Advertisement

ಪ್ಲಾಸ್ಟಿಕ್‌ ಬದಲು ಹಳೆ ಬಟ್ಟೆ

09:33 AM Oct 23, 2019 | Suhan S |

ನರೇಗಲ್ಲ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ ಪ್ಲಾಸ್ಟಿಕ್‌ ಮುಕ್ತ ಭಾರತ ಅಭಿಯಾನ ಯಶಸ್ವಿಗೆ ಅಬ್ಬಿಗೇರಿ ಗ್ರಾಪಂ ಮುಂದಾಗಿದ್ದು, ಗ್ರಾಮದಲ್ಲಿನ ಪ್ರತಿಯೊಂದು ಮನೆಯಲ್ಲಿರುವ ಹಳೆಯ ಬಟ್ಟೆ ಸಂಗ್ರಹಿಸಿ ಕೈ ಚೀಲವನ್ನಾಗಿ ತಯಾರಿಸಲಾಗುತ್ತಿದೆ.

Advertisement

ಪ್ಲಾಸ್ಟಿಕ್‌ ಬಳಕೆ ಕೈ ಬಿಡುವಂತೆ ಜಾಗೃತಿ ಮೂಡಿಸಲು ಸಮೀಪದ ಅಬ್ಬಿಗೇರಿ ಗ್ರಾಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮದಲ್ಲಿನ ಎಲ್ಲ ಅಂಗಡಿಗಳಿಗೆ ಹಳೆ ಬಟ್ಟೆ ನೀಡಿ 10,600ಕ್ಕೂ ಹೆಚ್ಚು ಬಟ್ಟೆಯ ಕೈ ಚೀಲ ಹೊಲಿಸುವ ಮೂಲಕ ನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಚೀಲದ ಮೇಲೆ ಪ್ಲಾಸ್ಟಿಕ್‌ ನಿಷೇಧಿಸಿ ಜೀವ ಸಂಕುಲ ಉಳಿಸಿ ಎಂಬ ಘೋಷವಾಕ್ಯವಿದ್ದು, ಪ್ಲಾಸ್ಟಿಕ್‌ ಮುಕ್ತ ಗ್ರಾಮವಾಗಿಸಲು ನಡೆಸಿರುವ ಯತ್ನ ಎಲ್ಲರನ್ನು ಬೆರಗುಗೊಳಿಸಿದೆ.

ಕೈಚೀಲಕ್ಕೆ ಎರಡು ರೂ.: ಗ್ರಾಮದಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, 200ಕ್ಕೂ ಅಧಿಕ ಅಂಗಡಿಗಳಿವೆ. ಪ್ರತಿಯೊಂದು ಅಂಗಡಿಗಳಿಗೆ ಹಾಗೂ ಸಾರ್ವಜನಿಕರಿಗೆ 2 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಂಗಡಿ ಮಾಲೀಕರು ತಮ್ಮಗೆ ಬೇಕಾದಷ್ಟು ಖರೀದಿಸುತ್ತಿದ್ದಾರೆ. ಗ್ರಾಮದಲ್ಲಿ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

ನಿಷೇಧಕ್ಕೆ ಸಹಕರಿಸಿ: ದಿನವೂ ವಿವಿಧ ಕಾರಣಕ್ಕೆ ಮಾರುಕಟ್ಟೆಗೆ ಹೋಗುವ ಸಾರ್ವಜನಿಕರು ಪ್ಲಾಸ್ಟಿಕ್‌ ಚೀಲಗಳನ್ನೇ ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಸೂಚನೆ ಮೇರೆಗೆ ತಾಲೂಕಿನಲ್ಲಿ ಪ್ಲಾಸ್ಟಿಕ್‌ನ್ನು ಸಂಪೂರ್ಣ ನಿಷೇಧಿಸಲಾಗಿದೆ. ಹೀಗಾಗಿ ಅಂಗಡಿಗಳಲ್ಲೂ ಪ್ಲಾಸ್ಟಿಕ್‌ ಚೀಲ ಸಿಗುತ್ತಿಲ್ಲ. ಹೀಗಾಗಿ ಜನರಿಗೆ ಸರಳ ದರದಲ್ಲಿ ಬಟ್ಟೆಯ ಕೈ ಚೀಲ ಸಿಗುವಂತೆ ಮಾಡಲಾಗುತ್ತಿದೆ. ಇದರಲ್ಲಿ ತರಕಾರಿ, ರೇಷನ್‌, ದಿನಸಿ ತರಬಹುದಾಗಿದೆ. ಪ್ರತಿಯೊಬ್ಬರೂ ಪ್ಲಾಸ್ಟಿಕ್‌ ನಿಷೇಧಕ್ಕೆ ಸಹಕರಿಸುವ ಅಗತ್ಯವಿದೆ.

ಗ್ರಾಮದಲ್ಲಿನ ಪ್ರತಿಯೊಬ್ಬ ನಾಗರಿಕರು ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಲು ನಿರ್ಧರಿಸುವ ಅಗತ್ಯವಿದೆ. ಅಡುಗೆ ಮನೆಯ ಸಾಮಗ್ರಿಗಳು ಪ್ಲಾಸ್ಟಿಕ್‌ ಮಯವಾಗುವುದನ್ನು ತಡೆಯಬೇಕು. ಮಾರುಕಟ್ಟೆಗೆ ತೆರಳಿದಾಗ ಪ್ಲಾಸ್ಟಿಕ್‌ ಕವರ್‌ ಗಳನ್ನು ನೆಚ್ಚಿಕೊಂಡಿರಬಾರದು. ಪ್ಲಾಸ್ಟಿಕ್‌ ಬದಲಾಗಿ ಪರಿಸರಸ್ನೇಹಿ ಬಟ್ಟೆ ಚೀಲಗಳನ್ನು ಅನುಸರಿಸಿದರೆ ಪರಿಸರ ಸಂರಕ್ಷಣೆಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. –ಕಳಕಪ್ಪ ಬಿಲ್ಲ, ಗ್ರಾಪಂ ಅಧ್ಯಕ್ಷ

Advertisement

 

ಕನ್ನಡ ರಾಜ್ಯೋತ್ಸವದಂದೇ ಸಂಪೂರ್ಣ ಬಟ್ಟೆ ಕೈ ಚೀಲಗಳನ್ನು ಅಂಗಡಿ ಹಾಗೂ ಸಾರ್ವಜನಿಕರಿಗೆ ವಿತರಿಸಲಾಗುವುದು. ತೆರಿಗೆ ಸಂಪನ್ಮೂಲದಿಂದ ಬರುವ ಸ್ವಲ್ಪ ಆದಾಯವನ್ನು ಚೀಲಗಳ ಮೇಲೆ ಘೋಷವಾಕ್ಯ ಹಾಕಿಸಲು ಬಳಸಲಾಗಿದೆ. ಈ ಪ್ರಕ್ರಿಯೆಯು ನಿರಂತರವಾಗಿರುತ್ತದೆ. ನಮ್ಮ ಕೆಲಸ ಮತ್ತೂಬ್ಬರಿಗೆ ಮಾದರಿಯಾದರೆ ಶ್ರಮ ಸಾರ್ಥಕವಾಗುತ್ತದೆ. ಶಿವನಗೌಡ ಮೆಣಸಗಿ, ಪಿಡಿಒ

 

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next