ಪುತ್ತೂರು: ಮಂಗಳೂರು-ಬೆಂಗಳೂರು ರೈಲು ಹಳಿಯಲ್ಲಿನ ಪುತ್ತೂರಿನಿಂದ ನೆಟ್ಟಣ ತನಕ ಹದಿನೈದು ಮಾನವ ಆಧಾರಿತ ಗೇಟುಗಳು ದಿನಂಪ್ರತಿ ವಾಹನ ಸಂಚಾರಕ್ಕೆ ತಡೆ ಒಡ್ಡುತ್ತಿದೆ.
ಪದೇ-ಪದೆ ಬಂದ್ ಆಗುವ ರೈಲ್ವೇ ಗೇಟ್ ಎದುರು ವಾಹನಗಳು ತಾಸುಗಟ್ಟಲೇ ಕಾಯುವ ಸ್ಥಿತಿಗೆ ಮುಕ್ತಿ ಯಾವಾಗ ಎನ್ನುವ ಪ್ರಶ್ನೆಯೀಗ ಎದ್ದಿದೆ. ಕಳೆದ ಹತ್ತಾರು ವರ್ಷಗಳಿಂದ ರೈಲ್ವೇ ಮೇಲ್ಸೇತುವೆ ಅಥವಾ ಅಂಡರ್‌ಪಾಸ್ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹ, ಮನವಿ ಮಾಡುತ್ತಿದ್ದರೂ ಅದಕ್ಕಿನ್ನು ವೇಗ ಸಿಕ್ಕಿಲ್ಲ. ಹೀಗಾಗಿ ಗೇಟು ಮುಂದೆ ಕಾಯುವ ಸ್ಥಿತಿ ತಪ್ಪಿಲ್ಲ.
ಪುತ್ತೂರು, ಸುಳ್ಯ, ಕಡಬ ಮೂಲಕ ಹಾದು ಹೋಗಿರುವ ರೈಲ್ವೇ ಹಳಿಯಲ್ಲಿ ಮಾನವ ಆಧಾರಿತ ಗೇಟು ಹೊಂದಿರುವ ಸಂಖ್ಯೆ 15. ಎಪಿಎಂಸಿ ರಸ್ತೆ, ಸಾಮೆತ್ತಡ್ಕ, ಬೆದ್ರಾಳ, ಮುಕ್ವೆ, ಪುರುಷರಕಟ್ಟೆ, ಗಡಿಪಿಲ, ಸವಣೂರು, ಬರೆಪ್ಪಾಡಿ, ಬೆಳಂದೂರು, ಚಾರ್ವಾಕ, ಎಡಮಂಗಲ-2, ಕೋರಿಯರ್, ಬಜಕ್ಕೆರೆ, ಮುದೂರು ಬಳಿ ಗೇಟುಗಳಿವೆ. ಇವುಗಳ ಪೈಕಿ ಹತ್ತಾರು ವರ್ಷಗಳ ಬೇಡಿಕೆಯ ಪರಿಣಾಮ ಎಪಿಎಂಸಿ ರಸ್ತೆ ಬಳಿ 11 ಕೋ.ರೂ.ವೆಚ್ಚದಲ್ಲಿ ಅಂಡರ್‌ಪಾಸ್ ನಿರ್ಮಾಣ ಹಂತದಲ್ಲಿ ಇದೆ. ಉಳಿದ ಮೂರು ಕಡೆಗಳಲ್ಲಿ ಪ್ರಸ್ತಾವನೆ ಸಲ್ಲಿಕೆ ಆಗಿದೆ ಅನ್ನುವುದು ರೈಲ್ವೇ ಇಲಾಖೆ ನೀಡುವ ಮಾಹಿತಿ.
ದಿನವಿಡೀ ಸಂಚಾರ
ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಹೊಂದಿರುವ ಈ ರೈಲು ಮಾರ್ಗದಲ್ಲಿ ದಿನವೊಂದಕ್ಕೆ 16 ಬಾರಿ ರೈಲು ಸಂಚರಿಸುತ್ತವೆ (ರಿಟರ್ನ್ ಸೇರಿ). ಎಪಿಎಂಸಿ ರಸ್ತೆ, ಬೆದ್ರಾಳ, ಮುಕ್ವೆ, ಪುರುಷರಕಟ್ಟೆ, ಸವಣೂರು, ಎಡಮಂಗಲ ಮೊದಲಾದ ಗೇಟುಗಳಲ್ಲಿ ಸದಾ ವಾಹನ ದಟ್ಟಣೆ ಇದೆ. ನಿಲ್ದಾಣಕ್ಕೆ ಒಮ್ಮೆ ರೈಲು ಬರುವ ಸೂಚನೆ ಕಂಡು ಬಂದರೆ ಹತ್ತರಿಂದ ಹನ್ನೆರಡು ನಿಮಿಷ ಗೇಟನ್ನು ಹಾಕುತ್ತಾರೆ. ಒಮ್ಮೊಮ್ಮೆ ಅದಕ್ಕಿಂತ ಹೆಚ್ಚು ಬಾರಿ ನಿಲ್ಲುತ್ತದೆ. ಈ ವೇಳೆ ರಸ್ತೆಯ ಎರಡೂ ಬದಿ ವಾಹನಗಳ ನಿಲುಗಡೆಯಿಂದ ಟ್ರಾಫಿಕ್ ಕಿರಿ-ಕಿರಿ ಉಂಟಾಗುತ್ತಿದೆ. ಇದು ದೈನಂದಿನ ಗೋಳು ಕೂಡ ಆಗಿದೆ. ಪ್ರತಿದಿನ ಇಂತಹ ಟ್ರಾಫಿಕ್ ಕಿರಿಕಿರಿಯಿಂದ ಪ್ರಯಾಣಿಕರು ಬೇಸತ್ತಿದ್ದಾರೆ.
ಮಾನವ ಆಧಾರಿತ ಗೇಟುಗಳಿಗೆ ಮುಕ್ತಿ: ಕೇಂದ್ರ ಸರಕಾರದಿಂದ ರೈಲ್ವೇ ಹಳಿ ಹಾದು ಹೋಗಿರುವ ಕಡೆಗಳಲ್ಲಿ ಇರುವ ಮಾನವ ಆಧಾರಿತ ಗೇಟುಗಳಿಗೆ ಮುಕ್ತಿ ನೀಡುವ ಕಾರ್ಯ ಆಗುತ್ತಿದೆ. ಪುತ್ತೂರು ಭಾಗದಲ್ಲಿನ ಎಪಿಎಂಸಿ ರಸ್ತೆ ಬಳಿ ಅಂಡರ್ ಪಾಸ್ ನಿರ್ಮಾಣ ಹಂತದಲ್ಲಿದೆ. ಉಳಿದೆಡೆಯು ಮಾನವ ಆಧಾರಿತ ಗೇಟು ತೆರವು ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರ ಅನುಷ್ಠಾನಕ್ಕೆ ಬರಲಿದೆ. –
ನಳಿನ್ ಕುಮಾರ್ ಕಟೀಲು, ಸಂಸದರು, ದ.ಕ.ಲೋಕಸಭಾ ಕ್ಷೇತ್ರ
ಅಪಘಾತಕ್ಕೆ ಕಾರಣ
ಒಮ್ಮೆ ರೈಲ್ವೇ ಗೇಟು ಹಾಕಿದರೆ ಎರಡೂ ಬದಿ ನೂರಾರು ದ್ವಿಚಕ್ರ ವಾಹನ ಸವಾರರು ಗೇಟ್ ಹತ್ತಿರ ಜಮಾಯಿಸುತ್ತಾರೆ. ಗೇಟ್ ತೆಗೆದ ತತ್‌ಕ್ಷಣ ಒಮ್ಮೆಲೆ ನುಗ್ಗುತ್ತಾರೆ. ಇದರಿಂದ ಸವಾರರು ಬಿದ್ದು, ಎದ್ದು ತೆರಳಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಒಮ್ಮೊಮ್ಮೆ ಅಪಘಾತ ಸಂಭವಿಸುತ್ತದೆ. ತುರ್ತು ಚಿಕಿತ್ಸೆಗೆಂದು ಹೊರಟವರು ಅಲ್ಲೇ 15 ನಿಮಿಷ ಆ್ಯಂಬುಲೆನ್ಸ್ ನಲ್ಲೇ ಇರಬೇಕು. ಅಲ್ಲದೇ ರಸ್ತೆ ಸಂಚಾರಿಗಳಿಗೆ ಪ್ರತೀ ನಿತ್ಯ ತೊಂದರೆಯಾಗುತ್ತಿದೆ. ಅಪಘಾತ, ಹೆರಿಗೆ ಇತ್ಯಾದಿ ನಿಮಿತ್ತ ತುರ್ತಾಗಿ ಆಸ್ಪತ್ರೆಗೆ ಸೇರಬೇಕಾದ ಸಂದರ್ಭ ಈ ಸ್ಥಳದಲ್ಲಿ ವಿಳಂಬವಾದ ಘಟನೆ ಹಲವು ಸಲ ಸಂಭವಿಸಿದೆ. ಈ ಸ್ಥಳದಲ್ಲಿ ಮೇಲ್ಸೇತುವೆ ಶೀಘ್ರ ನಿರ್ಮಾಣವಾಗಬೇಕು ಅನ್ನುವ ಆಗ್ರಹ ಕೇಳಿ ಬಂದಿದೆ.
-ಕಿರಣ್ ಪ್ರಸಾದ್ ಕುಂಡಡ್ಕ