ಕ್ರಿಕೆಟ್ ಆಟಗಾರ ಅಂದರೆ ಅವನು ಶ್ರೀಮಂತ ಎಂಬುದು ಇವತ್ತಿನ ನಂಬಿಕೆ. ಯಾರೇ ಆಟಗಾರ ರಾಜ್ಯವನ್ನು ಪ್ರತಿನಿಧಿಸಿ ಒಂದು ಸೆಂಚುರಿ ಹೊಡೆದರೆ ಸಾಕು; ಅವನಿಗೆ ಯಾವುದಾದರೂ ಬಹುದೊಡ್ಡ ಕಂಪನಿಯಲ್ಲಿ ಕೆಲಸ, ಒಂದೆರಡು ನಗದು ಬಹುಮಾನ, ಅತೀ ಅನ್ನುವಷ್ಟು ಪ್ರಚಾರ ಖಂಡಿತಾ ಸಿಗುತ್ತದೆ. ಇನ್ನು ಒಬ್ಬ ಆಟಗಾರ, ಟೆಸ್ಟ್ ಆಡಿ, ಅಲ್ಲಿ ಹೆಸರು ಮಾಡಿದನೆಂದರೆ ಮುಗಿಯಿತು. ಆ ಮ್ಯಾಚ್ ನಡೆಯುತ್ತಿರುವಾಗಲೇ ಅವನ ಜನಪ್ರಿಯತೆಯನ್ನು ಹೇಗೆಲ್ಲ ಎನ್‌ಕ್ಯಾಶ್ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಮೈದಾನದ ಹೊರಗೆ ಇರುವವರಿಂದ ನಡೆಯುತ್ತಿರುತ್ತದೆ. ಮ್ಯಾನ್ ಆಫ್ ದ ಮ್ಯಾಚ್ ಆದವನಿಗೆ ಕಡಿಮೆಯೆಂದರೂ 5 ಲಕ್ಷ ರೂ. ನಗದು ಬಹುಮಾನ ಸಿಗುತ್ತದೆ. ಉಳಿದವರಿಗೆ ಲಕ್ಷದ ಹತ್ತಿರ ಹಣ ಸಿಗುತ್ತದೆ! ಆದರೆ, ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ನೀವು ಟೆಸ್ಟ್ ಆಡುತ್ತಿದ್ದ ದಿನಗಳು ಹೇಗಿದ್ದವು? ಎಂದು ಕ್ರೀಡಾ ಪ್ರತಕರ್ತನೊಬ್ಬ ಕೇಳಿದಾಗ ಆ ದಿನಗಳನ್ನು ನೆನೆದು ಗವಾಸ್ಕರ್ ಹೇಳಿದ್ದರು- ಇಡೀ ದಿನ ಆಡಿದ ಕಾರಣಕ್ಕೆ ವಿಪರೀತ ಸುಸ್ತಾಗಿರುತ್ತಿತ್ತು. ಚೆಂಡು ಹಿಡಿಯುವ ಭರದಲ್ಲಿ ಬಿದ್ದು ಏಟು ಮಾಡಿಕೊಂಡಿರುತ್ತಿದ್ದೆವು. ಮ್ಯಾಚ್ ಮುಗಿಯುತ್ತಿದ್ದಂತೆಯೇ ಎಲ್ಲ ಆಟಗಾರರಿಗೂ ತಪ್ಪದೇ ಝಂಡುಬಾಮ್, ವಿಕ್ಸ್, ಗ್ಲೂಕೋಸ್ ಕೊಡ್ತಾ ಇದ್ದರು. ಅವತ್ತಿನ ಸಮಯದಲ್ಲಿ , ಟೆಸ್ಟ್ ಆಡಿದ್ದಕ್ಕೆ ನಮಗೆ ಸಿಕ್ತಾ ಇದ್ದುದು ಇಷ್ಟೇ…
Advertisement
ಚೆಂಡಲ್ಲ, ವಿಶ್ವಕಪ್ ಅಂದುಕೊಂಡೆ…ಭಾರತ ಮೊದಲ ವಿಶ್ವಕಪ್ ಗೆದ್ದದ್ದು 1983ರಲ್ಲಿ. ಆ ಸಂದರ್ಭವನ್ನು ನೆನಪು ಮಾಡಿಕೊಂಡವರೆಲ್ಲ, ಕಡೆಯ ಪಂದ್ಯದಲ್ಲಿ ಕಪಿಲ್ ದೇವ್ ಹಿಡಿದ ಕ್ಯಾಚ್‌ಅನ್ನು ತಪ್ಪದೇ ನೆನಪಿಸಿಕೊಳ್ಳುತ್ತಾರೆ. ಅದನ್ನು ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಅತ್ಯುತ್ತಮ ಕ್ಯಾಚ್ ಎಂದೂ ಪರಿಗಣಿಸಲಾಗಿದೆ. ಅಂದಹಾಗೆ, ಅಂದು ಕ್ಯಾಚ್ ನೀಡಿದವರು ವೆಸ್ಟ್ ಇಂಡೀಸ್‌ನ ಪ್ರಚಂಡ ಆಟಗಾರ ವಿವಿಯನ್ ರಿಚರ್ಡ್ಸ್. ಅವತ್ತು, ಮದನ್‌ಲಾಲ್ ಅವರ ಎಸೆತವನ್ನು ಸಿಕ್ಸರ್‌ಗೆ ಹೊಡೆಯಲು ರಿಚರ್ಡ್ಸ್ ಪ್ರಯತ್ನಿಸಿದರು. ಚೆಂಡು ಆಕಾಶದಲ್ಲಿ ಹಾರಿತು. ಅದರ ವೇಗ, ಸಾಗುವ ದಿಕ್ಕು ನೋಡಿದಾಗಲೇ ಅದು ಸಿಕ್ಸರ್ ಹೋಗುವುದಿಲ್ಲ. ಜಿಂಕೆಯಷ್ಟೇ ವೇಗವಾಗಿ ಓಡಿ ಹಿಡಿದರೆ ಅದನ್ನು ಕ್ಯಾಚ್ ಆಗಿ ಪಡೆಯಬಹುದು ಎಂದು, ಕ್ಯಾಪ್ಟನ್ ಕಪಿಲ್ ದೇವ್‌ಗೆ ಅರ್ಥವಾಗಿ ಹೋಯ್ತು. ಆತ ತಡಮಾಡಲಿಲ್ಲ. ಚೆಂಡು ಬೀಳುವ ಸ್ಥಳ , ತಾನು ನಿಂತಿರುವ ಜಾಗದಿಂದ ತುಂಬಾ ದೂರವಿದೆ ಎಂದು ಗೊತ್ತಿದ್ದರೂ ಓಡಿ ಓಡಿ ಓಡಿ ಓಡಿ ಹೋಗಿ ಕಡೆಗೂ ಕ್ಯಾಚ್ ಹಿಡಿದೇಬಿಟ್ಟ. ಮುಂದೊಂದು ದಿನ ಕ್ಯಾಚ್ ಹಿಡಿದ ಕ್ಷಣವನ್ನು ಆತ ವಿವರಿಸಿದ್ದು ಹೀಗೆ; ಚೆಂಡು ಹಿಡಿಯುವಾಗ ಆಯತಪ್ಪಿ ಮುಗ್ಗರಿಸುವಂತಾಯ್ತು. ಅಕಸ್ಮಾತ್ ಬಿದ್ದು ಹೋಗಿದ್ದರೆ ಚೆಂಡು ಕೈ ಜಾರುತ್ತಿತ್ತು. ನಾನು ಹಿಡಿಯುತ್ತಿರುವುದು ಚೆಂಡಲ್ಲ, ವಿಶ್ವಕಪ್ ಎಂದು ನನಗೆ ನಾನೇ ಹೇಳಿಕೊಂಡೆ. ಅಷ್ಟೆ, ಮುಗ್ಗರಿಸದೇ ನಿಲ್ಲುವಂಥ ಶಕ್ತಿ ಜೊತೆಯಾಯ್ತು…