ಸೋಮವಾರಪೇಟೆ: ಸಾಲಬಾಧೆಯಿಂದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ತಾಕೇರಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಕಾಫಿ ಬೆಳೆಗಾರರಾದ ಎಸ್.ಎಂ. ಅಪ್ಪಯ್ಯ (81), ಪತ್ನಿ ಬೊಳ್ಳಮ್ಮ (75) ಮೃತಪಟ್ಟವರು. ಬುಧವಾರ ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದೆ. ಏಣಿಯೊಂದಿಗೆ ಪಕ್ಕದ ಕಾಫಿ ತೋಟಕ್ಕೆ ತೆರಳಿದ ದಂಪತಿ ಸಿಲ್ವರ್ ಮರ ಹಾಗೂ ಹುಳಿ ಮರಕ್ಕೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ.
ವೃದ್ಧ ದಂಪತಿಯೊಂದಿಗೆ ಅವರ ಮಗ-ಸೊಸೆ ವಾಸವಾಗಿದ್ದು, ಬುಧವಾರ ಬೆಳಗ್ಗೆ ಸೋಮವಾರ ಪೇಟೆ ಯಲ್ಲಿನ ಮದುವೆ ಸಮಾರಂಭಕ್ಕೆ ತೆರಳಿದ್ದರು. ಅನಂತರ ದಂಪತಿ ಈ ಕೃತ್ಯ ಎಸಗಿದ್ದಾರೆ. ಸಂಜೆ ಮರಳಿದ ಮಗ-ಸೊಸೆ ಮನೆ ಯಲ್ಲಿ ಹಿರಿಯರನ್ನು ಕಾಣದಿದ್ದಾಗ ಕುಟುಂಬಿಕರೊಂದಿಗೆ ಸೇರಿ ಹುಡು ಕಾಟ ಆರಂಭಿಸಿದರು. ಆಗ ಸಮೀಪದ ಕಾಫಿ ತೋಟದಲ್ಲಿ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾದವು. ಸೋಮವಾರಪೇಟೆ ವೃತ್ತನಿರೀಕ್ಷಕ ನಂಜುಂಡೇಗೌಡ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಮೃತರು ಓರ್ವ ಪುತ್ರ ಹಾಗೂ 6 ಮಂದಿ ಪುತ್ರಿಯರನ್ನು ಅಗಲಿದ್ದಾರೆ. ಪುತ್ರಿಯರೆಲ್ಲ ವಿವಾಹವಾಗಿ ಬೇರೆಡೆ ನೆಲೆಸಿದ್ದಾರೆ.
ಮಳೆಯಿಂದ ಹಾನಿ: ಸಾಲ ಮರುಪಾವತಿ ಚಿಂತೆ
ಪ್ರಕೃತಿ ವಿಕೋಪದಿಂದ ಕೃಷಿ ಫಸಲು ಹಾಳಾಗಿದ್ದು, ಕಾಫಿ, ಕಾಳು ಮೆಣಸು ಫಸಲು ನಾಶವಾಗಿದೆ. ಐಗೂರು ಕೃಷಿಪತ್ತಿನ ಸಹಕಾರ ಸಂಘದಲ್ಲಿ 4 ಲಕ್ಷ ರೂ. ಸಾಲ ಇದ್ದು, ಸಾಲ ಮರುಪಾವತಿಯ ಬಗ್ಗೆ ತಂದೆ-ತಾಯಿ ಆತಂಕಗೊಂಡಿದ್ದರು ಎಂದು ಪುತ್ರ ಕಾಳಪ್ಪ ಸೋಮವಾರಪೇಟೆ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.