Advertisement
ಅದು ಗೋಧೂಳಿ ಸಮಯ. ಸೌಮ್ಯ ಕೇಶವ ಗುಡಿಯ ಆವರಣದಲ್ಲಿ ಕೆಂಬಣ್ಣದ ಬಿಸಿಲು ನರ್ತಿಸುತ್ತಿತ್ತು. ಹುಡುಗರಾಡುವ ಆಟಕ್ಕೆ ಅಂಗಳದಲ್ಲಿ ಮೇಲೆದ್ದ ಧೂಳು ಢಾಳಾದ ಬಿಸಿಲಿನಲ್ಲಿ ಕಲೆತು ಈಸ್ಟ್‌ಮನ್ ಕಲರ್ ಸಿನಿಮಾದ ದೃಶ್ಯವೊಂದು ಅಲ್ಲಿ ಸೃಷ್ಟಿಯಾಗಿತ್ತು. ಇಪ್ಪತ್ತು ವರ್ಷಗಳ ಹಿಂದಿನ ಕಥನ ಬಿಚ್ಚಿಕೊಳ್ಳುವುದೇ ಹೀಗೆ ನೋಡಿ.
Related Articles
Advertisement
ಅಂದಿನ ದೊಡ್ಡ ರಹಸ್ಯವೊಂದನ್ನು ಹೇಳುತ್ತೇನೆ ಕೇಳಿ. ಸಾಮಾನ್ಯವಾಗಿ ಹುಡುಗ-ಹುಡುಗಿಯರ ನಡುವೆ ಮಧ್ಯೆ “ಏನೋ’ ಇದೆ ಎಂಬ ಗುಮಾನಿ ನೋಡುಗರ ಕಣ್ಣಿನಲ್ಲಿರುತ್ತದೆ. ಗುಮಾನಿಗಳಿಗೆ ಆಹಾರವಾಗುವ ಅಪಾಯದಿಂದ ತಪ್ಪಿಸಿಕೊಳ್ಳಲು ಕೆಲವು ಹುಡುಗ ಹುಡುಗಿಯರು ಅಣ್ಣ ತಂಗಿ ಸೆಂಟಿಮೆಂಟ್ ಕ್ರಿಯೇಟ್ ಮಾಡಿಬಿಡುತ್ತಿದ್ದರು. ಜೊತೆಗಿದ್ದವರು ಇಂಥ ಘನಘೋರ ಕೃತ್ಯ ಮಾಡಿದ್ದಾರೆ ಎಂದು ನನಗೆ ತಿಳಿದದ್ದು ಅವರ “ಮದುವೆಯ ಮಮತೆಯ ಕರೆಯೋಲೆ’ಯನ್ನು ಕೈಗಿತ್ತಾಗಲೆ! ಕೆಲವರಂತೂ “ಅಣ್ಣಾ’ ಎಂಬ ಬಾಂಧವ್ಯಕ್ಕೆ ಸೋತು ಇಂದಿಗೂ ಕೊರಗುತ್ತಿದ್ದಾರೆ.
ಹಾಸ್ಟಲ್‌ನಲ್ಲಿ ನಡೆದ ಸಂಗತಿಯೊಂದು ನೆನೆದರೆ ನಗುನ ಕಾರಂಜಿ ಚಿಮ್ಮುತ್ತದೆ. ಸಹಜವಾಗಿ ನಾನು ಕೆಲವು ಸಿನಿಮಾ ನಟರ ಮತ್ತು ಪರಿಚಿತರ ದನಿಗಳನ್ನು ಅನುಕರಿಸುತ್ತಿದ್ದೆ. ನಮ್ಮ ಹಾಸ್ಟೆಲ್ ವಾರ್ಡನ್ ರ ದನಿಯನ್ನು ಅನುಕರಿಸುವುದು ನನಗೆ ಕರಗತವಾಗಿತ್ತು. ಅವರು ಮಂಗಳೂರಿನವರು. ಸದಾ ಹೇಳುತ್ತಿದ್ದದ್ದು ಒಂದೇ ಡೈಲಾಗ್ “ಹೇ, ಯಾಕೆ ಹೊರಗೆ ನಿಂತದು,ª ಒಳಗೆ ಕೂತು ಓದ್ಲಿಕ್ ಆಗಲ್ವಾ?’ ಎಂದು. ವಾರ್ಡನ್ ಇಲ್ಲದ ದಿನ ಹಾಸ್ಟೆಲ್‌ನಲ್ಲಿ, ಹೊನಲು ಬೆಳಕಿನ ಕೇರಂ ಪಂದ್ಯ ನಡೆಯುತ್ತಿತ್ತು. ಬೆಟ್ಟಿಂಗ್ ಕೂಡ ಪುಡಿಗಾಸಿನಲ್ಲಿ ಭರ್ಜರಿಯಾಗಿ ನಡೆಯುತ್ತಿತ್ತು. ಒಂದು ದಿನ ರಾತ್ರಿ ಕೇರಂ ಆಟ ತಾರಕ ಸ್ಥಿತಿಯಲ್ಲಿದ್ದಾಗ ಹೊರಗಿನಿಂದ ನಾನು ವಾರ್ಡನ್ ಡೈಲಾಗ್ ಹೊಡೆದೆ. ಎಲ್ಲರೂ ಲೈಟ್ ಆರಿಸಿ ಗಪ್ ಚುಪ್ ಆಗಿ ಮಲಗಿಬಿಟ್ಟರು! ಆದರೆ, ಎಷ್ಟು ಹೊತ್ತಾದರೂ ವಾರ್ಡ್‌ನ್ ಸುಳಿವಿಲ್ಲ. ಎಷ್ಟೋ ದಿನಗಳ ನಂತರ ಈ ವಿಷಯ ಬಹಿರಂಗವಾದಾಗ ನನಗೆ ಎಲ್ಲರೂ ಕಣ್ಣಿನಲ್ಲೇ ಗುಮ್ಮಿದರು.
ಈ ಎಲ್ಲಾ ಸಂತಸಗಳ ನಡುವೆ ಕೆಲವರ ಮನೆಯಲ್ಲಿನ ಸಾವುಗಳು ನಮ್ಮನ್ನು ವಿಹ್ವಲಗೊಳಿಸುತ್ತಿದ್ದವು. ಕೋರ್ಸ್ ಮುಗಿಸಿದ ಕೆಲ ವರ್ಷಗಳ ನಂತರ ನಮ್ಮ ಪ್ರೀತಿಯ ಜೆ.ಎನ್. ಸರ್, ಶ್ವಾಸಕೋಶದ ಕ್ಯಾನ್ಸರ್‌ನಿಂದ ಸತ್ತ ಸುದ್ದಿ ಕೇಳಿ ಇದ್ದಲ್ಲೇ ಕರಗಿದೆವು, ಮರುಗಿದೆವು. ಹಲವು ಸುಖ ಮತ್ತು ಸಂಕಷ್ಟಗಳ ಆ ಕಾಲೇಜ್ ಲೈಫ್, ಇಂದು ಹೆಂಡತಿ ಮಾಡಿಟ್ಟ ರುಚಿ ರುಚಿ ಚೌಚೌ ಬಾತ್ ತಿನ್ನುವಾಗ ಗುದ್ದಿಗೊಂಡು ಬಂದು ನೆನಪಾಯಿತು.
-ಕಂಡಕ್ಟರ್ ಸೋಮು, ಎಡೆಯೂರು