ಪ್ರತಿಯೊಬ್ಬರ ಲೈಫಲ್ಲೂ ಒಂದೊಂದು ಸಿಹಿ ಮತ್ತು ಕಹಿ ಘಟನೆಗಳು ಇದ್ದೇ ಇರುತ್ತವೆ. ಹಾಗೆಯೇ, ಬದುಕಲ್ಲಿ ಬಂದು ಹೋದ ಹುಡುಗಿ ಅಥವಾ ಹುಡುಗನ ನೆನಪೂ ಇದ್ದೇ ಇರುತ್ತೆ. ಈಗ ಅಂತಹ ಹಳೆಯ ನೆನಪು ಮಾಡಿಕೊಳ್ಳುವ ಸಿನಿಮಾವೊಂದು ಸೆಟ್ಟೇರಿದೆ. ಆ ಚಿತ್ರಕ್ಕೆ “ಹಳೇ ಡವ್ ನೆನಪಲ್ಲಿ’ ಎಂದು ನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಗೋಧೂಳಿ ಸಮಯದಲ್ಲಿ ಮುಹೂರ್ತ ಕೂಡ ನೆರವೇರಿದೆ.
ಮಾರುತಿ ಈ ಚಿತ್ರದ ನಿರ್ದೇಶಕರು. ಗಿರಿಧರ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅವರಿಗೆ ಡಿ.ವಿ.ನಟರಾಜ್ ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ. ಇನ್ನು, ನಕುಲ್ ಗೌಡ ಹೀರೋ. ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದು, ಸದ್ಯಕ್ಕೆ ನಾಯಕಿಯರ ಆಯ್ಕೆ ನಡೆಯಬೇಕಿದೆ. ತಮ್ಮ ಮೊದಲ ಸಿನಿಮಾ ಕುರಿತು ಮಾತಿಗಿಳಿದ ನಿರ್ದೇಶಕ ಮಾರುತಿ, ಹೇಳಿದ್ದಿಷ್ಟು. “ಶೀರ್ಷಿಕೆ ಹೇಳುವಂತೆ, ಇದೊಂದು ಪಕ್ಕಾ ಲವ್‌ಸ್ಟೋರಿ. ಹಳೆಯ ಡವ್ ನೆನಪು ಮಾಡಿಕೊಳ್ಳದ ಜನರೇ ಇಲ್ಲ. ಎಲ್ಲರ ಬದುಕಲ್ಲೂ ಅಂತಹ ನೆನಪುಗಳು ಇದ್ದೇ ಇರುತ್ತವೆ. ಆ ನೆನಪುಗಳ ಗುತ್ಛವೇ ಈ ಚಿತ್ರದ ಕಥೆ. ನಾಯಕನದು ಇಲ್ಲಿ ತುಂಬಾ ಎನಿರ್ಜಿಯಿಂದ ಓಡಾಡಿಕೊಂಡಿರುವ ಪಾತ್ರ. ಇದಕ್ಕೂ ಮುನ್ನ ನಾಲ್ಕೈದು ಕಥೆ ರೆಡಿ ಮಾಡಿದ್ದೆ. ಆದರೆ, ಅದ್ಯಾವುದನ್ನೂ ಒಪ್ಪದ ನಿರ್ಮಾಪಕರು, ಕೊನೆಗೆ ಈ ಕಥೆ ಒಪ್ಪಿದ್ದಾರೆ. ಆಗಸ್ಟ್‌ನಿಂದ ಚಿತ್ರೀಕರಣ ಶುರುವಾಗಲಿದೆ ‘ ಎಂದು ವಿವರ ಕೊಟ್ಟರು.
ನಾಯಕ ನಕುಲ್‌ಗೌಡ ಸಿಕ್ಕಾಪಟ್ಟೆ ಖುಷಿಯಲ್ಲಿದ್ದರು. ಅದಕ್ಕೆ ಕಾರಣ, ಅಂದು ಅವರ ಬರ್ತ್‌ಡೇ. ಪಾತ್ರ ಕುರಿತು ಹೇಳಿಕೊಂಡ ಅವರು, “ಕಾಲೇಜು ದಿನಗಳಲ್ಲಿರಲಿ, ಯೌವ್ವನದ ದಿನದಲ್ಲಿರಲಿ ಹಳೆಯ ನೆನಪುಗಳು ಇದ್ದೇ ಇರುತ್ತವೆ. ಅದು ಸಿಹಿ-ಕಹಿ ಎರಡೂ ಆಗಿರುತ್ತೆ. ಇಲ್ಲಿ ಹೀರೋ ಬದುಕಲ್ಲೂ ಅಂಥದ್ದೊಂದು ನೆನಪುಗಳಿವೆ. ಇಲ್ಲಿ ಮೂವರು ನಾಯಕಿಯರು ಬಂದು ಹೋಗುತ್ತಾರೆ. ನಾಯಕ ತನ್ನ ಹಳೆಯ ಡವ್ ನೆನಪಲ್ಲೇ ಇರುತ್ತಾನಾ, ಇಲ್ಲವೋ ಎಂಬುದು ಕಥೆ ‘ ಎಂದರು ನಕುಲ್‌ಗೌಡ.
ತಬಲನಾಣಿ ಅವರಿಲ್ಲಿ ಒಂದು ಪಾತ್ರ ನಿರ್ವಹಿಸುತ್ತಿದ್ದು, ಅವರಿಗಿನ್ನೂ ಕಥೆ ಹಾಗೂ ಪಾತ್ರದ ಬಗ್ಗೆ ನಿರ್ದೇಶಕರು ಏನನ್ನೂ ಹೇಳಿಲ್ಲವಂತೆ. “ನನಗೂ ಹಳೆಯ ಡವ್ ಇರುತ್ತಾಳಾ ಇಲ್ಲವೋ ಎನ್ನುವುದಕ್ಕೆ ನೀವು ಸಿನಿಮಾ ನೋಡಿ. ಹೊಸಬರ ಪ್ರಯತ್ನ ಸಹಕಾರ ಇರಲಿ’ ಎಂಬುದು ತಬಲನಾಣಿ ಮಾತು.
ನಿರ್ಮಾಪಕ ಗಿರಿಧರ್ ಅವರು ಹೀರೋ ನಕುಲ್‌ಗೌಡ ಅವರ ಗೆಳೆಯರಂತೆ. ಅವರಿಗಾಗಿ ಒಂದು ಚಿತ್ರ ಮಾಡಬೇಕು ಅಂತ ನಿರ್ಧರಿಸಿ, ಈ ಚಿತ್ರ ನಿರ್ಮಿಸುತ್ತಿದ್ದಾರೆ. ಇನ್ನು, ಚಿತ್ರಕ್ಕೆ ವಿನೀತ್‌ರಾಜ್ ಮೆನನ್ ಸಂಗೀತ ನೀಡುತ್ತಿದ್ದಾರೆ. ಐದು ಹಾಡುಗಳಿದ್ದು, ಆ ಪೈಕಿ ಒಂದು ಹಾಡಿಗೆ ಅರ್ಜುನ್ ಜನ್ಯ ಅವರ ಸಂಗೀತ ಇರಲಿದೆ. ನಿರಂಜನ್‌ಬಾಬು ಇಲಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಅಂದು ವಿಧಾನಪರಿಷತ್ ಸದಸ್ಯ ಶರವಣ ಚಿತ್ರದ ಟೀಸರ್‌ಗೆ ಚಾಲನೆ ಕೊಟ್ಟರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಕರಿಸುಬ್ಬು, ಭಾ.ಮ.ಹರೀಶ್ ಚಿತ್ರಕ್ಕೆ ಶುಭಹಾರೈಸುವ ಹೊತ್ತಿಗೆ ಸಮಯ ಮೀರಿತ್ತು.
ಅಲ್ಲಿಗೆ ಹಳೆಯ ಡವ್ ಕುರಿತಾದ ಮಾತುಕತೆಗೂ ಬ್ರೇಕ್ ಬಿತ್ತು.