ಪಣಜಿ: ಸಂತ ಫ್ರಾನ್ಸಿಸ್ ಜೇವಿಯರ್ ರವರು ಏಸುಕ್ರಿಸ್ತರ ಬಗ್ಗೆ ಬೋಧನೆ ಮಾಡುವ ಮೂಲಕ ಜನರಲ್ಲಿ ಸಾಮರಸ್ಯ ಸೃಷ್ಠಿಸಲು ಪ್ರಯತ್ನಿಸಿದರು. ಸಂತ ಫ್ರಾನ್ಸಿಸ್ ಜೇವಿಯರ್ ರವರು ಕೈಯ್ಯಲ್ಲಿ ಗಂಟೆ ಮತ್ತು ಶಿಲುಬೆಯನ್ನು ಹಿಡಿದು ಹೊರಬರುತ್ತಿದ್ದರು. ಜನರನ್ನು ಒಗ್ಗೂಡಿಸಿ ಅವರು ಏಸುವಿನ ಕಥೆಗಳನ್ನು ಹಳುತ್ತಿದ್ದರು ಮತ್ತು ಪ್ರಾರ್ಥಿಸಲು ಹೇಳುತ್ತಿದ್ದರು, ಅದು ಅದ್ವಿತೀಯ ಬೋಧನಾ ವಿಧಾನವಾಗಿತ್ತು ಎಂದು ಬಾಮ್ ಜೀಸಸ್ ಬಾಸಿಲಿಕಾ ರೆಕ್ಟರ್ ಫಾದರ್ ಪ್ಯಾಟ್ರಿಸಿಯೋ ಫರ್ನಾಂಡಿಸ್ ಆಶೀರ್ವಚನ ನೀಡಿದರು.
ಶನಿವಾರ ನಡೆದ ಜಗತ್ಪ್ರಸಿದ್ಧ ಓಲ್ಡ್ ಗೋವಾದ ಸಂತ ಫ್ರಾನ್ಸಿಸ್ ಜೇವಿಯರ್ ಚರ್ಚ್ ನ ಫೆಸ್ಟ್ ನಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪ್ರಾರ್ಥನಾ ಸಭೆಗಳಲ್ಲಿ ಪಾಲ್ಗೊಂಡರು. ಈ ಪ್ರಾರ್ಥನಾ ಸಭೆಯಲ್ಲಿ ಫಾದರ್ ಪ್ಯಾಟ್ರಿಸಿಯೋ ಫರ್ನಾಂಡಿಸ್ ಆಶೀರ್ವಚನ ನೀಡಿದರು.
ಸಂತ ಫ್ರಾನ್ಸಿಸ್ ಕ್ಸೇವಿಯರ್ ರವರು 1541 ರಲ್ಲಿ ಲಿಸ್ಬನ್ ನಿಂದ ಪ್ರಯಾಣ ಬೆಳೆಸಿದರು ಮತ್ತು ಮೇ 6, 1542 ರಂದು ಭಾರತವನ್ನು ತಲುಪಿದರು. ಅವರು ಗೋವಾಕ್ಕೆ ಬರಲು ಒಂದು ವರ್ಷ ಒಂದು ತಿಂಗಳು ನಾಲ್ಕು ದಿನ ತೆಗೆದುಕೊಂಡರು. ಗೋವಾಕ್ಕೆ ಬಂದ ನಂತರ ಪ್ರೀತಿ, ಸೌಹಾರ್ದತೆಯ ಸಂದೇಶ ಸಾರಲು ಪ್ರಯತ್ನಿಸಿದರು. ಗೋವಾದಿಂದ ವಸಾಯಿ, ತಿರುವನಂತಪುರ, ಮದ್ರಾಸ್, ಮೈಲಾಪುರ್, ಮಲಯ, ಮಲಕ್ಕಾ, ಇಂಡೋನೇಷಿಯಾ, ಫಿಲಿಪೈನ್ಸ್, ಜಾವಾ, ಬೊರ್ನಿಯೊ, ಜಪಾನ್ ದೇಶಗಳಿಗೂ ತೆರಳಿ ಧರ್ಮ ಪ್ರಚಾರ ಮಾಡಿದರು ಎಂದು ಫಾದರ್ ಪ್ಯಾಟ್ರಿಸಿಯೋ ನುಡಿದರು.
ಓಲ್ಡ್ ಗೋವಾ ಫೆಸ್ಟ್ ನ ಪ್ರಾರ್ಥನಾ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ರಾಜ್ಯದ ಶಾಸಕರು ಮತ್ತು ಸಚಿವರು, ವಿವಿಧ ರಾಜ್ಯಗಳ ಚರ್ಚ್ ಗಳ ಧರ್ಮಗುರುಗಳು, ದೇಶವಿದೇಶಗಳಿಂದ ಆಗಮಿಸಿದ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು. ಶನಿವಾರ ಬೆಳಿಗ್ಗೆಯಿಂದ ವಿವಿಧ ಭಾಷೆಗಳಲ್ಲಿ ಪ್ರಾರ್ಥನಾ ಸಭೆ ಜರುಗಿತು.