Advertisement

ಹಳೇ ಬ್ಯಾಟು ಹಳೇ ಚೆಂಡು

09:31 PM Mar 13, 2020 | Lakshmi GovindaRaj |

ಆ ಅಮೋಘ ಆಟವನ್ನು ಮನೆಯವರೇ ನೋಡಲಿಲ್ಲ!
ಭಾರತೀಯ ಕ್ರಿಕೆಟ್‌ ಪ್ರೇಮಿಗಳು ಮರೆಯಲಾಗದ ಕ್ರಿಕೆಟ್‌ ಪಂದ್ಯಗಳಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ನ್ಯಾಟ್‌ವೆಸ್ಟ್‌ ಸರಣಿ ಕೂಡ ಒಂದು. 85 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ಭಾರತ ತಂಡವನ್ನು ಗೆಲುವಿನ ಹಳಿಗೆ ತಂದು ನಿಲ್ಲಿಸಿದವರು ಮೊಹಮ್ಮದ್‌ ಕೈಫ್ ಹಾಗೂ ಯುವರಾಜ್‌ ಸಿಂಗ್‌, ಇವರಿಬ್ಬರು ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದರು, ನಿರ್ಣಾಯಕ ಹಂತದಲ್ಲಿ ಯುವರಾಜ್‌ ಸಿಂಗ್‌ ಔಟ್‌ ಆದಾಗ, ಓಹ್‌, ಈ ಪಂದ್ಯ ಕೈತಪ್ಪಿತು ಎಂದೇ ಎಲ್ಲರೂ ಭಾವಿಸಿದ್ದರು. ಏಕೆಂದರೆ ಗೆಲ್ಲುವುದಕ್ಕೆ ಇನ್ನೂ 87 ರನ್‌ಗಳು ಬೇಕಿದ್ದವು, ಉಳಿದಿದ್ದ ವಿಕೆಟ್‌ಗಳು ಕೇವಲ ನಾಲ್ಕು!

Advertisement

ಯುವರಾಜ್‌ ಸಿಂಗ್‌ ಇರುವ ತನಕ ಯುವಿಗೆ ನೆರಳಿನಂತೆ ಸ್ಟಾಂಡ್‌ ಕೊಡುವಂತೆ ಆಡುತ್ತಿದ್ದ ಕೈಫ್, ಆನಂತರದಲ್ಲಿ ಎಲ್ಲ ಜವಾಬ್ದಾರಿಯನ್ನು ಹೊತ್ತವರಂತೆ ಆಟವಾಡಿದರು.ಬಾಲಂಗೋಚಿ ಆಟಗಾರರು ಒಬ್ಬೊಬ್ಬರೇ ಔಟ್‌ ಆದರೂ, ಕೈಫ್ ನೆಲಕಚ್ಚಿ ನಿಂತೇ ಇದ್ದರು. ಒಂಭತ್ತನೇ ವಿಕೆಟ್‌ಗೆ ಆಡಲು ಬಂದ ಜಹೀರ್‌ ಖಾನ್‌ ಜೊತೆ ಸೇರಿಕೊಂಡು, ತಂಡವನ್ನು ಗೆಲುವಿನ ದಡ ಸೇರಿಸಿದರಲ್ಲ, ಆಗಲೇ ಸೌರವ್‌ ಗಂಗೂಲಿ ತಮ್ಮ ಅಂಗಿ ಕಳಚಿ ಗಾಳಿಯಲ್ಲಿ ಗಿರಗಿರನೆ ತಿರುಗಿಸಿದ್ದು.

ಅವತ್ತು ಕೈಫ್ ಆಡಿದರಲ್ಲ, ಅದು ನಿಜಕ್ಕೂ ಶ್ರೇಷ್ಠ ಆಟ, ಕ್ರಿಕೆಟ್‌ ಆಟದ ಸ್ವಾರಸ್ಯ, ವೈಭವ ಮತ್ತು ರೋಚಕತೆಯನ್ನು ನೋಡಬೇಕು ಅನ್ನುವವರು ತಪ್ಪದೇ ನ್ಯಾಟ್‌ವೆಸ್ಟ್‌ ಸರಣಿಯ ಫೈನಲ್‌ ಪಂದ್ಯದ ಹೈಲೈಟ್ಸ್‌ ಅನ್ನು ಒಮ್ಮೆ ನೋಡಬೇಕು. ಇಲ್ಲೊಂದು ಸ್ವಾರಸ್ಯವಿದೆ. ಮೊಹಮ್ಮದ್‌ ಕೈಫ್ ದೃಢ ಮನಸ್ಸಿನಿಂದ, ವೀರಾವೇಶದಿಂದ ಆಡಿ ತಂಡವನ್ನು ಗೆಲ್ಲಿಸಿದರಲ್ಲ ,ಆ ಪಂದ್ಯದ ನೇರ ಪ್ರಸಾರವನ್ನು ಅವರ ಕುಟುಂಬದ ಯಾರೊಬ್ಬರು ನೋಡಿರಲಿಲ್ಲವಂತೆ! ಬಲಾಡ್ಯ ಇಂಗ್ಲೆಂಡ್‌ ತಂಡದ ಎದುರು ನಮ್ಮವರು ಖಂಡಿತ ಗೆಲ್ಲುವುದಿಲ್ಲ ಎಂದು ಮೊದಲೇ ನಿರ್ಧರಿಸಿ, ಅವರೆಲ್ಲ ಸಿನಿಮಾ ನೋಡಲು ಹೋಗಿಬಿಟ್ಟಿದ್ದರಂತೆ.

ಹಂಗಿಸಿದವರ ಎದುರು ಆಕಾಶದೆತ್ತರ ಬೆಳೆದಳು!
ಮೊನ್ನೆ ಮುಗಿದ ಟಿ20 ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಕ್ರೀಡಾ ಪ್ರೇಮಿಗಳಿಂದ “ವುಮನ್‌ ಆಫ್ ದಿ ಸೀರಿಸ್‌’ ಎಂದು ಕರೆಸಿಕೊಂಡಾಕೆ ಪೂನಂ ಯಾದವ್‌, ಗೆಳತಿಯರಿಂದ “ಕುಳ್ಳಿ’ ಎಂದೇ ಕರೆಯಿಸಿಕೊಳ್ಳುತ್ತಿದ್ದ ಪೂನಂ, ಸೈನ್ಯಾಧಿಕಾರಿಯೊಬ್ಬರ ಮಗಳು. ಪೂನಂ ಬಾಲ್ಯದಿಂದಲೂ ಕ್ರಿಕೆಟ್‌ ಕುರಿತು ಆಸಕ್ತಿ ಹೊಂದಿದ್ದವರು. ಆದರೆ, ಇವರ ತಂದೆಗೆ ಅದು ಸ್ವಲ್ಪವೂ ಇಷ್ಟವಿರಲಿಲ್ಲವಂತೆ. ಆದರೆ ಪೂನಂ ಪಟ್ಟು ಬಿಡದೆ ತಂದೆಯನ್ನು ಒಪ್ಪಿಸಿದರಲ್ಲದೆ, ವೇಗದ ಬೌಲರ್‌ ಆಗಿಯೇ ಕ್ರಿಕೆಟ್‌ ಬದುಕು ಆರಂಭಿಸಿದರು. ಸುತ್ತಮುತ್ತ ಇದ್ದವರು, “ನೀನು ಇಷ್ಟು ಕುಳ್ಳಕ್ಕಿದ್ದೀಯ, ನಿನಗಿಂತ ಕ್ರಿಕೆಟ್‌ ಬ್ಯಾಟೇ ದೊಡ್ಡದಿದೆ.

ಹಾಗಿದ್ರು ಕ್ರಿಕೆಟ್‌ ಆಡಲು ಹೋಗ್ತಿಯಲ್ಲ….ಕ್ರಿಕೆಟ್‌ ಈಸ್‌ ಎ ಜಂಟಲ್‌ ಮ್ಯಾನ್ಸ್‌ ಗೇಮ್‌ ಎಂಬ ಮಾತಿದೆ. ನೀನು ಹುಡುಗಿ ಅಲ್ವಾ? ಕ್ರಿಕೆಟ್‌ ಆಡಬಾರದು ಎಂದು ಹಂಗಿಸಿದರಂತೆ. ಇಂಥ ಮಾತುಗಳಿಂದ ನೊಂದ ಪೂನಂ, ಕ್ರಿಕೆಟ್‌ಗೆ ಗುಡ್‌ ಬೈ ಹೇಳಲು ನಿರ್ಧರಿಸಿ, ತಂದೆಗೂ ಹೇಳಿದರಂತೆ. ಆಗ ಅವರು “ನಮ್ಮನ್ನ ಹಂಗಿಸ್ತಾರಲ್ಲ, ಅವರ ಮುಂದೇನೇ ಆಕಾಶದೆತ್ತರಕ್ಕೆ ಬೆಳೆಯಬೇಕು, ಅದು ಲೈಫ್’ ಎಂದರಂತೆ, ಅದನ್ನೇ ಸ್ಫೂರ್ತಿಯಾಗಿ ಪಡೆದ ಪೂನಂ ಮುಂದೆ ವೇಗದ ಬೌಲಿಂಗ್‌ ಬದಲು ಲೆಗ್‌ ಸ್ಪಿನ್ನರ್‌ ಆಗಿ ಬದಲಾದರು. ದೊಡ್ಡ ಸಾಧಕಿಯಾಗಿ ಟೀಕಾಕಾರರಿಗೆ ಸರಿಯಾದ ಉತ್ತರವನ್ನೇ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next