Advertisement

ಸಂಪೂರ್ಣ ಕುಸಿಯುವ ಭೀತಿಯಲ್ಲಿ ಹಳೆಯ ಕೇದಿಗೆಬನ ಸೇತುವೆ 

10:08 AM Aug 12, 2018 | Team Udayavani |

ಸುಬ್ರಹ್ಮಣ್ಯ: ಬೆಂಗಳೂರು, ಮೈಸೂರು, ಮಡಿಕೇರಿ ನಗರಗಳಿಗೆ ಹಾಗೂ ಕೇರಳಕ್ಕೆ ಸಂಪರ್ಕಿಸುವ ಸುಬ್ರಹ್ಮಣ್ಯ -ಜಾಲ್ಸೂರು-ಮೈಸೂರು ರಾಜ್ಯ ಹೆದ್ದಾರಿ 85ರಲ್ಲಿ ಕಲ್ಲಾಜೆ ಬಳಿಯ ಸೇತುವೆ ಶಿಥಿಲಾ ವಸ್ಥೆಗೆ ತಲುಪಿದ್ದು, ಸಂಪರ್ಕ ಕಡಿತ ಭೀತಿ ಎದುರಿಸುತ್ತಿದೆ.

Advertisement

ಧಾರ್ಮಿಕ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರು, ಮೈಸೂರು, ಮಡಿಕೇರಿ, ಕುಶಾಲನಗರ, ಸುಳ್ಯ ಹಾಗೂ ಕೇರಳಕ್ಕೆ ಪ್ರಮುಖ ಸಂಪರ್ಕ ರಸ್ತೆಯಿದು. ಬೆಂಗಳೂರು, ಮೈಸೂರು, ಮಡಿಕೇರಿ, ಕುಶಾಲನಗರ, ಸುಳ್ಯ ಹಾಗೂ ಪಕ್ಕದ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ನಿತ್ಯ 50ಕ್ಕೂ ಹೆಚ್ಚು ಟ್ರಿಪ್‌ ಸಾರಿಗೆ ಬಸ್‌ಗಳು ಹಾಗೂ ಸಹಸ್ರಾರು ಖಾಸಗಿ ವಾಹನಗಳು ಪ್ರಯಾಣ ಬೆಳೆಸುತ್ತವೆ. ಶಿರಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಬಂದ್‌ ಆಗಿದ್ದ ವೇಳೆ ಇದೇ ರಸ್ತೆ ಬಳಕೆಯಲ್ಲಿತ್ತು. ಸುಬ್ರಹ್ಮಣ್ಯ- ಜಾಲ್ಸೂರು ಹೆದ್ದಾರಿಗೆ ಹೊಂದಿಕೊಂಡಿರುವ ಕಲ್ಲಾಜೆಯ ಕೇದಿಗೆಬನ ಬಳಿ ಶತಮಾನದಷ್ಟು ಹಳೆಯ ಸೇತುವೆ ಈಗ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ.

ಅಡಿಭಾಗದಲ್ಲಿ ಬಿರುಕು
ಸೇತುವೆಯ ಅಡಿಭಾಗದಲ್ಲಿ ಭಾರಿ ಬಿರುಕು ಪತ್ತೆಯಾಗಿದೆ. ಸೇತುವೆಯ ಒಂದು ಭಾಗ ಸವೆದಿದೆ. ಸೇತುವೆಗೆ ಅಳವಡಿಸಿದ ಕಲ್ಲುಗಳು ಜರಿದು ಬಿದ್ದಿವೆ. ಕಲ್ಲುಗಳ ನಡುವೆ ದೊಡ್ಡ ಗಾತ್ರದ ಬಿರುಕು ಮೂಡಿವೆ. ಪಿಲ್ಲರ್‌ ಬಲ ಕಳೆದುಕೊಂಡಿದೆ. ಸೇತುವೆ ಮೇಲಿನಿಂದ ನೋಡಿದರೆ ತೊಂದರೆಗಳು ಕಾಣಿಸುವುದಿಲ್ಲ. ತಳ ಭಾಗದ ಕಡೆಗೆ ಕಣ್ಣು ಹಾಯಿಸಿದರೆ ಭೀತಿ ಹುಟ್ಟುತ್ತದೆ. ಯಾವಾಗ ಕುಸಿದು ಬೀಳುತ್ತದೋ ಅನ್ನುವ ಭಯ ಆವರಿಸುತ್ತದೆ.

ಇದು ನಿರ್ಮಾಣವಾದ ಅವಧಿ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಹಲವು ವರ್ಷಗಳಿಂದ ಕುಸಿಯುತ್ತಲೇ ಇರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಇದೀಗ ಈ ಭಾಗದಲ್ಲಿ ಭಾರೀ ಮಳೆಯಾಗಿದ್ದು, ರಭಸವಾಗಿ ಹರಿದು ಬಂದ ನೀರಿನ ಹೊಡೆ ತಕ್ಕೆ ಸೇತುವೆ ಶೇ. 60ರಷ್ಟು ಕುಸಿದಿದೆ. ಅಲ್ಲದೆ, ತಿರುವು- ಮುರುವುಗಳಿಂದ ಕೂಡಿದ ಇಕ್ಕಟ್ಟಿನ ಈ ರಸ್ತೆಯಲ್ಲಿ ತೆರಳುವುದೇ ದೊಡ್ಡ ಸಾಹಸ. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೇರಳಕ್ಕೆ ಪ್ರಮುಖ ಸಂಪರ್ಕ ರಸ್ತೆ ಇದಾಗಿದ್ದು, ಕಡಿತಗೊಂಡಲ್ಲಿ ಸುಬ್ರಹ್ಮಣ್ಯಕ್ಕೆ ದೊಡ್ಡ ಮಟ್ಟಿನ ನಷ್ಟ ಉಂಟಾಗಲಿದೆ. ಸ್ಥಳೀಯರೂ ಸಾಕಷ್ಟು ತೊಂದರೆಗೆ ಒಳಗಾಗುವರು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸುಬ್ರಹ್ಮಣ್ಯ ಭಾಗದಿಂದ ತಾಲೂಕು ಕೇಂದ್ರ ಸುಳ್ಯ ಹಾಗೂ ಇತರ ಪ್ರದೇಶಗಳಿಗೆ ತೆರಳುವವವರೂ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ.

ಪ್ರವಾಸಿಗರಿಗೆ ಮಾತ್ರ ವಲ್ಲದೆ ಕೃಷಿ ಅವಲಂಬಿತ ಜನರ ವ್ಯಾವಹಾರಿಕ ಬಳಕೆಯ ರಸ್ತೆಯೂ ಇದೇ. ಸುಬ್ರಹ್ಮಣ್ಯ ಸುತ್ತಮುತ್ತಲ ಕೃಷಿಕರು ತಾವು ಬೆಳೆದ ಕೃಷಿ ಉತ್ಪನ್ನಗಳ ಹಾಗೂ ಫಲವಸ್ತುಗಳ ಮಾರಾಟ ಮತ್ತು ಖರೀದಿಗೆ ಈ ರಸ್ತೆ ಮೂಲಕವೇ ಸುಳ್ಯ ನಗರವನ್ನು ತಲುಪುತ್ತಾರೆ. ಕಚೇರಿ ವ್ಯವಹಾರಗಳಿಗೆ ತೆರಳಲೂ ಮುಖ್ಯ ರಸ್ತೆಯಾಗಿದೆ. ಸುಬ್ರಹ್ಮಣ್ಯ ನಗರದ ಆಸುಪಾಸಿನಲ್ಲಿ ಸರಿಯಾದ ವೈದ್ಯಕೀಯ ಆಸ್ಪತ್ರೆಗಳು ಇಲ್ಲದ ಕಾರಣ ತುರ್ತು ವೈದ್ಯ ಸೇವೆಗೆ ಸುಳ್ಯಕ್ಕೆ ತೆರಳಬೇಕು. ಈ ಸೇತುವೆ ಸಂಪರ್ಕ ಕಡಿತಗೊಂಡಲ್ಲಿ ಈ ಎಲ್ಲದರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ರಾಜ್ಯಹೆದ್ದಾರಿ ಆಗಿದ್ದರೂ ನಮ್ಮ ವ್ಯಾಪ್ತಿಯಲ್ಲಿ ಇಲ್ಲ
ರಾಜ್ಯ ಹೆದ್ದಾರಿ ಆಗಿದ್ದರೂ ಇದು ನಮ್ಮ ಕೆಆರ್‌ಡಿಸಿಎಲ್‌ ವ್ಯಾಪ್ತಿಗೆ ಬರಲ್ಲ. ಇದು ಇನ್ನೂ ಲೊಕೋಪಯೋಗಿ ಇಲಾಖೆ ನಿರ್ವಹಣೆಯಲ್ಲಿದೆ. 
 – ಪ್ರಸನ್ನ, ಕೆಆರ್‌ಡಿಸಿಎಲ್‌
   ಅಧಿಕಾರಿ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next