ಬಸವಕಲ್ಯಾಣ: ರಸ್ತೆ ಪಕ್ಕದ ಮತ್ತು ಗ್ರಾಮದ ಸಮೀಪಲ್ಲಿರುವ ಹೊಲದಲ್ಲಿನ ಬೆಳೆಗಳನ್ನು ಜನರು ಹಾಗೂ ಪ್ರಾಣಿಗಳಿಂದ ರಕ್ಷಿಸಲು ರೈತರು ವಿದ್ಯುತ್ ತಂತಿ ಅಥವಾ ಮುಳ್ಳಿನ ಬೇಲಿ ಹಾಕುವುದು ಸಾಮಾನ್ಯ. ಆದರೆ ಬಸವಕಲ್ಯಾಣ ತಾಲೂಕಿನ ರೈತರು ಮನೆಯಲ್ಲಿನ ಹಳೆ ಸೀರೆಗಳನ್ನು ಬಳಸಿ ಬೆಳೆ ರಕ್ಷಣೆ ಮಾಡುತ್ತಿದ್ದಾರೆ!
ತಾಲೂಕಿನ ವಿವಿಧೆಡೆ ರೈತರು ಬೆಳೆದ ಕಬ್ಬು, ಬಿಳಿಜೋಳ, ಶುಂಠಿಯಂತಹ ಬೆಳೆ ರಕ್ಷಣಗೆ ಹೊಲದ ವ್ಯಾಪ್ತಿಯ ಸುತ್ತ ಮೂರು-ನಾಲ್ಕು ಅಡಿಗೆ ಒಂದೊಂದು ಕಟ್ಟಿಗೆ ನೆಟ್ಟು, ಅದಕ್ಕೆ ಕಬ್ಬಿಣದ ತಂತಿ ಎಳೆದು, ಹಳೆ ಸೀರೆ ಕಟ್ಟುವ ಮೂಲಕ ಬೇಲಿ ನಿರ್ಮಿಸಿದ್ದಾರೆ. ಈ ಮೂಲಕ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.
ಜೋರಾಗಿ ಗಾಳಿ ಬೀಸಿದಾಗ ಸೀರೆಯ ಬಟ್ಟೆ ಪಟಾ ಪಟಾ ಎಂದು ಶಬ್ದ ಮಾಡುವುದರಿಂದ, ಹೊಲದಲ್ಲಿ ಯಾರೋ ಕೆಲಸ ಮಾಡುತ್ತಿದ್ದಾರೆ, ಯಾರೋ ಇದ್ದಾರೆ ಎಂದು ತಿಳಿದು ರಾತ್ರಿ ವೇಳೆ ಪ್ರಾಣಿಗಳು ಬೆಳೆ ಹಾಳು ಮಾಡುವುದಾಗಲಿ ಅಥವಾ ಒಳಗೆ ನುಗ್ಗುವುದಾಗಲಿ ಮಾಡುವುದಿಲ್ಲ.
ಅಲ್ಲದೇ, ರಸ್ತೆ ಪಕ್ಕದಲ್ಲಿ ಮತ್ತು ಗ್ರಾಮದ ಸಮೀಪ ಇರುವ ಹೊಲದಲ್ಲಿನ ಕಬ್ಬು ಕೀಳಲು ಜನರು ಹೋಗುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಕೆಲ ರೈತರು ಬೆಳೆಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಅನವಶ್ಯಕವಾಗಿ ಹಣ ಖರ್ಚು ಮಾಡುತ್ತಾರೆ. ಆದರೆ ಅದನ್ನು ಬಿಟ್ಟು ಇಂಥಹ ಪ್ರಯೋಗ ಮಾಡಬೇಕು. ಇದರಿಂದ ಸಮಯ ಹಾಗೂ ಹಣವೂ ಉಳಿಯುತ್ತದೆ ಎಂಬುದು ಇಲ್ಲಿನ ರೈತರ ನಂಬಿಕೆಯಾಗಿದೆ.
ಮನೆಯಲ್ಲಿ ಕೆಲಸಕ್ಕೆ ಬಾರದೆ ಬಿದ್ದಿರುವ ಸೀರೆಗಳನ್ನು ಉಪಯೋಗಿಸಿ, ಕಡಿಮೆ ಖರ್ಚಿನಲ್ಲಿ ಬೆಳೆಗಳನ್ನು ರಕ್ಷಣೆ ಮಾಡುವುದು ಉತ್ತಮ ಮಾರ್ಗವಾಗಿದೆ ಎಂದು ರೈತ ಸತೀಶ ಹೇಳುತ್ತಾರೆ. ಹೀಗೆ ಕಡಿಮೆ ವೆಚ್ಚದಲ್ಲಿ ಬೆಳೆ ರಕ್ಷಣೆಯ ದಾರಿ ಕಂಡುಕೊಂಡಿರುವುದು ಎಲ್ಲ ರೈತರಿಗೆ ಮಾದರಿಯಾಗಿದೆ ಎನ್ನಬಹುದು.
ವೀರಾರೆಡ್ಡಿ ಆರ್.ಎಸ್.