ಬೆಂಗಳೂರು: ಸ್ತ್ರೀಲೋಲನೊಬ್ಬ ತನ್ನ ಇಳಿ ವಯಸ್ಸಿನಲ್ಲಿ ಮನೆ ಕಳ್ಳತನ ಮಾಡಿ ಸುದ್ದಗುಂಟೆಪಾಳ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಚಿಕ್ಕಮಂಗಳೂರು ಮೂಲದ ರಮೇಶ್ ಅಲಿಯಾಸ್ ತಾತ (70) ಬಂಧಿತ. ಆರೋಪಿಯಿಂದ 8 ಲಕ್ಷ ರೂ. ಮೌಲ್ಯ 162 ಗ್ರಾಂ ಚಿನ್ನಾಭರಣ, 5 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈತನಿಗೆ ಇಬ್ಬರು ಪತ್ನಿಯರಿದ್ದು, ಮೂವರು ಮಕ್ಕಳಿದ್ದರೂ 3ನೇ ಮದುವೆಗೆ ಯುವತಿಯನ್ನು ಹುಡುಕಾಟ ನಡೆಸುತ್ತಿದ್ದ. ಅದಕ್ಕೆ ಮನೆಯವರು ಒಪದಿದ್ದಾಗ, ಮನೆಯಲ್ಲಿದ್ದ ಹಣ, ಚಿನ್ನಾಭರಣ ಕದ್ದು ತನ್ನ ಜತೆ ಲೈಂಗಿಕ ಸಂಪರ್ಕ ಬೆಳೆಸುವ ಮಹಿಳೆಯರಿಗೆ ಕೊಡುತ್ತಿದ್ದ. ಈ ವಿಚಾರ ತಿಳಿದ ಮನೆಯವರು 12 ವರ್ಷಗಳ ಹಿಂದೆ ಈತನನ್ನು ಮನೆಯಿಂದ ಹೊರ ಹಾಕಿದ್ದರು.
ಚಟ ತೀರಿಸಿಕೊಳ್ಳಲು ಕಳ್ಳತನ: ಮನೆಯಿಂದ ಹೊರಬಿದ್ದ ಈತ ತಮಿಳುನಾಡಿಗೆ ಹೋಗಿ ಬೀಗ ಹಾಕಿದ ಮನೆಗಳನ್ನು ಗುರುತಿಸಿರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಸಿಕ್ಕ ವಸ್ತುಗಳನ್ನುಮಾರಾಟ ಮಾಡಿ, ಬಂದ ಹಣವನ್ನು ತನಗೆ ಲೈಂಗಿಕ ಸುಖನೀಡುವ ಮಹಿಳೆಯರಿಗೆ ಕೊಡುತ್ತಿದ್ದ. ಕೆಲವೊಮ್ಮೆ ಕಳವು ಚಿನ್ನಾಭರಣಗಳನ್ನೇ ಕೊಟ್ಟು ಚಟ ತೀರಿಸಿಕೊಳ್ಳುತ್ತಿದ್ದ. ಈ ಸಂಬಂಧ ತಮಿಳುನಾಡು ಪೊಲೀಸರು ಈತ ನನ್ನು ನಾಲ್ಕೈದು ಬಾರಿ ಬಂಧಿಸಿದ್ದರು. ಜಾಮೀನು ಪಡೆದು ಹೊರಬಂದು ಮತ್ತೆ ಅದೇ ಚಾಳಿ ಮುಂದುವರಿಸುತ್ತಿದ್ದ. 2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಈತ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯ ನಿಮ್ಹಾನ್ಸ್ ಲೇಔಟ್‌ನಲ್ಲಿ ಮನೆ ಕಳವುಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸಿಸಿಕ್ಯಾಮರಾ ದೃಶ್ಯಗಳನ್ನು ಆಧರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರತಿ ಬಾರಿ ಹೊಸ ಮಹಿಳೆಯರ ಸಖ್ಯ : ಕಳ್ಳತನ ಮಾಡಿ ಮಹಿಳೆಯರ ಜತೆ ದೈಹಿಕ ಸುಖ ಅನುಭವಿಸುತ್ತಿದ್ದ ತಾತಾ, ಪ್ರತಿ ಬಾರಿ ಕಳ್ಳತನ ಮಾಡಿದಾಗಲೂ ಹೊಸ-ಹೊಸ ಮಹಿಳೆಯರಿಗಾಗಿ ಹುಡುಕಾಡುತ್ತಿದ್ದ. 30-40 ಮಹಿಳೆಯರಿಗೆಚಿನ್ನಾಭರಣ, ಹಣ ಕೊಟ್ಟಿದ್ದಾನೆ. ಹೀಗಾಗಿ ಇದುವರೆಗೂ ಎಷ್ಟು ಮಹಿಳೆಯರಿಗೆ ಚಿನ್ನಾಭರಣ, ಹಣ ನೀಡಿದ್ದಾನೆಎಂಬುದು ಆತನಿಗೆ ತಿಳಿದಿಲ್ಲ. ಈತನ ಮೊಬೈಲ್ ಸಂಪರ್ಕದಲ್ಲಿದ್ದ ಕೆಲ ಮಹಿಳೆಯರನ್ನು ಪತ್ತೆ ಹಚ್ಚಿ 162 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.