ಹದಿಹರೆಯವನ್ನು ಮತ್ತೆ ಮೈ ತುಂಬಿಕೊಂಡ ಯುವ ಮನಸುಗಳ ಒಗ್ಗೂಡುವಿಕೆಯ ಮಿಲನ “ಸಮ್ಮಿಲನ’. ಎರಡು ತಿಂಗಳಿಂದ ಈ ಕಾರ್ಯಕ್ರಮಕ್ಕಾಗಿ ಹಳೇ ವಿದ್ಯಾರ್ಥಿಗಳು ಮಾಡಿದ ತಯಾರಿ, ಪಟ್ಟ ಪರಿಶ್ರಮ, ಅದನ್ನು ಮೀರಿದ ಖುಷಿ ಈ ಸಂಭ್ರಮದ ದಿನ ಎಲ್ಲರ ಮೊಗದಲ್ಲಿ ಕಾಣಸಿಕ್ಕಿತ್ತು. ಈ ಸಂಭ್ರಮಕ್ಕೆ ದಿನಕ್ಕೊಂದು ಆಮಂತ್ರಣ ಪತ್ರಿಕೆ ತಯಾರಾಗುತ್ತಿತ್ತು – ಎಲ್ಲ ಪ್ರಾಕ್ತನ ವಿದ್ಯಾರ್ಥಿಗಳ ವಾಟ್ಸಾಪ್ ಸ್ಟೇಟಸ್‌ನಲ್ಲೂ ರಾರಾಜಿಸುತ್ತಿತ್ತು. ಈ ಸಂಭ್ರಮದ ದಿನಕ್ಕಾಗಿ ಎಲ್ಲರ ಕುತೂಹಲ ಅಂದೇ ಆರಂಭವಾಗಿತ್ತು.
ಅಂದು ಬೆಳಗ್ಗೆ ಅಂದ ಚಂದದ ಉಡುಗೆ ತೊಟ್ಟು ಪ್ರಾಕ್ತನ ವಿದ್ಯಾರ್ಥಿಗಳು ಬರುತಿದ್ದರೆ ನೋಡಲು ಕಣ್ಣಿಗೆ ಹಬ್ಬ. ಮನೆಗೆ ಮಕ್ಕಳು ಬರುವುದನ್ನು ತಂದೆ ತಾಯಿಯರು ಕಾಯುವಂತೆ ಕಾಲೇಜಿನ ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳನ್ನು ಸ್ವಾಗತಿಸಲು ದಾರಿ ಕಾಯುತ್ತಿದ್ದರು. ತಾವು ಕಲಿಸಿದ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆತರೆ ಎಲ್ಲರಿಗಿಂತ ಹೆಚ್ಚು ಖುಷಿ ಪಡುವವರು ಅವರ ಶಿಕ್ಷಕರೇ. ಆ ಖುಷಿ ಎಲ್ಲ ಉಪನ್ಯಾಸಕರ ಮುಖದಲ್ಲೂ ಮಿಂಚುತ್ತಿತ್ತು.
ತಮಗೆ ಮಾರ್ಗದರ್ಶನ ನೀಡುತ್ತಿದ್ದ ಎಲ್ಲ ಉಪನ್ಯಾಸಕರನ್ನು ನೋಡಿದ ಆ ಹಳೆ ವಿದ್ಯಾರ್ಥಿಗಳ ಮನಸು ಮಳೆಯಾಯಿತು. ಅದೆಷ್ಟೋ ವರ್ಷದ ಅನಂತರ ತಮ್ಮ ಉಪನ್ಯಾಸಕರನ್ನು, ಕಾಲೇಜನ್ನು ನೋಡಿ ನಿಷ್ಕಲ್ಮಶ ಮನಸು ತುಂಬಿ ಹೋಯಿತು. ತಾವೇ ಆಡಿ, ಹಾಡಿ, ಕುಣಿದು ಕುಪ್ಪಳಿಸಿದ ವೇದಿಕೆಗೆ ಮತ್ತೂಮ್ಮೆ ಬಂದಾಗ ಅವರಲ್ಲಾದ ಖುಷಿ ಮಾತಿಗೆ ನಿಲುಕದ ಅನುಭವ.
ಸಭಾ ಕಾರ್ಯಕ್ರಮ ಮುಗಿದ ಅನಂತರ ಶುರುವಾಯಿತು ನೋಡಿ ನಿಜವಾದ ಸಂಭ್ರಮ. ವೇದಿಕೆ ಮೇಲೆ ಮತ್ತೂಮ್ಮೆ ಹಾಡಿ ಕುಣಿಯಲು ಬಂದರು ಕಾಲೇಜಿನ ಪೂರ್ವ ಸಾಂಸ್ಕೃತಿಕ ಪ್ರತಿಭೆಗಳು. ನೃತ್ಯ, ಯಕ್ಷಗಾನ, ಕಥಕ್, ಹಾಡು, ನಾಟಕ ಒಂದಾ ಎರಡಾ? ವೃತ್ತಿ ಬದುಕಿನ ಜಂಜಾಟ ಬದಿಗಿಟ್ಟು ಮತ್ತೆ ವಿದ್ಯಾರ್ಥಿ ಜೀವನಕ್ಕೆ ಮರಳಿದ ಸಂಭ್ರಮ ಎಲ್ಲರಲ್ಲಿ.
ಕಾಲೇಜು ಮುಗಿದು ಅದೆಷ್ಟೇ ವರ್ಷ ಉರುಳಿದರೂ, ಈಗ ಯಾವುದೇ ವೃತ್ತಿ ಮಾಡುತ್ತಿದ್ದರೂ ಅದನ್ನೆಲ್ಲ ಒಂದು ದಿನದ ಮಟ್ಟಿಗೆ ಬದಿಗೊತ್ತಿ ಬಂದು ಸೇರಿದ್ದರು ಎಲ್ಲರೂ. ತಮ್ಮ ಸ್ನೇಹಿತರ ಜತೆ ಕಾಲೇಜಿನಲ್ಲಿ ಕಳೆದ ಪ್ರತೀ ಕ್ಷಣಗಳನ್ನು ಮೆಲುಕು ಹಾಕುತ್ತಾ, ತಾವು ಓದಿದ ತರಗತಿ ಕೊಠಡಿಗೆ ಹೋಗಿ ಒಂದೆರಡು ಕ್ಷಣ ಕಳೆದು ಬಂದರು. ಅದೆಷ್ಟೋ ವರ್ಷದ ಅನಂತರ ಮತ್ತೆ ತಮ್ಮ ಸ್ನೇಹಿತರ, ಉಪನ್ಯಾಸಕರ, ಜೂನಿಯರ್, ಸೀನಿಯರ್ನ ಬೇಟಿಯಾಗಿ ತಮ್ಮ ಅಮೂಲ್ಯ ಸಮಯವನ್ನು ಎಲ್ಲರೊಂದಿಗೆ ಸಂತಸದಿಂದ ಕಳೆದರು.
ಈ ಬಿಡುವಿಲ್ಲದ ಸಮಯದಲ್ಲಿ ಒಂದು ದಿನ ಬಿಡುವು ಮಾಡಿಕೊಂಡು ಬಂದು ಎಲ್ಲರೂ ಮತ್ತೆ ಮಗುವಾದ ದಿನ ಎಲ್ಲರಿಗೂ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ.
ರಶ್ಮಿ ಉಡುಪ
ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ