ಎದುರಾಳಿ ತಂಡಗಳಿಗೆ “ತಲೆನೋವು’ ತರುವಂಥ ಆಟಗಾರರು ಪ್ರತಿಯೊಂದು ಕ್ರಿಕೆಟ್ ತಂಡದಲ್ಲೂ ಇರುತ್ತಾರೆ. ಕೆಲವರು ಪ್ರಚಂಡ ಬೌಲಿಂಗ್ ಕಾರಣಕ್ಕೆ ಮತ್ತೆ ಕೆಲವರು ಭರ್ಜರಿ ಬ್ಯಾಟಿಂಗ್‌ನ ಕಾರಣಕ್ಕೆ ತಲೆನೋವು ಆಗುವುದುಂಟು, ಭಾರತದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್‌ನ ಆ್ಯಂಡ್ರೆ ರಸೆಲ್, ಶ್ರೀಲಂಕಾದ ಲಸಿತ್ ಮಾಲಿಂಗ, ದಕ್ಷಿಣ ಆಫ್ರಿಕಾದ ಸ್ಟೀವ್ ಸ್ಮಿತ್, ಇಂಗ್ಲೆಂಡಿನ ಜೋ ರೂಟ್, ಇವರೆಲ್ಲ, ತಮ್ಮ ಪ್ರಚಂಡ ಆಟದಿಂದಲೇ ಎದುರಾಳಿ ತಂಡದವರಿಗೆ ತಲೆನೋವು ತರುವ ಆಟಗಾರರು. ಆಸ್ಟ್ರೇಲಿಯ ತಂಡದಲ್ಲೂ ಅಂಥ ಒಬ್ಬ ಬ್ಯಾಟ್ಸ್‌ಮನ್ ಇದ್ದಾರೆ. ಅವರೇ ವಾರ್ನರ್. ಅವರು ಎಡಗೈ ಬ್ಯಾಟ್ಸ್‌ಮನ್ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
Advertisement
ಆದರೆ, ಆತ ಬಲಗೈಲಿ ಕೂಡ ಚೆನ್ನಾಗಿ ಬ್ಯಾಟ್ ಮಾಡಬಲ್ಲ ಎನ್ನುವುದು ಕೂಡ ನಿಜ. ಬಾಲ್ಯದಲ್ಲಿ ಎಡಗೈ ಬ್ಯಾಟ್ಸ್ ಮನ್ ಆಗಿದ್ದ ವಾರ್ನರ್, ಪ್ರತಿ ಚೆಂಡನ್ನು ಆಕಾಶದೆತ್ತರಕ್ಕೆ ಹೊಡೆಯುತ್ತಿದ್ದನಂತೆ, ಪರಿಣಾಮ ಪ್ರತಿ ಚೆಂಡೂ ಕ್ಯಾಚ್ ಆಗುತ್ತಿತ್ತು. ಅದನ್ನು ಗಮನಿಸಿದ ಕೋಚ್, ನಾಳೆಯಿಂದ ಬಲಗೈ ಬ್ಯಾಟ್ಸ್‌ಮನ್ ಆಗು ಅಂದನಂತೆ. ಪರಿಣಾಮ ವಾರ್ನರ್‌ಗೆ ಬಲಗೈ ಬ್ಯಾಟಿಂಗ್ ಕೂಡ ಬಂತು. ಈತನ ಆಟ ಗಮನಿಸಿದ ಅಮ್ಮ “ಬಲಗೈ ಬ್ಯಾಟಿಂಗ್‌ನಲ್ಲಿ ಅಂತಹ ಫೋರ್ಸ್ ಇಲ್ಲ ಮಗನೇ. ನೀನು ಎಡಗೈ ಬ್ಯಾಟ್ಸ್‌ಮನ್ ಆಗಿಯೇ ಮುಂದುವರಿ ಅಂದಳಂತೆ. ಅಂದಿನಿಂದ ವಾರ್ನರ್ ಎಡಗೈ ಬ್ಯಾಟ್ಸ್‌ಮನ್ ಆಗಿಯೇ ಎಲ್ಲರಿಗೂ “ವಾರ್ನ್’ ಮಾಡಲು ಶುರುವಿಟ್ಟರು.
ಒಂದು ದಿನದ ಕ್ರಿಕೆಟ್ ಪಂದ್ಯ ಆಡುವ ಆಟಗಾರರು ಹಾಕುವ ಜೆರ್ಸಿಗಳಿಗೆ ಒಂದೊಂದು ನಂಬರ್ ಇರುತ್ತದೆ. ಯುವರಾಜ್ ಸಿಂಗ್ (12), ಧೋನಿ (7), ಕೊಹ್ಲಿ (18), ಕ್ರಿಸ್ ಗೇಲ್ (333), ಸಚಿನ್ ತೆಂಡುಲ್ಕರ್ (10), ರೋಹಿತ್ ಶರ್ಮ (45), ದ್ರಾವಿಡ್ (19)…ಹೀಗೆ ಈ ನಂಬರ್‌ಗಳ ಹಿಂದಿರುವ ಸ್ವಾರಸ್ಯವೇನು ಎಂದು ಹೇಳಲು ಹೊರಟರೆ ವಿಶೇಷ ಅನಿಸುವಂತಹ ಸಂಗತಿಗಳು ಜತೆಯಾಗುತ್ತವೆ. ಯುವರಾಜ್ ಸಿಂಗ್, ಧೋನಿ, ಕೊಹ್ಲಿಯ ಜೆರ್ಸಿಯ ಮೇಲಿರುವ ನಂಬರ್‌ಗಳು ಅವರವರ ಹುಟ್ಟಿದ ದಿನಾಂಕವನ್ನು ಸಂಕೇತಿಸುತ್ತವೆೆ. ಗೇಲ್ ಟೆಸ್ಟ್‌ನಲ್ಲಿ ದಾಖಲಿಸಿದ ಅತೀ ಹೆಚ್ಚು ಸ್ಕೋರ್ 333, ಅದನ್ನೇ ಅವರ ಜೆರ್ಸಿ ನಂಬರ್ ಮಾಡಿಕೊಂಡಿದ್ದಾರೆ. ತೆಂಡುಲ್ಕರ್ ಆರಂಭದಲ್ಲಿ 99 ನಂಬರಿನ ಜೆರ್ಸಿ ತೊಡುತ್ತಿದ್ದರು. ಒಂದು ಸಂದರ್ಭದಲ್ಲಿ ಅವರು ಕುಟುಂಬದ ಜ್ಯೋತಿಷಿಯನ್ನು ಭೇಟಿಯಾದಾಗ 99 ಜೆರ್ಸಿಯ ಬದಲು 10ನೇ ಸಂಖ್ಯೆಯ ಜೆರ್ಸಿ ತೊಡಲು ಆರಂಭಿಸಿದರು. 19 ವಯೋಮಿತಿ ತಂಡದಲ್ಲಿ ವಿಶ್ವಕಪ್ ಆಡಲು ಹೊರಟಾಗ ರೋಹಿತ್ ಶರ್ಮ ಅವರಿಗೆ 45ನೇ ನಂಬರಿನ ಜೆರ್ಸಿ ಯನ್ನು ತೆಗೆದುಕೊಟ್ಟರಂತೆ. ಅಮ್ಮನ ಆಯ್ಕೆಯ ಜೆರ್ಸಿ ಎಂಬ ಕಾರಣಕ್ಕೆ ರೋಹಿತ್ ಈಗಲೂ ಅದೇ ನಂಬರಿನ ಜೆರ್ಸಿ ತೊಡುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ರಾಹುಲ್ ದ್ರಾವಿಡ್ 19 ನಂಬರಿನ ಜೆರ್ಸಿ ತೊಡುತ್ತಿದ್ದರು. ಅದರ ಹಿಂದಿರುವ ಗುಟ್ಟೇನು ಗೊತ್ತೆ?. ದ್ರಾವಿಡ್ ಅವರ ಪತ್ನಿಯ ಹುಟ್ಟುಹಬ್ಬದ ದಿನ.