Advertisement

ರಾಡ್‌ನಿಂದ ಹೊಡೆದು ದಂಪತಿಯ ಕೊಲೆಗೆ ಯತ್ನಿಸಿದ ವೃದ್ಧ!

12:04 PM Aug 13, 2018 | Team Udayavani |

ಉಳ್ಳಾಲ: ಔಷಧಕ್ಕೆ ಹಣ ನೀಡದ ಸಹೋದರಿ ಮತ್ತು ಭಾವನ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಪಿಕಾಡ್‌ ಬಳಿ ಸಂಭವಿಸಿದೆ. ದಂಪತಿಯನ್ನು ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಉಳ್ಳಾಲ ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ.

Advertisement

ಕಾಪಿಕಾಡ್‌ ಒಂದನೇ ಅಡ್ಡ ರಸ್ತೆ ನಿವಾಸಿ ಡೆನ್ನಿಸ್‌ ಡಿ’ ಸೋಜಾ (78)  ಆರೋಪಿ. ಗಂಭೀರ ಗಾಯಗೊಂಡಿರುವ ಡೆನ್ನಿಸ್‌ ಅವರ ಕಿರಿಯ ಸಹೋದರಿ ಜಾನೆಟ್‌ ಡಿ’ ಸೋಜಾ ಅವರು ಅಪಾಯದಿಂದ ಪಾರಾಗಿದ್ದು, ಅವರ ಪತಿಯ ಸ್ಥಿತಿ ಗಂಭೀರವಾಗಿದೆ.

ಘಟನೆಯ ವಿವರ
ಡೆನ್ನಿಸ್‌ ಸಿವಿಲ್‌ ಗುತ್ತಿಗೆದಾರರಾಗಿದ್ದು, ಕಾಪಿಕಾಡಿನಲ್ಲಿ ಮನೆ ಕಟ್ಟಿ ವಾಸವಾಗಿದ್ದರು. ಬಾಲ್ಯದಿಂದಲೇ ತನ್ನ ಸಹೋದರಿಯರ ಮದುವೆಯ ಜವಾಬ್ದಾರಿ ವಹಿಸಿದ್ದ  ಅವರು ಅವಿವಾಹಿತರಾಗಿದ್ದರು.  ಅವರ ಕಿರಿಯ ಸಹೋದರಿ ಜಾನೆಟ್‌ ಅವರನ್ನು ಪುತ್ತೂರಿಗೆ ವಿವಾಹ ಮಾಡಿ ಕೊಡಲಾಗಿತ್ತು. ಪುತ್ತೂರಿನಲ್ಲಿರುವ ಮನೆಯನ್ನು ಬಾಡಿಗೆಗೆ ನೀಡಿ ಜಾನೆಟ್‌ ಮತ್ತು ಅವರ ಪತಿ ಜೋಸೆಫ್‌  ಅವರು ಡೆನ್ನಿಸ್‌ ಡಿ’ ಸೋಜಾರಿಗೆ ಸೇರಿದ 10 ಸೆಂಟ್ಸ್‌ ಜಾಗದಲ್ಲಿ ಮನೆ ಕಟ್ಟಿ ವಾಸವಿದ್ದಾರೆ. 

ಕೇಳಿದ್ದು 200 ರೂ.!
ಡೆನ್ನಿಸ್‌ಗೆ ಅನಾರೋಗ್ಯವಿದ್ದು, ಅವರೂ ತನ್ನ ಮನೆಯನ್ನು ಬಾಡಿಗೆಗೆ ನೀಡಿ ಸಹೋದರಿ ಜತೆಯಲ್ಲಿ ವಾಸವಾಗಿದ್ದರು. ತಾನು ಸಾಯುವವರೆಗೆ ನೋಡಿಕೊಳ್ಳಬೇಕು ಎನ್ನುವ ಕರಾರಿನೊಂದಿಗೆ ತನ್ನ ಮನೆಯನ್ನು ಜಾನೆಟ್‌ ಹೆಸರಿಗೆ ವೀಲ್‌ ಬರೆದಿದ್ದ ಡೆನ್ನಿಸ್‌, ಬಾಡಿಗೆ ಮನೆಯಲ್ಲಿ ಬಂದ ಹಣದಿಂದ ಜೀವನ ನಡೆಸುತ್ತಿದ್ದರು. ಎರಡು ತಿಂಗಳಿನಿಂದ ಬಾಡಿಗೆ ಮನೆ ಖಾಲಿ ಇದ್ದು, ಕೈಯಲ್ಲಿ ಹಣ ಇಲ್ಲದಿದ್ದಾಗ ಔಷಧಕ್ಕೆ 200 ರೂ. ನೀಡುವಂತೆ ಸಹೋದರಿಗೆ ತಿಳಿಸಿದ್ದರು. 

ಮಲಗಿದ್ದ ದಂಪತಿ ಮೇಲೆ ಹಲ್ಲೆ: ಆದರೆ ಸಹೋದರಿ ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಿತರಾದ ಡೆನ್ನಿಸ್‌ ಅವರು, ತಂಗಿ ಮತ್ತು ಭಾವ ಮಧ್ಯಾಹ್ನ ಊಟ ಮಾಡಿ ಮಲಗಿದ್ದಾಗ ಅವರ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಯತ್ನ ನಡೆಸಿದ್ದರು.

Advertisement

ಸ್ಥಳಕ್ಕೆ ಮಂಗಳೂರು ಕಮಿಷನರ್‌ ಟಿ.ಆರ್‌.ಸುರೇಶ್‌, ಎಸಿಪಿ ರಾಮರಾವ್‌, ಇನ್ಸ್‌ಪೆಕ್ಟರ್‌ ಗೋಪಿಕೃಷ್ಣ ಆಗಮಿಸಿ ತನಿಖೆ ನಡೆಸಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಕೊಲೆ ಮಾಡಿ ಬಂದಿದ್ದೇನೆಂದ ಡೆನ್ನಿಸ್‌!
ದಂಪತಿ ಮೇಲೆ ಹಲ್ಲೆ ನಡೆಸಿದ ಬಳಿಕ ಡೆನ್ನಿಸ್‌ ರಾಡನ್ನು ತನ್ನ ಕೋಣೆಯಲ್ಲಿರಿಸಿ ಹೆದ್ದಾರಿವರೆಗೆ ನಡೆದುಕೊಂಡು ಹೋಗಿ, ಅಲ್ಲಿಂದ ರಿಕ್ಷಾದಲ್ಲಿ ಉಳ್ಳಾಲ ಪೊಲೀಸ್‌ ಠಾಣೆಗೆ ತೆರಳಿದ್ದರು. “ನಾನು ಎರಡು ಕೊಲೆ ಮಾಡಿದ್ದೇನೆ’ ಎಂದು ಹೇಳಿ ಪೊಲೀಸರ ಮುಂದೆ ಶರಣಾದರು. ಪೊಲೀಸರು ಮೊದಲಿಗೆ ಈತನ ಮಾತು ನಂಬಿರಲಿಲ್ಲ ಬಳಿಕ ಆತನೊಂದಿಗೆ ಮನೆಗೆ ತೆರಳಿದಾಗ ಮನೆಯಲ್ಲಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಡೆನ್ನಿಸ್‌ ಅವರ ಸಹೋದರ ಓಸ್ವಾಲ್ಟ್ ಡಿ’ ಸೋಜಾ ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ಗಾಯಾಳುಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next