ಬೆಂಗಳೂರು: ಟ್ರಾನ್ಸ್ ಪೋರ್ಟ್ ಉದ್ಯಮಿ ಬಾಲಸುಬ್ರಮಣಿಯನ್ ಅವರ ಸಾವಿನ ಪ್ರಕರಣವನ್ನು ಪುಟ್ಟೇನ ಹಳ್ಳಿ ಪೊಲೀಸರು ಭೇದಿಸಿದ್ದಾರೆ.
35 ವರ್ಷದ ತಮ್ಮ ಮನೆ ಕೆಲಸದಾಕೆ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಬಾಲಸುಬ್ರಮಣಿಯನ್(67) ಹೃದ ಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂಬುವುದು ಇದೀಗ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಬಾಲಸುಬ್ರಮಣಿಯನ್ ಅವರ ಮೊಬೈಲ್ ಸಂಖ್ಯೆಯ ಸಿಡಿಆರ್ ಪರಿಶೀಲಿಸಿ ಕಾಲ್ ಹಿಸ್ಟರಿ ಜಾಲಾಡಿದಾಗ ನಿರಂತರವಾಗಿ ಮಹಿಳೆಯೊಬ್ಬರ ಜೊತೆಗೆ ಸಂಪರ್ಕ ಇರುವುದು ಬಯಲಾಗಿತ್ತು. ಸಾರಕ್ಕಿ ಸಿಗ್ನಲ್ ಬಳಿ ಲಾಸ್ಟ್ ಲೊಕೇಶನ್ ದಾಖಲಾಗಿತ್ತು. ಹೀಗಾಗಿ ಆ ಮಹಿಳೆ ಯಾರು ಎನ್ನುವುದರ ಕುರಿತು ಪೊಲೀಸರು ಬೆನ್ನತ್ತಿದಾಗ ಬಾಲಸುಬ್ರಮಣಿಯನ್ ಮನೆಗೆ ಬರುತ್ತಿದ್ದ ಮನೆ ಕೆಲಸದಾಕೆ ಮೇಲೆ ಅನುಮಾನ ಮೂಡಿತ್ತು. ನಂತರ ಮನೆ ಕೆಲಸದಾಕೆಯನ್ನು ವಿಚಾರಿಸಿದಾಗ ಸಾವಿನ ಸತ್ಯ ಹೊರಬಿದ್ದಿದೆ. ನ.16ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‌ಗೆ ಕರೆದುಕೊಂಡು ಹೋಗಿದ್ದ ಬಾಲಸುಬ್ರಮಣಿಯನ್ ಅಲ್ಲಿಂದ ನೇರವಾಗಿ ಮನೆ ಕೆಲಸದಾಕೆ ಮನೆಗೆ ಹೋಗಿದ್ದರು. ಅಲ್ಲಿ ಆಕೆಯ ಜತೆಗೆ ಲೈಂಗಿಕ ಕ್ರಿಯೆ ನಡೆಸುವಾಗ ಹೃದಯಾಘಾತ ಸಂಭವಿಸಿದೆ.
ಬಾಲಸುಬ್ರಮಣಿಯನ್ ಹೃದಯಾ ಘಾತದಿಂದ ಸಾವನ್ನಪ್ಪಿದಾಗ ದಿಕ್ಕು ತೋಚದೆ ಮನೆಕೆಲಸದಾಕೆ ತನ್ನ ಪತಿಗೆ ಈ ಬಗ್ಗೆ ಮಾಹಿತಿ ನೀಡಿದ್ದಳು. ನಂತರ ಮನೆಗೆ ಬಂದ ಪತಿ ಮತ್ತು ಸಹೋದರ ಸೇರಿ ಸುಬ್ರಮಣಿಯನ್ ಮೃತದೇಹ ವನ್ನು ಚಾಪೆ ಹಾಗೂ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕಟ್ಟಿ ಪುಟ್ಟೇನಹಳ್ಳಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದರು. ಈ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ಮನೆ ಕೆಲಸದಾಕೆ ತಪ್ಪೊಪ್ಪಿಕೊಂಡಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಸಾವು ಆಯ್ತು. ನಮ್ಮ ಮನೆಯಲ್ಲೇ ಮೃತಪಟ್ಟಿದ್ದು ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾಳೆ. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಸುಬ್ರಮಣಿಯನ್ ಅವರು ಈ ಹಿಂದೆಯೇ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ.