ಕಳೆದ ಎರಡು ವಾರದಿಂದ ಕರ್ನಾಟಕ ರಾಜ್ಯದಾದ್ಯಂತ ಸುತ್ತಾಟದಲ್ಲಿರುವ “ಓಲ್ಡ್ ಮಾಂಕ್’ ಚಿತ್ರತಂಡ, ಮೈಸೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ ಹೀಗೆ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿಕೊಟ್ಟು, ಜನರ ನಡುವೆ ಹೋಗಿ ಚಿತ್ರದ ಪ್ರಚಾರ ಕಾರ್ಯಗಳನ್ನು ಕೈಗೊಂಡಿದೆ. ಈ ವೇಳೆ ಚಿತ್ರದ ಟ್ರೇಲರ್, ಹಾಡುಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
“ಕೊರೊನಾ ಲಾಕ್‌ಡೌನ್ ಬಳಿಕ ಥಿಯೇಟರ್‌ಗಳಿಗೆ ಬರುತ್ತಿರುವ ಪ್ರೇಕ್ಷಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದರಿಂದ, ಜನರ ನಡುವೆ ಬೆರೆತು ಗ್ರೌಂಡ್ ಲೆವೆಲ್ ಪ್ರಚಾರ ಮಾಡುವ ಮೂಲಕ ಮತ್ತೆ ಪ್ರೇಕ್ಷಕರನ್ನು ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳತ್ತ ಕರೆತರುವಂತೆ ಮಾಡುವುದು ಇದರ ಹಿಂದಿನ ಉದ್ದೇಶ’ ಎಂಬುದು “ಓಲ್ಡ್ ಮಾಂಕ್’ ಚಿತ್ರತಂಡದ ಮಾತು.
“ಟಿ.ವಿ, ಸೋಶಿಯಲ್ ಮೀಡಿಯಾ, ಡಿಜಿಟಲ್ ವೇದಿಕೆ ಹೀಗೆ ಎಲ್ಲವೂ ಇದ್ದರೂ ಖುದ್ದಾಗಿ ಜನರನ್ನು ಭೇಟಿ ಮಾಡಿ ಪ್ರಚಾರ ಮಾಡುವುದರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಸಿನಿಮಾವನ್ನು ತಲುಪಿಸಬಹುದು ಎಂಬುದು ನಮ್ಮ ನಂಬಿಕೆ.
ಈಗಾಗಲೇ ರಾಜ್ಯದಾದ್ಯಂತ ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟು ಪ್ರಚಾರ ಮಾಡಿದ್ದು, ಅದರ ರಿಸೆಲ್ಟ್ ಗೊತ್ತಾಗುತ್ತಿದೆ. ಯಾವುದೇ ಸಿನಿಮಾದ ಕೊನೆ ಹಂತದ ಪ್ರೇಕ್ಷಕರನ್ನು ತಲುಪಬೇಕಾದ್ರೆ, ಗ್ರೌಂಡ್ ಲೆವೆಲ್ ಪ್ರಚಾರ ತುಂಬಾ ಮುಖ್ಯವಾಗುತ್ತದೆ. ಜನರ ಬಳಿ ಹೋಗಿ ಪ್ರಚಾರ ಮಾಡಿದಾಗ ಅವರನ್ನು ಇನ್ನಷ್ಟು ಸೆಳೆಯಲು ಸಾಧ್ಯ. ಈ ಸಿನಿಮಾದವರು ನಮ್ಮ ಊರಿಗೆ ಬಂದಿದ್ರು ಎಂಬ ಪ್ರೀತಿಯಿಂದ ಸಿನಿಮಾ ನೋಡುತ್ತಾರೆ’ ಎನ್ನುವುದು ನಿರ್ದೇಶಕ ಶ್ರೀನಿ ಅಭಿಪ್ರಾಯ.
ಸದ್ಯ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಒಂದು ಪ್ರದಕ್ಷಿಣೆ ಹಾಕಿ ಬಂದಿರುವ “ಓಲ್ಡ್ ಮಾಂಕ್’ ಚಿತ್ರತಂಡ, ಇದೀಗ ಸ್ಟಾಂಡಪ್ ಕಾಮಿಡಿಗೆ ರೆಡಿಯಾಗಿದೆ. ಫೆ. 19 ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಎನ್. ಆರ್ ಕಾಲೋನಿಯ ಸಿ. ಅಶ್ವಥ್ ಕಲಾಭವನದಲ್ಲಿ “ಫುಲ್ ಟೈಟ್’ ಎಂಬ ಹೆಸರಿನಲ್ಲಿ “ಓಲ್ಡ್ ಮಾಂಕ್’ ಸ್ಟಾಂಡಪ್ ಕಾಮಿಡಿ ನಡೆಯಲಿದ್ದು, ಈ ಶೋನಲ್ಲಿ “ಓಲ್ಡ್ ಮಾಂಕ್’ ಚಿತ್ರದ ನಾಯಕ ಕಂ ನಿರ್ದೇಶಕ ಶ್ರೀನಿ, ನಾಯಕಿ ಅದಿತಿ ಪ್ರಭುದೇವ, ಹಿರಿಯ ನಿರ್ದೇಶಕ ಎಸ್. ನಾರಾಯಣ್, ಸಿಹಿಕಹಿ ಚಂದ್ರು, ಪಿ. ಡಿ ಸತೀಶ್ ಚಂದ್ರ, ಸಂತೋಷ್, ಸುಜಯ್ ಶಾಸ್ತ್ರೀ, ಪವನ್ ವೇಣುಗೋಪಾಲ್, ಕಾರ್ತಿಕ್ ಪತ್ತಾರ್ ಸೇರಿದಂತೆ ಚಿತ್ರತಂಡದ ಕಲಾವಿದರು ಮತ್ತು ಸ್ಟಾಂಡಪ್ ಕಾಮಿಡಿ ಕಲಾವಿದರು ಭಾಗಿಯಾಗಲಿದ್ದಾರೆ.
ಅಂ
ದಹಾಗೆ, ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ “ಓಲ್ಡ್ ಮಾಂಕ್’ ಚಿತ್ರ ಇದೇ ಫೆ. 25ಕ್ಕೆ ತೆರೆ ಕಾಣುತ್ತಿದೆ. ಔಟ್ ಆ್ಯಂಡ್ ಔಟ್ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ “ಓಲ್ಡ್ ಮಾಂಕ್’ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಮನರಂಜಿಸಲು ಯಶಸ್ವಿಯಾಗುತ್ತಾನೆ ಅನ್ನೋದು ಇನ್ನೊಂದು ವಾರದಲ್ಲಿ ಗೊತ್ತಾಗಲಿದೆ.