Advertisement

ಹಳೆಯ ಹಳಿಗೆ ಬಂದ ಈರುಳ್ಳಿ ದರ

02:03 AM Feb 03, 2020 | Sriram |

ಮಂಗಳೂರು: ಕಳೆದ ಸುಮಾರು 5 ತಿಂಗಳ ಅವಧಿಯಲ್ಲಿ ಹಲವಾರು ಏರಿಳಿತಗಳನ್ನು ಕಂಡು, ಗೃಹಿಣಿಯರ ಕಣ್ಣಲ್ಲಿ ನೀರು ಬರಿಸಿದ್ದ ಈರುಳ್ಳಿ ದರವು ಇದೀಗ ಯಥಾಸ್ಥಿತಿಗೆ ಬಂದಿದೆ.

Advertisement

2019ರ ಆಗಸ್ಟ್‌ ತಿಂಗಳಲ್ಲಿ ಈರುಳ್ಳಿ ದರ 30- 35 ರೂ. ಇದ್ದು, ಈಗ ಅದೇ ಹಂತದ ದರಕ್ಕೆ ಇಳಿಕೆಯಾಗಿದೆ. ಫೆ. 2ರಂದು ಮಂಗಳೂರಿನ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಈರುಳ್ಳಿ ದರ ಕೆ.ಜಿ.ಗೆ 36 ರೂ. ಇತ್ತು.

ಹೊಸ ಈರುಳ್ಳಿ ಇದೀಗ ಧಾರಾಳವಾಗಿ ಆವಕವಾಗುತ್ತಿದ್ದು, ಇದು ಬೆಲೆ ಇಳಿಕೆಗೆ ಕಾರಣ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಜುಲೈ-ಆಗಸ್ಟ್‌ ತಿಂಗಳಿನಲ್ಲಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಮಹಾ ಮಳೆ ಮತ್ತು ನೆರೆ ಪರಿಸ್ಥಿತಿಯಿಂದಾಗಿ ಈರುಳ್ಳಿ ಕೃಷಿ ನಾಶವಾಗಿದ್ದರಿಂದ ಈರುಳ್ಳಿ ಬೆಲೆ ದಿಢೀರನೆ ಏರಿಕೆ ಆಗಿತ್ತು. ಕೆಲವರು ಅಕ್ರಮ ದಾಸ್ತಾನು ಇರಿಸಿದ್ದು, ಸರಕಾರ ಮಧ್ಯ ಪ್ರವೇಶಿಸಿ ದಾಳಿಗಳನ್ನೂ ನಡೆಸಿತ್ತು.

2019 ಆಗಸ್ಟ್‌ ಅಂತ್ಯಕ್ಕೆ ಹಾಗೂ ಸೆಪ್ಟಂಬರ್‌ ಮೊದಲ ವಾರದಲ್ಲಿ ಈರುಳ್ಳಿ ಬೆಲೆ ಏರುಮುಖ ಕಂಡಿದ್ದು, ನವೆಂಬರ್‌-ಡಿಸೆಂಬರ್‌ ಮಾಹೆಯಲ್ಲಿ ಅದು 160 ರೂಪಾಯಿ ತನಕವೂ ತಲುಪಿತ್ತು.

Advertisement

ದೇಶೀಯ ಈರುಳ್ಳಿಯ ಕೊರತೆ ಯಿಂದಾಗಿ ಈಜಿಪ್ಟ್, ಇರಾನ್‌, ಟರ್ಕಿ ದೇಶಗಳಿಂದಲೂ ಈರುಳ್ಳಿ ಆಮದು ಮಾಡಲಾಗಿತ್ತು. 2020ರ ಜನವರಿ ಪ್ರಥಮ ವಾರದ ಬಳಿಕ ದೇಶೀಯ ಈರುಳ್ಳಿ ಲಭ್ಯವಾಗತೊಡಗಿದ್ದು, ಈ ಸಂದರ್ಭದಲ್ಲಿ ಬೆಲೆ ಇಳಿಕೆಯಾಗಲು ಆರಂಭವಾಗಿತ್ತು.

ಫೆಬ್ರವರಿ ತಿಂಗಳು ಆರಂಭ ವಾಗುತ್ತಿದ್ದಂತೆ ಹೊಸ ಈರುಳ್ಳಿ ಧಾರಾಳವಾಗಿ ಪೂರೈಕೆ ಆಗುತ್ತಿರುವ ಕಾರಣ ಬೆಲೆಯು 5 ತಿಂಗಳ ಹಿಂದಿನ ಹಂತಕ್ಕೆ ತಲುಪಿದೆ. ಈ ಮೂಲಕ ಗ್ರಾಹಕರಿಗೆ ಖುಷಿ ತಂದಿದೆ.

ತರಕಾರಿಗಳ ಬೆಲೆ ಇಳಿಕೆ
ಮಾರುಕಟ್ಟೆಗೆ ಸ್ಥಳೀಯ ತರಕಾರಿಯೂ ಬಂದಿರುವುದರಿಂದ ಹಲವು ತರಕಾರಿಗಳ ಬೆಲೆ ಇಳಿಕೆ ಯಾಗಿದೆ. ಕ್ಯಾರೆಟ್‌, ಬೆಂಡೆ, ಹಸಿ ಮೆಣಸು, ಪಡುವಲ, ಹಾಗಲ, ತೊಂಡೆ, ಸೋರೆ, ಹೀರೆಕಾಯಿ ಸಹಿತ ಹಲವು ತರಕಾರಿಗಳ ಬೆಲೆ ಕಡಿಮೆಯಾಗಿದೆ.

ಸಾಮಾನ್ಯವಾಗಿ ಪ್ರತೀ ವರ್ಷ ಫೆಬ್ರವರಿ ಆರಂಭವಾಗುತ್ತಿದ್ದಂತೆ ಹೊಸ ಈರುಳ್ಳಿ ಮಾರುಕಟ್ಟೆಗೆ ಆವಕವಾಗುತ್ತದೆ. ಈ ವರ್ಷ ಮಳೆಯಿಂದ ಈರುಳ್ಳಿ ಬೆಳೆ ನಾಶವಾಗಿದ್ದರೂ ಇದೀಗ ಈಗ ಮಾರುಕಟ್ಟೆಗೆ ವಿಫುಲವಾಗಿ ಆವಕವಾಗುತ್ತಿದೆ. ಹಾಗಾಗಿ ನಿರೀಕ್ಷೆಯಂತೆ ಬೆಲೆಯೂ ಇಳಿಮುಖವಾಗಿದೆ.
– ಡೇವಿಡ್‌ ಡಿ’ಸೋಜಾ, ವ್ಯಾಪಾರಿ.

Advertisement

Udayavani is now on Telegram. Click here to join our channel and stay updated with the latest news.

Next