ತನ್ನ ಟೈಟಲ್ ಮೂಲಕ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ ಶ್ರೀನಿ ನಟನೆ ಮತ್ತು ನಿರ್ದೇಶನದ “ಓಲ್ಡ್ ಮಾಂಕ್’ ತೆರೆಗೆ ಬರಲು ರೆಡಿಯಾಗುತ್ತಿದೆ. ಈಗಾಗಲೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿರುವ “ಓಲ್ಡ್ ಮಾಂಕ್’ ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಜೂನ್ ವೇಳೆಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಇದರ ನಡುವೆಯೇ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಇದೀಗ “ಓಲ್ಡ್ ಮಾಂಕ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
ಇದೇ ಏ. 8 ರಂದು “ಓಲ್ಡ್ ಮಾಂಕ್’ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ನಟ ರಕ್ಷಿತ್ ಶೆಟ್ಟಿ ಮತ್ತು ನಿವಿನ್ ಪೌಲಿ “ಓಲ್ಡ್ ಮಾಂಕ್’ ಫಸ್ಟ್ ಲುಕ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ನಟ ಶ್ರೀನಿ ಇಲ್ಲಿಯವರೆಗೆ ಹೆಚ್ಚಾಗಿ ಗುರುತಿಸಿಕೊಂಡಿದ್ದು ರೊಮ್ಯಾಂಟಿಕ್ – ಕಾಮಿಡಿ ಚಿತ್ರಗಳಲ್ಲಿ. ಆ ಚಿತ್ರಗಳು ಶ್ರೀನಿ ಅವರಿಗೆ ಸಾಕಷ್ಟು ಹೆಸರು, ಜನಪ್ರಿಯತೆ ಎರಡನ್ನೂ ತಂದುಕೊಟ್ಟಿವೆ. ಇನ್ನು “ಓಲ್ಡ್ ಮಾಂಕ್’ನಲ್ಲಿಯೂ ಅದೇ ಮ್ಯಾಜಿಕ್ ಮುಂದುವರೆಯಲಿದೆಯಂತೆ. “ಇದೊಂದು ರೊಮ್ಯಾಂಟಿಕ್ – ಕಾಮಿಡಿ ಸಬ್ಜೆಕ್ಟ್. ಅದರ ಜೊತೆಗೆ ಸಸ್ಪೆನ್ಸ್ – ಥ್ರಿಲ್ಲರ್, ಎಮೋಶನ್ಸ್ ಹೀಗೆ ಎಲ್ಲ ಎಂಟರ್‌ಟೈನ್ಮೆಂಟ್ ಅಂಶಗಳು ಇದರಲ್ಲಿ ಹದವಾಗಿ ಬೆರೆತಿದೆ. ಆದ್ರೆ ಯಾರೂ ನಿರೀಕ್ಷಿಸದ ಟ್ವಿಸ್ಟ್ ಆ್ಯಂಡ್ ಟರ್ನ್ಸ್ ಈ ಸಿನಿಮಾದಲ್ಲಿರಲಿದೆ. ಸ್ಟೋರಿ ಕಂಪ್ಲೀಟ್ ಚೇಂಜ್ ಆಗಿರಲಿದೆ. ಸ್ಕ್ರೀನ್ ಪ್ಲೇ ಮತ್ತು ಪ್ರಸೆಂಟೇಶನ್ ಸಿನಿಮಾದ ಹೈಲೈಟ್’ ಎನ್ನುತ್ತಾರೆ ಶ್ರೀನಿ.
ಇದನ್ನೂ ಓದಿ:‘ಕಸ್ತೂರ್ ಬಾ’ ಪಾತ್ರದಲ್ಲಿ ಹರಿಪ್ರಿಯಾ: ಬಿಝಿ ನಟಿಯ ಅಕೌಂಟ್‌ಗೆ ಮತ್ತೂಂದು ಸಿನಿಮಾ
“ಓಲ್ಡ್ ಮಾಂಕ್’ ಚಿತ್ರದಲ್ಲಿ ಶ್ರೀನಿ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ! ಹೌದು, “ಓಲ್ಡ್ ಮಾಂಕ್’ ಚಿತ್ರದಲ್ಲಿ ಶ್ರೀನಿ ಅವರದ್ದು ನಿಜವಾಗಿಯೂ ಡಬಲ್ ರೋಲ್. ಡಬಲ್ ರೋಲ್ ಅಂದ ಮಾತ್ರಕ್ಕೆ ಶ್ರೀನಿ ತೆರೆಮೇಲೆ ಎರಡೆರಡು ಪಾತ್ರ ಮಾಡುತ್ತಿದ್ದಾರಾ ಅಂದ್ರೆ ಅಲ್ಲ. ಬದಲಾಗಿ ಶ್ರೀನಿ “ಓಲ್ಡ್ ಮಾಂಕ್’ನಲ್ಲಿ ತೆರೆಮುಂದೆ ನಾಯಕನಾಗಿ, ತೆರೆಹಿಂದೆ ನಿರ್ದೇಶಕನಾಗಿ ಎರಡೂ ರೋಲ್ ಅನ್ನು ತಾನೇ ತಾನೇ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಶ್ರೀನಿ ಅವರಿಗೆ ಇದರಲ್ಲಿ ಸ್ಕ್ರೀನ್ ಮೇಲೆ ಹೀರೋ ಪಾತ್ರವಾದರೆ, ಸ್ಕ್ರೀನ್ ಹಿಂದೆ ಡೈರೆಕ್ಟರ್ ಪಾತ್ರ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುವ ಶ್ರೀನಿ ಎರಡೂ ರೋಲ್‌ನಲ್ಲೂ ಬೌಂಡರಿ ಬಾರಿಸುವ ವಿಶ್ವಾಸದಲ್ಲಿದ್ದಾರೆ.
ಲವ್ ಕಂ ಕಾಮಿಡಿ ಕಥಾಹಂದರ ಹೊಂದಿರುವ “ಓಲ್ಡ್ ಮಾಂಕ್’ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ಉಳಿದಂತೆ ಹಿರಿಯ ನಟ ಎಸ್. ನಾರಾಯಣ್, ಕಲಾತಪಸ್ವಿ ರಾಜೇಶ್, ಉಮೇಶ್, ಆರ್.ಟಿ ರಮಾ, ಡಿಂಗ್ರಿ ನಾಗರಾಜ್, ಅರುಣಾ ಬಾಲರಾಜ್, ಸಿಹಿಕಹಿ ಚಂದ್ರು ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಸಿದ್ಧಿ ಎಂಟರ್‌ಟೈನ್ಮೆಂಟ್ಸ್’ ಬ್ಯಾನರ್‌ನಲ್ಲಿ ಪ್ರದೀಪ್ ಶರ್ಮಾ, ಸೌರಭ್ ವೈಭವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ