Advertisement

ಹಳೇ ಬ್ಯಾಟು ಹಳೇ ಚೆಂಡು

07:38 PM Nov 08, 2019 | Lakshmi GovindaRaju |

ಬಿಸಿಸಿಐ ಅಧ್ಯಕ್ಷರ ಕೈಯಲ್ಲಿರುವುದು 20 ಲಕ್ಷ ರೂ. ಕೈಗಡಿಯಾರ
ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಸದ್ಯ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಗೆ ಕೈಗಡಿಯಾರಗಳೆಂದರೆ ಬಹಳಪ್ರೀತಿ. ಸದ್ಯ ಅವರ ಕೈಯಲ್ಲಿರುವ ಗಡಿಯಾರದ ಬೆಲೆ ಎಷ್ಟು ಗೊತ್ತಾ? ಮೂನ್‌ಫೇಸ್‌ ಎಂಬ ಹೆಸರಿನ ರೋಲೆಕ್ಸ್‌ ಕಂಪನಿಗೆ ಸೇರಿದ ಆ ಗಡಿಯಾರದ ಬೆಲೆ 20 ಲಕ್ಷ ರೂ. ಇದೇನು ದೊಡ್ಡ ಮೊತ್ತವಲ್ಲ ಎಂದು ನೀವು ಹೇಳಬಹುದು. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 3 ಕೋಟಿ ರೂ. ಮೌಲ್ಯದ ಹ್ಯುಬ್ಲೊಟ್‌ ಕೈಗಡಿಯಾರ ಧರಿಸಿ ವಿವಾದಕ್ಕೊಳಗಾಗಿದ್ದರು. ಎಷ್ಟು ಬೆಲೆ ಇದ್ದರೂ, ಅವು ಸಮಯ ತೋರಿಸುವುದು ಬಿಟ್ಟರೆ, ಇನ್ನೇನು ಮಾಡಲು ಸಾಧ್ಯ ಎಂದು ನೀವು ಕೇಳಬಹುದು. ಇರಲಿ. ಗಂಗೂಲಿ ಕೈಯಲ್ಲಿ ಯಾಕೆ 20 ಲಕ್ಷ ರೂ. ಕೈಗಡಿಯಾರ ಎಂದು ಕೇಳುತ್ತೀರಾ? ಒಬ್ಬೊಬ್ಬ ವ್ಯಕ್ತಿಗಳಿಗೆ ಒಂದೊಂದು ವಿಶಿಷ್ಟ ಹವ್ಯಾಸವಿರುವಂತೆ ಗಂಗೂಲಿಗೆ ಕೈಗಡಿಯಾರ ಸಂಗ್ರಹಿಸುವ ಹವ್ಯಾಸವಿದೆ. ಧೋನಿಗೆ ಕಾರು, ಬೈಕುಗಳೆಂದರೆ ಪ್ರಾಣ.

Advertisement

ಕೊಹ್ಲಿ, ಸಚಿನ್‌ಗೆ ದುಬಾರಿ ಕಾರುಗಳನ್ನು ಸಂಗ್ರಹಿಸುವ ಅಭ್ಯಾಸವಿದೆ. ಈ ಕೈಗಡಿಯಾರದ ಹಿಂದೆ ಒಂದು ಎಂದೂ ಮರೆಯದ ಕಥೆಯಿದೆ. ಸೌರವ್‌ ಗಂಗೂಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನ ಆರಂಭಿಸಿದ್ದು ತಮ್ಮ 19ನೇ ವರ್ಷದಲ್ಲಿ. ಆಮೇಲೆ ತಂಡದಿಂದ ಹೊರಬಿದ್ದವರು ಮತ್ತೆ 5 ವರ್ಷದ ನಂತರ ಪುನರಾಗಮನಗೈದರು. ಈ ಎರಡೂ ಸಂದರ್ಭದಲ್ಲಿ ಅಜರುದ್ದೀನ್‌ ಅವರೇ ನಾಯಕರಾಗಿದ್ದರು. ಎರಡನೇ ಬಾರಿ ಇಂಗ್ಲೆಂಡ್‌ಗೆ ಆಯ್ಕೆಯಾದಾಗ ಗಂಗೂಲಿಗೆ ಮಿಂಚಲೇಬೇಕಾದ ಅನಿವಾರ್ಯತೆಯಿತ್ತು. ಅವರು ಸತತ 2 ಟೆಸ್ಟ್‌ಗಳಲ್ಲಿ 2 ಶತಕ ಬಾರಿಸಿ ಭಾರತೀಯ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಂಡರು. ಸರಣಿಗೂ ಮುನ್ನ ಅಜರುದ್ದೀನ್‌, ಉತ್ತಮವಾಗಿ ಆಡಿದರೆ ಒಂದು ಕೈಗಡಿಯಾರ ಕೊಡುವುದಾಗಿ ಗಂಗೂಲಿಗೆ ಮಾತುಕೊಟ್ಟಿದ್ದರಂತೆ. ಸರಣಿ ಮುಗಿದ ನಂತರ ಅಜರ್‌ ಅದನ್ನು ನೀಡಿದರು. ಗಂಗೂಲಿ ಇಂದಿಗೂ ಅದನ್ನು ಜೋಪಾನವಾಗಿಟ್ಟುಕೊಂಡಿದ್ದಾರೆ.

ತನ್ನ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೊಹ್ಲಿಗೆ ನೀಡಿದ್ದ ಗಂಭೀರ್‌
ಗೌತಮ್‌ ಗಂಭೀರ್‌ ಮತ್ತು ವಿರಾಟ್‌ ಕೊಹ್ಲಿ ಹೆಸರನ್ನು ಕೇಳದಿರುವ ಕ್ರಿಕೆಟ್‌ ಅಭಿಮಾನಿಗಳು ಯಾರಿದ್ದಾರೆ? ಇವರಿಬ್ಬರ ಜಗಳವನ್ನು ಕೇಳದಿರುವ ಅಭಿಮಾನಿಗಳು ಇದ್ದಾರಾ? ದೆಹಲಿಯ ಈ ಇಬ್ಬರು ಕ್ರಿಕೆಟಿಗರ ಪೈಕಿ ಕೊಹ್ಲಿ ಈಗ ಭಾರತೀಯ ಕ್ರಿಕೆಟ್‌ ತಂಡದ ನಾಯಕ, ಜಾಗತಿಕ ಕ್ರಿಕೆಟ್‌ನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌. ಇನ್ನೊಬ್ಬ ಗೌತಮ್‌ ಗಂಭೀರ್‌, ಒಂದುಕಾಲದಲ್ಲಿ ಭಾರತ ತಂಡದ ಅತಿ ಪ್ರಮುಖ ಎನಿಸಿಕೊಂಡು ನಂತರ ಹಂತಹಂತವಾಗಿ ಕ್ರಿಕೆಟ್‌ ವ್ಯವಸ್ಥೆಯಿಂದ ಹೊರಹೋಗುತ್ತ ಬಂದರು. ಇಂತಹ ಗಂಭೀರ್‌ ಮತ್ತು ಕೊಹ್ಲಿ ಈಗ ಒಬ್ಬರಿಗೊಬ್ಬರು ಮುಖಕೊಟ್ಟು ಮಾತನಾಡಲಾಗದ ಸ್ಥಿತಿಯಲ್ಲಿದ್ದಾರೆ.

ಈ ಮಟ್ಟದಲ್ಲಿ ಈಗ ಕಿತ್ತಾಡಿಕೊಳ್ಳುವ ಇವರ ನಡುವೆ ಒಂದು ಹೃದಯಸ್ಪರ್ಶಿ ನೆನಪೂ ಇದೆ! ಈ ಘಟನೆ ನಡೆದಿದ್ದು 2009ರಲ್ಲಿ. ಕೋಲ್ಕತದ ಈಡನ್‌ಗಾರ್ಡನ್‌ ಮೈದಾನದಲ್ಲಿ ಆಗ ಬಲಿಷ್ಠವಾಗಿದ್ದ ಶ್ರೀಲಂಕಾ ವಿರುದ್ಧ ಪಂದ್ಯ. ಮೊದಲು ಬ್ಯಾಟ್‌ ಮಾಡಿದ್ದ ಲಂಕಾ 316 ರನ್‌ಗಳ ಗುರಿ ನೀಡಿತ್ತು. ಇಂತಹ ಸ್ಥಿತಿಯಲ್ಲಿ 3ನೇ ವಿಕೆಟ್‌ಗೆ ಅಂದು ಯುವಕರಾಗಿದ್ದ ಕೊಹ್ಲಿ, ಸ್ವಲ್ಪ ಹಿರಿಯನೆನಿಸಿಕೊಂಡಿದ್ದ ಗಂಭೀರ್‌ ಒಟ್ಟಾದರು. ಇಬ್ಬರೂ 224 ರನ್‌ ಜೊತೆಯಾಟವಾಡಿ ಭಾರತವನ್ನು ಗೆಲ್ಲಿಸಿಬಿಟ್ಟರು. 150 ರನ್‌ ಬಾರಿಸಿದ್ದ ಗಂಭೀರ್‌ಗೆ ಪಂದ್ಯಶ್ರೇಷ್ಠ ಗೌರವ ನೀಡಲಾ­ಯಿತು. ಆದರೆ ಗಂಭೀರ್‌ ಅದನ್ನು ನಿರಾಕರಿಸಿ, 107 ರನ್‌ ಬಾರಿಸಿದ್ದ ಕೊಹ್ಲಿಗೆ ನೀಡಿದರು. ಯುವ ಕ್ರಿಕೆಟಿಗರನ್ನು ಸದಾ ಪ್ರೋತ್ಸಾಹಿಸುವ ಗಂಭೀರ್‌ ಗುಣ ಮೊದಲಬಾರಿ ಪ್ರಕಟವಾಗಿದ್ದು ಹಾಗೆ.

Advertisement

Udayavani is now on Telegram. Click here to join our channel and stay updated with the latest news.

Next