ಶಿರಸಿ: ಐದಾರು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿರುವ ಹಳೆ ಬಸ್ ನಿಲ್ದಾಣ ಅಪಾಯದ ಕರೆಗಂಟೆ ಬಾರಿಸುತ್ತಿದೆ. ಆದರೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಳೆದ ನಾಲ್ಕು ವರ್ಷದ ಹಿಂದೆಯೇ ಕೆಡವಲು ಟೆಂಡರ್ ರೆದರೂ ಯಾರೂ ಬಂದಿಲ್ಲ!
2016-17ರಲ್ಲಿ ನಾಲ್ಕು ಸಲ ವಾಯುವ್ಯ ಸಾರಿಗೆ ಸುಮಾರು 5 ಗುಂಟೆ ಜಾಗದ ಎರಡು ಮಹಡಿ ಕಟ್ಟಡ ಕೆಡವಲು ಟೆಂಡರ್ ಕರೆದಿತ್ತು. ಬರೋಬ್ಬರಿ ನಾಲ್ಕು ಸಲ ಟೆಂಡರ್ ಕರೆದರೂ ಯಾರೂ ಹಾಕಿಲ್ಲ. ಏಕೆಂದರೆ, ಇದ್ದದ್ದು ಕೇವಲ 2,80,577 ರೂ. ಟೆಂಡರ್ ಮೊತ್ತ. ನಗರದ ಹೊರಗೆ ಸಿಮೆಂಟ್ ಇಟ್ಟಿಗೆ ಸಾಗಾಟಕ್ಕೂ ಸಮಸ್ಯೆ, ಹಣದ ಕೊರತೆ ಕೂಡ ಆಗುತ್ತಿದೆ. ಈ ಕಾರಣದಿಂದ ಟೆಂಡರ್ ಕರೆದರೂ ಯಾವ ಗುತ್ತಿಗೆದಾರರೂ ಕಣ್ಣೆತ್ತಿ ನೋಡುತ್ತಿಲ್ಲ. ಹಳೆ ಬಸ್ ನಿಲ್ದಾಣ ನಿಜಕ್ಕೂ ಮತ್ತಷ್ಟು ಹಳೆಯದಾಗುತ್ತಿದೆ.
ನಗರ ಹೃದಯ ಭಾಗದಲ್ಲಿರುವ ಹಳೆ ಬಸ್ ನಿಲ್ದಾಣ ಐದಾರು ದಶಕಗಳ ಹಿಂದೆ ನಿರ್ಮಾಣವಾದ ಕಟ್ಟಡ. ಅದು ತೀರಾ ಶಿಥಿಲಾವಸ್ಥೆ ತಲುಪಿದ್ದು ಮಳೆಗಾಲದಲ್ಲಿ ಸೋರುವುದು, ಕಟ್ಟಡದ ಸ್ಲಾಬ್ ಸಿಮೆಂಟ್ ಉದುರುವುದು ಕಳೆದ ಐದಾರು ವರ್ಷಗಳ ಹಿಂದೆಯೇ ಆರಂಭವಾಗಿದೆ. ಅದನ್ನು ಎಷ್ಟೇ ದುರಸ್ತಿ ಮಾಡಿದರೂ ಪ್ರಯೋಜನವಾಗಿಲ್ಲ. ನಗರ ಹೊರ ಭಾಗದಲ್ಲಿ ಹೊಸ ಬಸ್ ನಿಲ್ದಾಣವಿದ್ದರೂ ಮಧ್ಯದಲ್ಲಿರುವ ಹಳೆ ಬಸ್ ನಿಲ್ದಾಣವನ್ನೇ ಬಹುತೇಕ ಪ್ರಯಾಣಿಕರು ನಂಬಿದ್ದಾರೆ. ಇಲ್ಲಿಗೆ ನಿತ್ಯ ನೂರಾರು ಬಸ್‌ಗಳು ಬಂದು ಹೋಗುತ್ತವೆ. ದೂರ, ಗ್ರಾಮೀಣ ಸಾರಿಗೆಗಳ ಕೇಂದ್ರವಿದು. ಸಾವಿರಾರು ಪ್ರಯಾಣಿಕರ ಕೇಂದ್ರ. ಹೊಸ ಕಟ್ಟಡ ಕಟ್ಟಬೇಕು ಎಂಬುದು ಜನರ ಒತ್ತಾಯ. ಆದರೆ, ಆರಂಭದಲ್ಲೇ ದಂತ ವಿಘ್ನವಾಗಿದೆ.
ಹೊಸ ಯತ್ನ: ಈಗ ಸುಮಾರು 5 ಕೋ.ರೂ. ಮೊತ್ತದಲ್ಲಿ ನೂತನವಾಗಿ ಬಸ್ ನಿಲ್ದಾಣ ಕಟ್ಟಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವಿಸ್ತೃತ ವರದಿ ಕಳಿಸಲು ಸೂಚಿಸಲಾಗಿದೆ. ಭೂ ಸಾರಿಗೆ ನಿರ್ದೇಶನಾಲಯವು ಈ ಬಗ್ಗೆ ಅನುಮತಿ ನೀಡಿದ ಪರಿಣಾಮ ಬೆಂಗಳೂರಿನ ಶ್ರೇಯಸ್ ಕನ್ಸಲ್ಟನ್ಸಿಗೆ ಡಿಟೇಲ್ ಪ್ರಾಜೆಕ್ಟ್ಗೆ ಮನವಿ ಮಾಡಲಾಗಿದೆ. ಅದರ ಕೆಲಸ ಆರಂಭವಾಗಿದೆ. ಹಳೆ ಕಟ್ಟಡ ಕೆಡವಲು ಹಾಗೂ ಹೊಸ ಕಟ್ಟಡ ಕಟ್ಟಲು ಎರಡೂ ಸೇರಿಸಿ ಟೆಂಡರ್ ಕೊಡಬೇಕು ಎಂದು ಸಾರಿಗೆ ಸಂಸ್ಥೆ ಆಲೋಚಿಸಿದೆ. ಈ ಕಾರಣದಿಂದ 2020ರ ಮಧ್ಯಾವಧಿಯೊಳಗೆ ಕಟ್ಟಡ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ.