Advertisement

ಹಳೇ ಸಾಲ ಮನ್ನಾ ಆಗಿಲ್ಲ, ಹೊಸ ಸಾಲ ಸಿಗ್ತಿಲ್ಲ

09:11 PM Jul 03, 2019 | Lakshmi GovindaRaj |

ನಂಜನಗೂಡು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ತಾಲೂಕು ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾಕಾರರನ್ನುದ್ದೇಶಿ ಮಾತನಾಡಿದ ಕುರುಬೂರು ಶಾಂತಕುಮಾರ್‌, ರಾಜ್ಯ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಮೈತ್ರಿ ಸರ್ಕಾರದ ದ್ವಂದ್ವ ನೀತಿಯಿಂದಾಗಿ ರೈತರ ಹಳೇ ಸಾಲ ಮನ್ನಾ ಆಗಿಲ್ಲ. ಹೊಸ ಸಾಲವೂ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪರದಾಟ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಇಬ್ಬುಗೆ ನೀತಿಯಿಂದ ಸಾಲ ಪಡೆಯಲು ರೈತರು ಪರದಾಡುವಂತಾಗಿದೆ. ರಾಜ್ಯದ ಕಬ್ಬು ಬೆಳೆಗಾರರಿಗೆ 3,000 ಕೋಟಿ ರೂ. ಬಾಕಿ ಬರಬೇಕಿದೆ. ಒಂದೆಡೆ ಬರದಿಂದ ಕಬ್ಬು, ಬಾಳೆ ಮತ್ತಿತರ ಬೆಳೆಗಳು ಒಣಗುತ್ತಿವೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಆದರೆ, ಅಧಿಕಾರಿಗಳ ಅಂಧ ದರ್ಬಾರ್‌ ಜೋರಾಗಿ ನಡೆಯುತ್ತಿದೆ ಎಂದು ಕಿಡಿಕಾರಿದರು.

ಸಹಾಯಧನ ಕೊಡಿ: ರಾಜ್ಯಾದ್ಯಂತ ಸುಮಾರು 10 ಲಕ್ಷ ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಈ ಬಾವಿಗಳ ಮಾಲೀಕರಿಗೆ ಸಹಾಯಧನ ಕಲ್ಪಿಸಬೇಕು. ಬೆಳೆನಷ್ಟ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಕುಡಿಯಲೂ ನೀರಿಲ್ಲ: ಮುಖಂಡ‌ ಶಿವಮೂರ್ತಿ ದೇವರಾಜು ಮಾತನಾಡಿ, ತಾಲೂಕಿನಲ್ಲಿ ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಕೌಲಂದೆ ಹೋಬಳಿಯ ಕೋಂತಯ್ಯನ ಹುಂಡಿಯಲ್ಲಿ ಟ್ಯಾಂಕರ್‌ ಮೂಲಕ ಪ್ರತಿ ಮನೆಗೆ ಕೇವಲ ಎರಡೇ ಬಿಂದಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆ ಗ್ರಾಮದ ಮಹಿಳೆಯರು ಇಂದು ನಮ್ಮ ಜೊತೆ ಖಾಲಿ ಕೊಡ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ತಾಲೂಕು ದಂಡಾಧಿಕಾರಿಗಳು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಮನವಿ: ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯ ಉಪಉತ್ಪನ್ನಗಳ ಲಾಭ ಬೆಳಗಾರರಿಗೂ ಸಿಗಬೇಕು. ಕಬ್ಬು ಕಟಾವು ಆದ ತಕ್ಷಣ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕು. ರೈತರಿಗೆ ಹೊಸ ಸಾಲ ನೀಡಬೇಕು ಸೇರಿದಂತೆ ಸುಮಾರು 14 ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಶೀಲ್ದಾರ್‌ ಮಹೇಶ ಕುಮಾರ್‌ ಅವರಿಗೆ ಸಲ್ಲಿಸಿದರು.

ಭರವಸೆ: ನಿಮ್ಮ ಬೇಡಿಕೆಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲಾಗುವುದು. ಕೊಂತಯ್ಯನ ಹುಂಡಿಯ ನೀರಿನ ಬವಣೆ ಇದೀಗ ತಮ್ಮ ಗಮನಕ್ಕೆ ಬಂದಿದ್ದು, ಅಲ್ಲಿನ ಲೋಪದೋಷಗಳನ್ನು ಸರಿಪಡಿಸಲಾಗುವುದು ಎಂದು ತಹಶೀಲ್ದಾರ್‌ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಹಾಡ್ಯ ರವಿ, ಉಪಾಧ್ಯಕ್ಷ ಬಜಂಗಪ್ಪ, ಮುಖಂಡರಾದ ಚಿಕ್ಕಸ್ವಾಮಿ ಕಪಿಲೇಶ, ಮಹದೇವಸ್ವಾಮಿ, ಸೋಮಶೇಖರ್‌, ಬಸವಣ್ಣ, ಮಂಜುನಾಥ ಹಾಗೂ ಕೊಂತಯ್ಯನ ಹುಂಡಿಯ ಮಹಿಳೆಯರಾದ ಮಾದೇವಮ್ಮ, ರಾಣಿ, ನೀಲಮ್ಮ, ತಾಯುಮುತ್ತು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next