’ ಕೊಟ್ಟಿಲ್ಲ, “ಯು/ಎ’ ಎಂದಾಗ ದತ್ತಣ್ಣ ನಿರಾಳರಾದರು. 

ವೇಮಗಲ್‌ ಜಗನ್ನಾಥ್‌ ಈ ಬಾರಿಯೂ ಹಾರರ್‌-ಥ್ರಿಲ್ಲರ್‌ ಸಿನಿಮಾವನ್ನು ಮಾಡಿದ್ದಾರೆ. “ಈ ಚಿತ್ರದಲ್ಲಿ ಸಾಕಷ್ಟು ಸಾಮಾಜಿಕ ಅಂಶಗಳಿವೆ. ಹೊಸ ಅಂಶದೊಂದಿಗೆ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದು, ಗ್ರಾಮೀಣ ಭಾಗದಲ್ಲಿ ಸೇವೆ ಮಾಡಬೇಕೆಂಬ ಆಸೆಯೊಂದಿಗೆ ಹಳ್ಳಿಗೆ ಬರುವ ನಾಲ್ವರು ಮೆಡಿಕಲ್‌ ಸ್ಟೂಡೆಂಟ್ಸ್‌ಗಳ ಸುತ್ತ ಈ ಸಿನಿಮಾ ಸುತ್ತಲಿದೆ. ಆ ಹಳ್ಳಿಗೆ ಅವರು ಬಂದ ನಂತರ ಏನೆಲ್ಲಾ ಘಟನೆಗಳು ನಡೆಯುತ್ತವೆ, ಅದಕ್ಕೆ ಕಾರಣವೇನು ಎಂಬ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ಕೊಟ್ಟರು ವೇಮಗಲ್‌ ಜಗನ್ನಾಥ್‌. ಚಿತ್ರವನ್ನು ಚಿದಾನಂದ್‌ ನಿರ್ಮಿಸಿದ್ದಾರೆ. 

ಚಿತ್ರದಲ್ಲಿ ನಟಿಸಿದ ಬೇಬಿ ಪೃಥ್ವಿ, ಪ್ರವೀಣ್‌, ದೀಪಕ್‌, ಅಶ್ವಿ‌ನಿ, ಮಾಧುರಿ ಕೂಡಾ ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ಸಾಯಿಕಿರಣ್‌ ಸಂಗೀತ ನೀಡಿದ್ದು, ದೊಡ್ಡ ನಿರ್ದೇಶಕರ ಚಿತ್ರದಲ್ಲಿ ಅವಕಾಶ ಸಿಕ್ಕಿದೆ ಎನ್ನುತ್ತಾ ಖುಷಿಯಾದರು. ಇನ್ನು,  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ “ಅಜ್ಜ’ ಚಿತ್ರದ ಆಡಿಯೋ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಟೋಟಲ್‌ ಕನ್ನಡ ಮೂಲಕ “ಅಜ್ಜ’ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next