Advertisement

ಹಳೇ ಜಾಗ; ಹೊಸ ಕಥೆ

06:00 AM Nov 17, 2017 | Team Udayavani |

ರಕ್ಷಿತ್‌ ಶೆಟ್ಟಿ ಮತ್ತು ಪುಷ್ಕರ್‌ಗೆ ಆ ಜಾಗ ಲಕ್ಕಿ ಅಂತ ಕಾಣುತ್ತದೆ. ಈ ಹಿಂದೆ “ಕಿರಿಕ್‌ ಪಾರ್ಟಿ’ ಚಿತ್ರದ ಮುಹೂರ್ತ ಅಲ್ಲೇ ಆಗಿತ್ತು. “ಹಂಬಲ್‌ ಪೊಲಿಟೀಶಿಯನ್‌ ನೋಗರಾಜ್‌’ ಚಿತ್ರವೂ ಅದೇ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಶುರುವಾಗಿತ್ತು. ಈಗ ಅವರಿಬ್ಬರ “ಕಥೆಯೊಂದು ಶುರುವಾಗಿದೆ’ ಎಂಬ ಚಿತ್ರಕ್ಕೂ ಅಲ್ಲೇ ಮುಹೂರ್ತ ಫಿಕ್ಸ್‌ ಆಗಿತ್ತು. ಬರೀ ಚಿತ್ರದ ಮುಹೂರ್ತವಷ್ಟೇ ಅಲ್ಲ, ಆ ಎರಡು ಚಿತ್ರಗಳ ಪತ್ರಿಕಾಗೋಷ್ಠಿ ನಡೆದ ಸ್ಥಳದಲ್ಲೇ ನಡೆಯಿತು.

Advertisement

ಮೊದಲು ಮಾತನಾಡಿದವರು ನಿರ್ದೇಶಕ ಸನ್ನ ಹೆಗ್ಡೆ. ಹೆಸರು ವಿಚಿತ್ರವಾಗಿದೆ ಅಂತ ಎಲ್ಲರೂ ಅಂದುಕೊಳ್ಳುವಷ್ಟರಲ್ಲೇ, ತಮ್ಮ ಪೂರ್ತಿ ಹೆಸರು ಪ್ರಸನ್ನ ಹೆಗ್ಡೆ ಎಂದು ಅವರು ಪರಿಚಯಿಸಿಕೊಂಡರು. ಕಾಸರಗೋಡಿನ ಸನ್ನ, ಇದಕ್ಕೂ ಮುನ್ನ ಮಲಯಾಳಂನಲ್ಲೊಂದು ಚಿತ್ರ ನಿರ್ದೇಶಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ. “ಇದು ಸಂಬಂಧಗಳ ಕುರಿತ ಕಥೆ. ಮೂರು ಜೋಡಿಗಳ, ನಾಲ್ಕು ದಿನಗಳ ಕಥೆ ಇದು. ಇಲ್ಲಿ ಮೂರು ಜೋಡಿಗಳು ಮೂರು ತಲೆಮಾರುಗಳನ್ನು ಪ್ರತಿನಿಧಿಸುತ್ತವೆ. ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಹಲವು ಮಜಲುಗಳನ್ನು ದಾಟಿ ಹೋಗುತ್ತಾನೆ. ಅಂತಹ ಮಜಲುಗಳ ಮೂರು ಮಜಲುಗಳ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ. ಮೂರು ಮಜಲು ಎನ್ನುವುದಕ್ಕಿಂತ ಮೂರು ತಲೆಮಾರುಗಳ ಕಥೆ ಇದೆ. ಒಂದು ತಲೆಮಾರು 20ರ ವಯಸ್ಸಿನದ್ದು. ಇನ್ನೊಂದು 30ರದ್ದು. ಮೂರನೆಯದ್ದು 60ರದ್ದು. ಈ ಮೂರು ತಲೆಮಾರುಗಳ ಕಥೆ ಮತ್ತು ಯೋಚನೆಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ಮೂರು ತಲೆಮಾರುಗಳ ಕುರಿತಾದ ಕಥೆಗಳು ಬಂದಿವೆಯಲ್ಲಾ ಎಂಬ ಪ್ರಶ್ನೆ ಎದುರಾಯಿತು. 
ಈ ವಿಷಯವನ್ನು ಸನ್ನ ಹೆಗ್ಡೆ ಸಹ ಕೇಳಿದ್ದಾರಂತೆ. ಆದರೆ, ಇದು ಬೇರೆ ತರಹ ಇರುತ್ತದೆ ಎಂದರವರು. “ಇದು ಒಂದೇ ಕುಟುಂಬದ ಕಥೆಯಲ್ಲ. ಬೇರೆ ಬೇರೆ ಕುಟುಂಬಗಳ, ಹಿನ್ನೆಲೆಯ ಕಥೆ. 20ರ ತಲೆಮಾರಿನವರಾಗಿ ಅಶ್ವಿ‌ನ್‌ ಮತ್ತು ಶ್ರೇಯಾ ಆಂಚನ್‌ ನಟಿಸುತ್ತಿದ್ದಾರೆ. 30ರ ತಲೆಮಾರಿನವರಾಗಿ ದಿಗಂತ್‌ ಮತ್ತು ಪೂಜಾ ದೇವೇರಿಯಾ ಇದ್ದಾರೆ. 60ರ ತಲೆಮಾರಿನವರಾಗಿ ಬಾಬು ಹಿರಣ್ಣಯ್ಯ ಮತ್ತು ಅರುಣಾ ಬಾಲರಾಜ್‌ ಇದ್ದಾರೆ. ಮೂರು ಹಂತಗಳಲ್ಲಿ ಚಿತ್ರದ ಚಿತ್ರೀಕರಣ ಮಾಡುವ ಯೋಚನೆ ಇದೆ’ ಎಂದು ತಮ್ಮ ಯೋಚನೆ ಬಿಚ್ಚಿಟ್ಟರು ಸನ್ನ ಹೆಗ್ಡೆ.

“ಕಥೆಯೊಂದು ಶುರುವಾಗಿದೆ’ ಚಿತ್ರದ ಕಥೆ ಕೇಳುತ್ತಿದ್ದಂತೆಯೇ ನಾಲ್ಕು ಬಾರಿ ಒಳಗೇ ಕಣ್ಣೀರು ಹಾಕಿಕೊಂಡರಂತೆ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ರಕ್ಷಿತ್‌ ಶೆಟ್ಟಿ. “ಪ್ರತಿಯೊಬ್ಬರಿಗೂ ರಿಲೇಟ್‌ ಆಗುವಂತಹ ಕಥೆ ಮಾಡಿಕೊಂಡಿದ್ದಾರೆ ಸನ್ನ. ಚಿತ್ರದಲ್ಲಿ ಕೆಲವು ಅದ್ಭುತ ಎನಿಸುವಂತಹ ಕ್ಷಣಗಳಿವೆ. ಸಾಮಾನ್ಯವಾಗಿ ಒಂದು ಚಿತ್ರದಲ್ಲಿ ನಾಲ್ಕಾದರೂ ಒಳ್ಳೆಯ ಕ್ಷಣಗಳು ಸಿಕ್ಕರೆ ಸಾಕು ಎನ್ನುತ್ತೇವೆ. ಇದರಲ್ಲಿ ಹತ್ತಿವೆ. ಒಂದೊಳ್ಳೆಯ ಸಿನಿಮಾ ಆಗುತ್ತೆ ಎಂಬ ನಂಬಿಕೆ ಇದೆ’ ಎಂದರು. ಇನ್ನು ಈ ಚಿತ್ರದಲ್ಲಿ 30ರ ಯುವಕನ ಪಾತ್ರದಲ್ಲಿ ದಿಗಂತ್‌ ಕಾಣಿಸಿಕೊಳ್ಳುತ್ತಿದ್ದಾರೆ. “ನಮ್ಮದೇ ಗೊಂದಲದ ತಲೆಮಾರು.

ಭವಿಷ್ಯ ಗೊತ್ತಿರುವುದಿಲ್ಲ. ಈ ಮಧ್ಯೆ ಪ್ರೀತಿ, ಮದುವೆ, ಕೆಲಸಗಳ ಗೊಂದಲದಲ್ಲಿ ಏನೆಲ್ಲಾ ಕಷ್ಟಪಡುತ್ತೀವಿ ಎನ್ನುವ ಕಥೆ ಇದು. ಈ ಚಿತ್ರದಲ್ಲಿ ನಾನೊಂದು ರೆಸಾರ್ಟ್‌ ನಡೆಸುತ್ತಿರುತ್ತೀನಿ’ ಎಂದಷ್ಟೇ ಹೇಳಿ ಸುಮ್ಮನಾದರು ದಿಗಂತ್‌.

Advertisement

ಇನ್ನು ಈ ಚಿತ್ರವನ್ನು, ಗೆದ್ದರೆ ಲಾಭ, ಸೋತರೆ ಸ್ವಲ್ಪ ನಷ್ಟ ತತ್ವದಡಿಗೆ ನಿರ್ಮಿಸ ಲಾಗುತ್ತಿದೆ ಎಂದರು ಪುಷ್ಕರ್‌. “ಇಲ್ಲಿ ಎಲ್ಲರೂ ಪಾಟ್ನìರ್‌ಗಳೇ. ಎಲ್ಲರೂ ಅವರವರ ಕೆಲಸಕ್ಕೆ ತಕ್ಕಂತೆ ಪಾಟ್ನìರ್‌ಗಳಾಗಿದ್ದಾರೆ. ಚಿತ್ರದಲ್ಲಿ ಎಷ್ಟು ಲಾಭ ಬರುತ್ತದೋ ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳ ಲಾಗುತ್ತದೆ. ಇನ್ನು ಸೋತರೆ ಕಡಿಮೆ ಹಣ ಸಂದಾಯವಾಗುತ್ತದೆ. “ಕಿರಿಕ್‌ ಪಾರ್ಟಿ’ ಸಹ ಇದೇ ತತ್ವದಲ್ಲಿ ಮಾಡಲಾಗಿತ್ತು. ಕೊನೆಗೆ ಲೈಟ್‌ಮ್ಯಾನ್‌ಗಳಿಂದ ಹಿಡಿದು ಎಲ್ಲರಿಗೂ ಲಾಭ ತಲುಪಿಸಿದ್ದೇವೆ. ಈಗ ಈ ಚಿತ್ರದಲ್ಲೂ ಅಂಥದ್ದೊಂದು ಪ್ರಯತ್ನ ಮಾಡುತ್ತಿದ್ದೇವೆ’ ಎಂದರು ಪುಷ್ಕರ್‌.

ಪತ್ರಿಕಾಗೋಷ್ಠಿಯಲ್ಲಿ ಅಶ್ವಿ‌ನ್‌, ಶ್ರೇಯಾ ಆಂಚನ್‌, ಪೂಜಾ ದೇವೇರಿಯಾ, ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್‌ ಮುಂತಾದವರು ಇದ್ದರು. ಎಲ್ಲರೂ ತಮ್ಮ ಪಾತ್ರಗಳ ಬಗ್ಗೆ ನಾಲ್ಕು ಮಾತಾಡಿದರು.

– ಚೇತನ್ ನಾಡಿಗೇರ್

Advertisement

Udayavani is now on Telegram. Click here to join our channel and stay updated with the latest news.

Next