Advertisement

ಹಳೇ ಬ್ಯಾಟು ಹಳೇ ಚೆಂಡು

07:12 PM Oct 11, 2019 | Lakshmi GovindaRaju |

ನಿದ್ರೆಯಿಂದ ಸಿಗುವಂಥ ಖುಷಿ ಎಲ್ಲೂ ಸಿಗಲ್ಲ …
ಭಾರತ ತಂಡ ಕಂಡ ಶ್ರೇಷ್ಠ ವಿಕೆಟ್‌ ಕೀಪರ್‌ ಯಾರು ಅಂದರೆ, ಇಂದಿನ ತಲೆಮಾರಿನ ಜನ ನೆನಪಿಸಿಕೊಳ್ಳುವ ಹೆಸರು ಎಂ. ಎಸ್‌. ಧೋನಿ. ಆದರೆ, 80ರ ದಶಕದ ಆಟಗಾರರು ಅಂದಾಗ ನೆನಪಾಗುವ ಹೆಸರು ಸಯ್ಯದ್‌ ಕಿರ್ಮಾನಿ ಅವರದ್ದು. ಸಯ್ಯದ್‌ ಮುಜಬಾ ಹುಸೇನ್‌ ಕಿರ್ಮಾನಿ ಎಂಬುದು ಅವರ ಪೂರ್ಣ ಹೆಸರು. ಕಿರ್ಮಾನಿಯ ಹೆತ್ತವರು ಹೈದರಾಬಾದ್‌ ಮೂಲದವರು. ಈತ ಬೆಳೆದದ್ದು ಅಂದಿನ ಮದ್ರಾಸ್‌ನಲ್ಲಿ ಬದುಕು ಕಂಡುಕೊಂಡಿದ್ದು ಬೆಂಗಳೂರಿನಲ್ಲಿ. ಮಿಂಚಿನ ವೇಗದಲ್ಲಿ ಸ್ಟಂಪಿಂಗ್‌ ಮಾಡುವುದು ಮತ್ತು ಡೈವ್‌ ಹೊಡೆದು ಕ್ಯಾಚ್‌ ಹಿಡಿಯುವುದರಲ್ಲಿ ಕಿರ್ಮಾನಿಯನ್ನು ಸರಿಗಟ್ಟುವ ಕೀಪರ್‌ಗಳು 80ರ ದಶಕದಲ್ಲಿ ಇರಲಿಲ್ಲ ಅನ್ನುವುದು ಒಪ್ಪಲೇಬೇಕಾದ ಸತ್ಯ.

Advertisement

1983ರಲ್ಲಿ, ಕಪಿಲ್‌ ದೇವ್‌ ನಾಯಕತ್ವದ ಭಾರತ ತಂಡ ವಿಶ್ವಕಪ್‌ ಗೆದ್ದಿತಲ್ಲ, ಅದರಲ್ಲಿ ಕಿರ್ಮಾನಿಯ ಪಾತ್ರ ಕೂಡ ಮಹತ್ವದ್ದು. ಅಲ್ಲಿ ಒಟ್ಟು 17 ಕ್ಯಾಚ್‌ ಪಡೆಯುವ ಮೂಲಕ ವಿಶ್ವಕಪ್‌ ಸರಣಿಯ ಶ್ರೇಷ್ಠ ವಿಕೆಟ್‌ ಕೀಪರ್‌ ಎಂಬ ಹಿರಿಮೆಗೂ ಅವರು ಪಾತ್ರರಾದರು. ವಿಕೆಟ್‌ ನ ಹಿಂದೆ ನಿಂತಾಗ ಮೈಯೆಲ್ಲಾ ಕಣ್ಣಾಗಿ ಇರುತ್ತಿದ್ದ ಕಿರ್ಮಾನಿ, ಸ್ವಲ್ಪ ಬಿಡುವು ಸಿಕ್ಕರೂ ಸಾಕು ಕೋಳಿನಿದ್ದೆ ತೆಗೆಯಲು ಮುಂದಾಗುತ್ತಿದ್ದರಂತೆ. ತಮ್ಮ ಪುಸ್ತಕದಲ್ಲಿ ಈ ಕುರಿತು ಗವಾಸ್ಕರ್‌ ಹೀಗೆ ಬರೆದಿದ್ದಾರೆ- ಆಗ ನಾವು ಇಂಗ್ಲೆಂಡ್‌ ವಿರುದ್ಧ ಆಡಲು ಹೋಗಿದ್ದೆವು. ಬ್ಯಾಟಿಂಗ್‌ ಸೈಡ್‌ ನಲ್ಲಿ ನಮ್ಮಆರಂಭಿಕ ಆಟಗಾರರಿದ್ದರು.

ನಮ್ಮ ತಂಡದ ಮ್ಯಾನೇಜರ್‌ ಆಗಿದ್ದ ರಾಮ್‌ ಪ್ರಕಾಶ್‌ ಮೆಹ್ರಾ, ಕಿರ್ಮಾನಿಯನ್ನು ಕರೆದು ಹೇಳಿದರು- ನೀನು ಆಡಲು ಹೋಗುವುದು 7ನೇ ವಿಕೆಟ್‌ಗೆ. ನಿನ್ನ ಸರದಿ ಬರುವ ತನಕ ಇಲ್ಲಿಯೇ ಕೂತಿದ್ದು ಇಂಗ್ಲೆಂಡ್‌ ತಂಡದ ವಿಕೆಟ್‌ ಕೀಪರ್‌ನ ಮೂವ್ಮೆಂಟ್‌ ಗಮನಿಸು… ನಿನ್ನ ಕೌಶಲ್ಯ ಇಂಪೂ›ವ್‌ ಆಗಲಿಕ್ಕೆ ಅದರಿಂದ ಸಹಾಯ ಆಗುತ್ತೆ… ಮೆಹ್ರಾ, ಆ ಕಡೆಗೆ ಹೋಗುವುದನ್ನೇ ಕಾಯುತ್ತಿದ್ದ ಕಿರ್ಮಾನಿ, ನಂತರ ಸದ್ದಿಲ್ಲದೇ ನಿದ್ರೆಗೆ ಜಾರಿಬಿಟ್ಟಿದ್ದರು. ಭರ್ತಿ 30 ನಿಮಿಷದ ನಂತರ ಎಚ್ಚರಾಗಿ ,ನಿದ್ರೆಯಲ್ಲಿ ಸಿಗುವ ಸಂತೋಷ ಬೇರೆ ಯಾವುದರಿಂದಲೂ ಸಿಗೋದಿಲ್ಲ ಎಂದು ಹೇಳಿ ಖೀಲ್ಲನೆ ನಕ್ಕಿದ್ದರು.

ಕ್ರಿಕೆಟ್‌ ನನಗೆ ಕೆಲಸ ಕೊಡಿಸಿದೆ, ಗೌರವ ಕೊಟ್ಟಿದೆ…
ಸವ್ಯಸಾಚಿ ಎಂದು ಹೆಸರಾದವರು ಜಿ.ಆರ್‌.ವಿಶ್ವನಾಥ್‌. ಅವರಿಗೆ ಸಂಬಂಧಿಸಿದ ಒಂದು ಸುದ್ದಿಯನ್ನು ಕಳೆದ ವಾರ ಇದೇ ಅಂಕಣದಲ್ಲಿ ಓದಿದ್ದೀರಿ. 80 ರ ದಶಕದಲ್ಲಿ ಟೆಸ್ಟ್‌. ಮ್ಯಾಚ್‌ಗಳಿಗಿಂತ ಹೆಚ್ಚು ಜನಪ್ರಿಯ ಆಗಿದ್ದುದು ರಣಜಿ ಪಂದ್ಯಗಳು. ಭಾರತ ತಂಡ ಎಂದಾಗ ಒಟ್ಟಿಗೇ ಮೈದಾನಕ್ಕೆ ಇಳಿಯುತ್ತಿದ್ದ ಆಟಗಾರರು, ರಣಜಿ ಪಂದ್ಯದ ಸಂದರ್ಭದಲ್ಲಿ ಪರಸ್ಪರ ಎದುರಾಳಿಗಳಾಗಿ ಬದಲಾಗುತ್ತಿದ್ದರು. ಮುಂಬೈ- ಕರ್ನಾಟಕದ ರಣಜಿ ಪಂದ್ಯ ಅಂದರೆ, ಕುತೂಹಲ ದುಪ್ಪಟ್ಟಾಗುತ್ತಿತ್ತು. ಕಾರಣ ಮುಂಬೈ ತಂಡದಲ್ಲಿ ಗವಾಸ್ಕರ್‌, ವೆಂಗ್‌ ಸರ್ಕಾರ್‌ ಮುಂತಾದವರಿದ್ದಾರೆ, ಕರ್ನಾಟಕ ತಂಡದಲ್ಲಿ ವಿಶ್ವನಾಥ್‌, ಕಿರ್ಮಾನಿ, ರೋಜರ್‌ ಬಿನ್ನಿ, ರಘುರಾಮ್‌ ಭಟ್‌ ಮುಂತಾದ ಆಟಗಾರರು ಇರುತ್ತಿದ್ದರು. ಮುಖ್ಯವಾಗಿ, ಆ ದಿನಗಳಲ್ಲಿ ಒಂದು ಸುದ್ದಿ ಚಾಲ್ತಿಯಲ್ಲಿತ್ತು.

ಏನೆಂದರೆ-ವಿಶ್ವನಾಥ್‌ ಅವರ ಆಟವನ್ನು ಮೆಚ್ಚಿ, ಅವರನ್ನೇ ಮದುವೆ ಆಗುವುದಾಗಿ ಗವಾಸ್ಕರ್‌ ಅವರ ತಂಗಿ ಪಟ್ಟು ಹಿಡಿದರೆಂದೂ, ಕಡೆಗೆ ತಮ್ಮ ಪ್ರಯತ್ನದಲ್ಲಿ ಯಶಸ್ವಿ ಆದರೆಂದೂ ಕ್ರಿಕೆಟ್‌ ಪ್ರೇಮಿಗಳು ಮಾತಾಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿಯೇ ಒಮ್ಮೆ ಕ್ರೀಡಾ ಪತ್ರಕರ್ತರೊಬ್ಬರು ವಿಶ್ವನಾಥ್‌ ಅವರನ್ನು ಕೇಳಿದ್ದರು- ಸರ್‌, ಕ್ರಿಕೆಟ್‌ ನಿಂದ ನಿಮಗೆ ಏನು ಸಿಕ್ಕಿದೆ?, ಆಗ, ವಿಶ್ವನಾಥ್‌ ಸಂಭ್ರಮದಿಂದಲೇ ಹೀಗೆ ಹೇಳಿದ್ದರು- ಕ್ರಿಕೆಟ್‌ ನಿಂದ ನನಗೆ ಬ್ಯಾಂಕ್‌ನಲ್ಲಿ ನೌಕರಿ ಸಿಕ್ಕಿದೆ. ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಕ್ರಿಕೆಟ್‌ ಆಟಗಾರ ಎಂಬ ಕಾರಣಕ್ಕಾಗಿಯೇ ನನಗೆ ಹೆಚ್ಚಿನ ಗೌರವ ಸಿಗುತ್ತಿದೆ. ಅದಕ್ಕಿಂತ ಹೆಚ್ಚಿನದು ಬೇರೇನು ಬೇಕು?

Advertisement
Advertisement

Udayavani is now on Telegram. Click here to join our channel and stay updated with the latest news.

Next