Advertisement

ಹಳೆ ಕಾರಿಗೆ ಹೊಸ ಖದರ್‌

06:59 PM May 22, 2019 | mahesh |

ಮಾರುತಿ ಸುಝುಕಿ 800 ಜಮಾನಾ ಮುಗಿದು 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಆಲ್ಟೋ 800 ಮಾರುಕಟ್ಟೆಗೆ ಬಂದಿದ್ದಾಗ ದೊಡ್ಡ ಸುದ್ದಿಯಾಗಿತ್ತು. ಬಳಿಕ 2012ರಲ್ಲಿ ಹೊಸ ಆಲ್ಟೋ ಕಾರು ಬಿಡುಗಡೆಯಾಗಿದ್ದು, ಈಗ ಮತ್ತೆ ಸುಧಾರಿತ ಆವೃತ್ತಿಯ ಮತ್ತೂಂದು ಹೊಸ ಆಲ್ಟೋ ಕಾರು ಮಾರುಕಟ್ಟೆಗೆ ಬಂದಿದೆ. ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಸರಕಾರ ತಂದಿರುವ ಕಾನೂನಿಗೆ ಅನುಗುಣವಾಗಿ ಎಲ್ಲ ಕಾರು ತಯಾರಕರೂ ಕಾರಿನ ಉತ್ಪಾದನೆ ಮಾಡಬೇಕಿದ್ದು, ಅದರಂತೆ ಮಾರುತಿ ಸುಝುಕಿ ಕೂಡ ಸುರಕ್ಷತಾ ಮಾನದಂಡಗಳಿರುವ ಕಾರನ್ನು ಬಿಡುಗಡೆ ಮಾಡಿದೆ.

Advertisement

ಹೊಸತೇನು?
ಹೊಸ ಕಾರಿಗೆ ಹೊಸ ರೂಪುರೇಷೆ ಏನೂ ಇಲ್ಲ. ಆದರೆ ಎಂಜಿನ್‌ ತುಸು ಸುಧಾರಣೆಯಾಗಿದೆ. ಕಡಿಮೆ ಮಾಲಿನ್ಯ ಉಂಟುಮಾಡುವ ಬಿಎಸ್‌6 ಎಂಜಿನ್‌ ಇದರಲ್ಲಿದೆ. ಜತೆಗೆ ಕಂಪೆನಿ ತನ್ನ ಆಲ್ಟೋ ಹೆಸರಿನೊಂದಿಗೆ ಇದ್ದ 800 ಅನ್ನು ಕೈಬಿಟ್ಟಿದ್ದು ಮಾರುತಿ ಸುಝುಕಿ ಆಲ್ಟೋ ಎಂಬುದನ್ನು ಮಾತ್ರ ಉಳಿಸಿಕೊಂಡಿದೆ.

ವಿನ್ಯಾಸ
ಹೊರ ವಿನ್ಯಾಸದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ಎಂಜಿನ್‌ ರೇಡಿಯೇಟರ್‌ ಎದುರಿನ ಗ್ರಿಲ್‌ ಅನ್ನು ಮರುರೂಪಿಸಲಾಗಿದ್ದು ಆಕರ್ಷಕವಾಗಿದೆ. ಜತೆಗೆ, ಹೆಡ್‌ಲ್ಯಾಂಪ್‌ ಅನ್ನು ಮತ್ತಷ್ಟು ಅಂದಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ಮುಂಭಾಗದ ಬಂಪರ್‌ ಕೂಡ ಸುಧಾರಣೆಯಾಗಿದೆ. ಕಾರಿನ ಡೋರ್‌ ಕೂಡ ಹೊಸ ವಿನ್ಯಾಸದ ಪ್ರಕಾರ ತುಸು ಮಾರ್ಪಾಡಾಗಿದೆ. 3395 ಎಂ.ಎಂ. ಉದ್ದವಿರುವ ಈ ಕಾರು ಹಿಂದಿನ ಆಲ್ಟೋ ಕಾರಿಗಿಂತ ತುಸು ಹೆಚ್ಚು ಆಕರ್ಷಕವಾಗಿದೆ. ಎಲ್ಲ ಮಾಡೆಲ್‌ಗ‌ಳಲ್ಲಿ ಡ್ರೈವರ್‌ ಸೈಡ್‌ ಏರ್‌ಬ್ಯಾಗ್‌ ಮತ್ತು ಎಬಿಎಸ್‌, ಇಬಿಡಿ ವ್ಯವಸ್ಥೆ ಇದ್ದು ಟಾಪ್‌ಎಂಡ್‌ ವಿಎಕ್ಸ್‌ಐ ಮಾಡೆಲ್‌ನಲ್ಲಿ ಮುಂಭಾಗ ಎರಡು ಏರ್‌ಬ್ಯಾಗ್‌ಗಳಿವೆ.

ಒಳಾಂಗಣ ವಿನ್ಯಾಸ
ಒಳಾಂಗಣ ವಿನ್ಯಾಸವನ್ನು ಸ್ವಲ್ಪ ಮಟ್ಟಿಗೆ ಆಲ್ಟೋ ಕೆ10 ಮಾದರಿಯಲ್ಲಿ ರೂಪಿಸಲಾಗಿದೆ. ಡ್ನೂಯೆಲ್‌ಟೋನ್‌ ಕಲರಿನ ಈ ಕಾರು ಆಕರ್ಷಕವಾಗಿದೆ. ಡೋರ್‌ಪ್ಯಾಡ್‌ಗೆ ಕೂಡ ಡ್ಯುಯೆಲ್‌ ಟೋನ್‌ ಕಲರ್‌ ಇದೆ. ಸ್ಟೀರಿಂಗ್‌ ಮತ್ತು ಇತರ ವ್ಯವಸ್ಥೆಗಳು ಹಳೆಯದರಂತೆಯೇ ಇವೆ. ಟಾಪ್‌ಎಂಡ್‌ ಮಾಡೆಲ್‌ನಲ್ಲಿ 2 ಸ್ಪೀಕರ್‌ನ ಆಡಿಯೋ ವ್ಯವಸ್ಥೆ, ಬ್ಲೂಟೂತ್‌, ಆಕ್ಸ್‌ ವ್ಯವಸ್ಥೆ, ಯುಎಸ್‌ಬಿ ಇರಲಿದೆ.

ಡ್ರೈವಿಂಗ್‌ ಅನುಭವ
ಹಿಂದಿನ ಕಾರಿಗೂ ಇದಕ್ಕೂ ಹೆಚ್ಚೇನು ಚಾಲನಾ ಅನುಭವ ವ್ಯತ್ಯಾಸವಿಲ್ಲ. 796 ಸಿಸಿಯ ಎಫ್8ಡಿ ಎಂಜಿನ್‌ ಇದರಲ್ಲಿದ್ದು 5 ಸ್ಪೀಡ್‌ ಗೇರ್‌ ಬಾಕ್ಸ್‌ ಹೊಂದಿದೆ. ಇದರಲ್ಲಿ ಆಟೋಮ್ಯಾಟಿಕ್‌ ಗಿಯರ್‌ ಮಾಡೆಲ್‌ ಇಲ್ಲ. ಸಿಎನ್‌ಜಿ ಮಾಡೆಲ್‌ ಅನ್ನು ಕೂಡ ಕೈಬಿಡಲಾಗಿದೆ. ಪ್ರಮುಖವಾಗಿ ಬಿಎಸ್‌6 ಮಾದರಿಗಾಗಿ ಎಕ್ಸಾಸ್ಟ್‌ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. 48 ಎಚ್‌ಪಿ, 69ಎನ್‌ಎಂ ಟಾರ್ಕ್‌ನಷ್ಟು ಶಕ್ತಿಯನ್ನು ಈ ಎಂಜಿನ್‌ ಉತ್ಪಾದನೆ ಮಾಡುತ್ತದೆ. ನಗರ ಸವಾರಿಗೆ ವಾರಾಂತ್ಯದ ತಿರುಗಾಟಕ್ಕೆ ಈ ಕಾರು ಸೂಕ್ತವಾಗಿದೆ. ಎಂಜಿನ್‌ ಶಬ್ದ ಮತ್ತಷ್ಟು ಕಡಿಮೆಯಾಗಿದೆ. ಉತ್ತಮ ಥ್ರೋಟಲ್‌ ರೆಸ್ಪಾನ್ಸ್‌ ಇದೆ. ಕಂಪೆನಿ ಹೇಳುವಂತೆ 22 ರಿಂದ 24ರವರೆಗೆ ಮೈಲೇಜ್‌ ಕೊಡಲಿದೆ.

Advertisement

ಬೆಲೆ ಎಷ್ಟು?
ಹಿಂದಿನ ಕಾರಿಗೆ ಹೋಲಿಸಿದರೆ ಈಗಿನ ಆಲ್ಟೋ ಬೆಲೆ ತುಸು ದುಬಾರಿ 25 ಸಾವಿರದಿಂದ 38 ಸಾವಿರ ರೂ.ಗಳಷ್ಟು ಇದರ ಬೆಲೆ ಹೆಚ್ಚಾಗಿದೆ. (ದೆಹಲಿ ಎಕ್ಸ್‌ಶೋರೂಂ ದರ 2.94 ಲಕ್ಷ ರೂ.ಗಳಿಂದ ಆರಂಭ) ಇದಕ್ಕೆ ಕಾರಣ ಎಬಿಎಸ್‌ ಮತ್ತು ಬಿಎಸ್‌6 ಎಂಜಿನ್‌ ಜತೆಗೆ ಪಾರ್ಕಿಂಗ್‌ ಸೆನ್ಸರ್‌. ಕಾರಿನ ಒಟ್ಟು ಸಾಮರ್ಥಯ ಹಾಗೆಯೇ ಇದೆ. ಆಲ್ಟೋ ಬಜೆಟ್‌ ಕಾರ್‌ ಆಗಿದ್ದು, ಭಾರತೀಯರಿಗೆ ಅಚ್ಚುಮೆಚ್ಚಿನದ್ದಾಗಿದೆ. ಸದ್ಯ ಹೊಸ ಫೀಚರ್‌ಗಳನ್ನು ನೀಡಿರುವುದರಿಂದ ಸ್ವಲ್ಪ ಮಟ್ಟಿಗೆ ಮಾರುಕಟ್ಟೆಯಲ್ಲಿ ಹೆಸರು ಮಾಡುವ ಸಾಧ್ಯತೆ ಇದೆ.

ಈಶ

Advertisement

Udayavani is now on Telegram. Click here to join our channel and stay updated with the latest news.

Next