Advertisement

ಹಳೇ ಉದ್ದೇಶ; ಹೊಸ ಉದ್ದಿಶ್ಯ

05:00 PM Aug 31, 2018 | |

ಇದ್ದಕ್ಕಿದ್ದಂತೆ ಅದೊಂದು ರಾತ್ರಿ ಮೈಸೂರಿನ ಮೃಗಾಲಯದಲ್ಲಿ ಪ್ರಾಣಿಗಳು ಘೀಳಿಡುವುದಕ್ಕೆ ಪ್ರಾರಂಭ ಮಾಡುತ್ತವೆ. ಕೆಲವೇ ನಿಮಿಷಗಳ ಅಂತರದಲ್ಲಿ ಅದೆಷ್ಟೋ ಪ್ರಾಣಿಗಳು ಇದ್ದಕ್ಕಿದ್ದಂತೆ ಸತ್ತು ಬಿದ್ದಿರುತ್ತವೆ. ಅದಾಗಿ ಎರಡ್ಮೂರು ದಿನಗಳಲ್ಲಿ ಒಬ್ಬ ವಾಟರ್‌ ಟ್ಯಾಂಕ್‌ ಮೇಲಿನಿಂದ ಬಿದ್ದು ಹೆಣವಾಗಿರುತ್ತಾನೆ. ಅದೇ ತರಹ ಒಂದೇ ಸಮಯದಲ್ಲಿ ಅಮ್ಮ-ಮಗಳು ಬೇರೆ ಬೇರೆ ಜಾಗಗಳಲ್ಲಿ ವಿಚಿತ್ರವಾಗಿ ಸತ್ತು ಬಿದ್ದಿರುತ್ತಾರೆ.

Advertisement

ಮೇಲ್ನೋಟಕ್ಕೆ ನೋಡಿದರೆ, ಮೃಗಾಲಯದಲ್ಲಿ ಪ್ರಾಣಿಗಳು ಸಾಯುವುದಕ್ಕೂ, ಇನ್ನೆಲ್ಲೋ ಬೇರೆ ಯಾರೋ ಜೀವ ಕಳೆದುಕೊಳ್ಳುವುದಕ್ಕೂ ಸಂಬಂಧ ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಆದರೆ, ಇದೆಲ್ಲದಕ್ಕೂ ಒಂದು ವಿಚಿತ್ರ ಸಂಬಂಧವಿದೆ. ಆ ಸಂಬಂಧ ಏನು ಎಂಬ ಕುತೂಹಲವಿದ್ದರೆ “ಉದ್ದಿಶ್ಯ’ ನೋಡಬಹುದು. “ಉದ್ದಿಶ್ಯ’ ಚಿತ್ರದ ಕಥೆಯೇನು ಎಂದು ಒಂದೇ ಸಾಲಿನಲ್ಲಿ ಹೇಳಿ ಮುಗಿಸುವುದಕ್ಕೆ ಕಷ್ಟ. ಏಕೆಂದರೆ, ಇಲ್ಲಿ ಹಲವು ತಿರುವುಗಳಿವೆ, ಹಲವು ವಿಚಿತ್ರಗಳಿವೆ.

ಮೇಲಾಗಿ 16 ವರ್ಷಗಳ ಅಂತರದಲ್ಲಿ ಕಥೆ ನಡೆಯುತ್ತಿದೆ. ಚಿತ್ರ ಪ್ರಾರಂಭವಾಗುವುದು ವರ್ತಮಾನದಲ್ಲಾದರೂ, 16 ವರ್ಷಗಳ ಹಿಂದಿನ ಫ್ಲಾಶ್‌ಬ್ಯಾಕ್‌ಗೆ ಜಾರುತ್ತದೆ. ಅಲ್ಲಿಂದ ಮತ್ತೆ ವರ್ತಮಾನಕ್ಕೆ ಬರುತ್ತದೆ. ಹಾಗಾಗಿ ಚಿತ್ರದ ಕಥೆಯನ್ನು ಸರಳವಾಗಿ ಹೇಳುವುದಕ್ಕೆ ಕಷ್ಟ. ಹಾಗಂತ ಇದು ತೀರಾ ಹೊಸದಾದ ಕಥೆ ಎನ್ನುವುದು ತಪ್ಪಾಗುತ್ತದೆ. ಸೈತಾನನನ್ನು ಪೂಜಿಸುವ ಮತ್ತು ಅಮರನಾಗಬೇಕು ಎಂಬ ಹಪಾಹಪಿ ಇರುವ ಮನುಷ್ಯನೊಬ್ಬ, ಆ ನಿಟ್ಟಿನಲ್ಲಿ ಒಂದು ದೊಡ್ಡ ಪ್ಲಾನ್‌ ಹಾಕುತ್ತಾನೆ.

ಆದರೆ, ಅವನ ಪ್ಲಾನ್‌ ಅರ್ಧದಲ್ಲೇ ಫೇಲ್‌ ಆಗುತ್ತದೆ. ಅವನ ಆತ್ಮ ಕೊನೆಗೆ ಸೇಡು ತೀರಿಸಿಕೊಳ್ಳುವುದಕ್ಕೆ ಮುಂದಾಗುತ್ತದೆ. ಹಾಗಾಗಿ ಇದು ಬರೀ ಸಸ್ಪೆನ್ಸ್‌ ಥ್ರಿಲ್ಲರ್‌ ಅಷ್ಟೇ ಅಲ್ಲ. ಹಾರರ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಎನ್ನಬಹುದು. ಆತ್ಮವೊಂದು ಸೇಡು ತೀರಿಸಿಕೊಳ್ಳುವುದಕ್ಕೆ ಬರುವ ಕಥೆಗಳು ಇದುವರೆಗೂ ಹಲವಾರು ಬಂದಿದೆ. ಒಂದೇ ವ್ಯತ್ಯಾಸವೆಂದರೆ, ಇಲ್ಲಿ ಮಂತ್ರವಾದಿಯ ಬದಲು ಫಾದರ್‌ ಬರುತ್ತಾರೆ. ಜೊತೆಗೆ ಒಬ್ಬರು ಎಕ್ಸಾರ್ಸಿಸ್ಟ್‌ನ ಕರೆದುಕೊಂಡು ಬರುತ್ತಾರೆ.

ಅವರು ತಮ್ಮದೇ ರೀತಿಯಲ್ಲಿ ಆತ್ಮಕ್ಕೆ ದಿಗ್ಬಂಧನ ಹಾಕುತ್ತಾರೆ ಎನ್ನುವುದು ಬಿಟ್ಟರೆ ಹೊಸದೇನಿಲ್ಲ. ಮಿಕ್ಕಂತೆ ಒಂದು ಹಾರರ್‌ ಚಿತ್ರದಲ್ಲಿರುವ ಎಲ್ಲಾ ಅಂಶಗಳು, ಸಸ್ಪೆನ್ಸ್‌ ಥ್ರಿಲ್ಲರ್‌ನಲ್ಲಿರಬೇಕಾದ ಟ್ವಿಸ್ಟ್‌ಗಳು ಈ ಚಿತ್ರದಲ್ಲೂ ಮುಂದುವರೆದಿವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಇವನ್ನೆಲ್ಲಾ ಸಾಕಷ್ಟು ನೋಡಿರುವ ಪ್ರೇಕ್ಷಕರಿಗೆ ಇದು ಹೊಸದು ಎನಿಸುವುದು ಕಷ್ಟ. ಆದರೂ ಹೊಸಬರೇ ಸೇರಿ ಮಾಡಿರುವ ಪ್ರಯತ್ನ ಎಂಬ ವಿಷಯವನ್ನು ಗಣನೆಗೆ ತೆಗೆದುಕೊಂಡು ಚಿತ್ರ ನೋಡಿ ಹೊರಬರಬಹುದು.

Advertisement

ಹೊರಬಂದ ನಂತರ ಕಾಡುವ, ಯೋಚಿಸುವ, ಮನರಂಜಿಸುವ ಅಥವಾ ನೆನಪಿಡಬಹುದಾದ ಅಂಶಗಳು ಸಿಗುವುದು ಕಡಿಮೆಯೇ. ಹೇಮಂತ್‌ ಕೃಷ್ಣ ಅವರು ಚಿತ್ರಕಥೆ ಬರೆಯುವುದರ ಜೊತೆಗೆ ನಟನೆ ಮಾಡಿಕೊಂಡು, ನಿರ್ದೇಶನ, ನಿರ್ಮಾಣ ಮಾಡಿದ್ದಾರೆ. ಹಲವು ಜವಾಬ್ದಾರಿಗಳ ಹೊರೆ ಅವರ ಮುಖದಲ್ಲಿ ಕಾಣುತ್ತದೆ. ಸೈತಾನನನ್ನು ಆರಾಧಿಸುವ ಪಾತ್ರದಲ್ಲಿ ವಿಜಯ್‌ ಕೌಂಡಿನ್ಯ ಮತ್ತು ಎಕ್ಸಾರ್ಸಿಸ್ಟ್‌ ಪಾತ್ರದಲ್ಲಿ ಅನಂತವೇಲು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದಲ್ಲಿ ಹಾಡುಗಳಿಲ್ಲ. ಛಾಯಾಗ್ರಹಣದಲ್ಲಿ ವಿಶೇಷವಿಲ್ಲ.

ಚಿತ್ರ: ಉದ್ದಿಶ್ಯ
ನಿರ್ದೇಶನ: ಹೇಮಂತ್‌ ಕೃಷ್ಣ
ನಿರ್ಮಾಣ: ಹೇಮಂತ್‌ ಕೃಷ್ಣ
ತಾರಾಗಣ: ಹೇಮಂತ್‌, ಅರ್ಚನಾ ಗಾಯಕ್ವಾಡ್‌, ಅಕ್ಷತಾ, ಅನಂತವೇಲು, ಅಶ್ವತ್ಥ್ ನಾರಾಯಣ್‌, ವಿಜಯ್‌ ಕೌಂಡಿನ್ಯ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next