ಪುರಾಣ ಕಥೆಗಳಲ್ಲಿ ನೀವು ನಾರದ ಮುನಿಯ ಪಾತ್ರದ ಬಗ್ಗೆ ಕೇಳಿರುತ್ತೀರಿ. ಸೃಷ್ಟಿಯ ಮೊದಲ ಸನ್ಯಾಸಿ (ಓಲ್ಡ್ ಮಾಂಕ್) ಎಂದೇ ಕರೆಸಿಕೊಳ್ಳುವ, ಮೂರೂ ಲೋಕಗಳಲ್ಲೂ ಸಂಚರಿಸಿ ಬಹುತೇಕ ಎಲ್ಲ ಯಡವಟ್ಟುಗಳಿಗೂ ಕಾರಣವಾಗುವ, ಈ “ಓಲ್ಡ್ ಮಾಂಕ್’ ಫಿಟಿಂಗ್ ಮಾಸ್ಟರ್ ಎಂದೇ ಜನಪ್ರಿಯ! ಇಂಥ “ಓಲ್ಡ್ ಮಾಂಕ್’ ಏನಾದ್ರೂ ಕಲಿಯುಗದಲ್ಲಿ ಶಾಪಗ್ರಸ್ಥನಾಗಿ ಭೂಮಿಗೆ ಬಂದರೆ ಹೇಗಿರುತ್ತದೆ? ಈ “ಓಲ್ಡ್ ಮಾಂಕ್’ ಜೊತೆಯಲ್ಲಿದ್ದವರಿಗೆ ಅದಿನ್ಯಾವ ರೀತಿ ಫಿಟಿಂಗ್ ಇಟ್ಟು, ಕ್ವಾಟ್ಲೆ ಕೊಟ್ಟು ಕಾಡಬಹುದು? ಇಂಥದ್ದೊಂದು ಕಾಲ್ಪನಿಕ ಕಥೆಯನ್ನು ಕಣ್ತುಂಬಿಕೊಳ್ಳುವ ಕುತೂಹಲವಿದ್ದರೆ, ಖಂಡಿತವಾಗಿಯೂ ಥಿಯೇಟರ್‌ನಲ್ಲಿ ನೀವೊಮ್ಮೆ “ಓಲ್ಡ್ ಮಾಂಕ್’ ದರ್ಶನ ಮಾಡಲೇಬೇಕು.
ದೇವಲೋಕದಲ್ಲಿ ಭಗವಾನ್ ಶ್ರೀಕೃಷ್ಣ ಮತ್ತು ರುಕ್ಮಣಿಗೆ ಫಿಟಿಂಗ್ ಇಡುವ (ಕಾಲ್ಪನಿಕವಾಗಿ) ನಾರದ ಮುನಿ ಇಬ್ಬರನ್ನೂ ಬೇರೆ ಬೇರೆಯಾಗುವಂತೆ ಮಾಡುತ್ತಾನೆ. ಇದೇ ಕೋಪದಲ್ಲಿ ಶ್ರೀಕೃಷ್ಣ ಪರಮಾತ್ಮ ನಾರದನಿಗೆ ಶಾಪ ಕೊಟ್ಟು ಭೂಮಿಗೆ ಕಳುಹಿಸುತ್ತಾನೆ. ಭೂಲೋಕದಲ್ಲಿ ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ ಮಾತ್ರ ಶಾಪದಿಂದ ವಿಮುಕ್ತಿ ಎಂಬ ಕಂಡೀಷನ್ ಕೂಡ ಹಾಕುತ್ತಾನೆ! ಪ್ರೇಮಿಗಳನ್ನೂ ಕಂಡರೆ ಆಗದ ಈ “ಓಲ್ಡ್ ಮಾಂಕ್’ ತನ್ನ ಶಾಪ ವಿಮುಕ್ತಿಗಾಗಿ ಏನೆಲ್ಲ ಹರ ಸಾಹಸ ಮಾಡುತ್ತಾನೆ ಅನ್ನೋದು “ಓಲ್ಡ್ ಮಾಂಕ್’ ಕಥಾಹಂದರ. ಈ ಲವ್ ಗೇಮ್ ಚಾಲೆಂಜ್‌ನಲ್ಲಿ ನಾರದ ಯಶಸ್ವಿಯಾಗುತ್ತಾನಾ ಅನ್ನೋದೇ “ಓಲ್ಡ್ ಮಾಂಕ್’ ಕ್ಲೈಮ್ಯಾಕ್ಸ್. ಅದು ಹೇಗೆ ಅನ್ನೋದನ್ನ ತೆರೆಮೇಲೆ ನೋಡುವುದೇ ಒಳ್ಳೆಯದು.
ಇದನ್ನೂ ಓದಿ:ಏಕ್ ಲವ್ ಯಾ ಚಿತ್ರ ವಿಮರ್ಶೆ: ಪ್ರೇಮ್ ಲೋಕದಲ್ಲಿ ಥ್ರಿಲ್ಲಿಂಗ್ ಸ್ಟೋರಿ
ಪುರಾಣ, ದೇವರು, ಪ್ರೀತಿ ಎಲ್ಲವನ್ನೂ ಸೇರಿಸಿ ಒಂದು ಸುಂದರ ಕಾಲ್ಪನಿಕ ಕಥೆಯನ್ನು “ಓಲ್ಡ್ ಮಾಂಕ್’ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಂ ನಾಯಕ ಶ್ರೀನಿ. ಮಾಮೂಲಿ ಲವ್‌ಸ್ಟೋರಿಯಂತೆ ಕಂಡರೂ, ನವಿರಾದ ಚಿತ್ರಕಥೆ, ಕಚಗುಳಿಯಿಡುವ ಸಂಭಾಷಣೆ ಮತ್ತು ಅಲ್ಲಲ್ಲಿ ಸಿಗುವ ಟ್ವಿಸ್ಟ್‌ಗಳು “ಓಲ್ಡ್ ಮಾಂಕ್’ ಹೈಲೈಟ್ಸ್. ಆರಂಭದಿಂದ ಅಂತ್ಯದವರೆಗೂ “ಓಲ್ಡ್ ಮಾಂಕ್’ ಕಾಮಿಡಿ ಕಿಕ್ ಕೊಟ್ಟು ನೋಡುಗರನ್ನು ಹಿಡಿದುಕೂರಿಸುತ್ತಾನೆ.
ಇನ್ನು ಶಾಪಗ್ರಸ್ಥ ನಾರದನಾಗಿ ಶ್ರೀನಿ ತೆರೆಮೇಲೂ ಕಮಾಲ್ ಮಾಡಲು ಯಶಸ್ವಿಯಾಗಿದ್ದಾರೆ. ನಾಯಕ ಶ್ರೀನಿ ಮತ್ತು ಸ್ನೇಹಿತನಾಗಿ ಸುಜಯ್ ಶಾಸ್ತ್ರೀ ಕಾಂಬಿನೇಶನ್ ಪ್ರೇಕ್ಷಕರನ್ನು ನಗೆ ಕಡಲಿನಲ್ಲಿ ತೇಲಿಸುತ್ತದೆ. ಎಸ್. ನಾರಾಯಣ್, ಅದಿತಿ ಪ್ರಭುದೇವ, ಸಿಹಿಕಹಿ ಚಂದ್ರು, ಸುದೇವ್ ನಾಯರ್ ಎಲ್ಲರದ್ದೂ ಪಾತ್ರಕ್ಕೊಪ್ಪುವ ಅಚ್ಚುಕಟ್ಟು ಅಭಿನಯ. ಔಟ್ ಆ್ಯಂಡ್ ಔಟ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳನ್ನು ಇಷ್ಟಪಡುವವರಿಗೆ “ಓಲ್ಡ್ ಮಾಂಕ್’ ಪೈಸ ವಸೂಲ್ ಸಿನಿಮಾ ಎನ್ನಲು ಅಡ್ಡಿಯಿಲ್ಲ.
ಜಿ. ಎಸ್. ಕಾರ್ತಿಕ ಸುಧನ್