ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಅಂದರೆ ಎಂಥ ಬ್ಯಾಟ್ಸ್ಮನ್‌ಗಳೂ ಗಡಗಡ ನಡುಗುತ್ತಿದ್ದ ಕಾಲವೊಂದಿತ್ತು. ಏಕೆಂದರೆ, ವಿಂಡೀಸ್ ತಂಡದಲ್ಲಿ ಆಗ ಎಕ್ಸ್‌ಪ್ರೆಸ್ ವೇಗದಲ್ಲಿ ಚೆಂಡು ಎಸೆಯಬಲ್ಲ ಬೌಲರ್‌ಗಳು ಇದ್ದರು. ಚೆಂಡು ಅದ್ಯಾವ ವೇಗದಲ್ಲಿ ಬರುತ್ತಿತ್ತು ಅಂದರೆ, ಬ್ಯಾಟ್ಸ್ಮನ್ ಚೆಂಡು ಬಾರಿಸುವ ಮೊದಲೇ ಅದು ವಿಕೆಟ್ ಹಾರಿಸಿರುತ್ತಿತ್ತು. ಎಷ್ಟೋ ಬಾರಿ, ಆಟ ಪ್ರಾರಂಭವಾಗಿ, ಸ್ಟೇಡಿಯಂಗೆ ಬಂದ ಜನರು, ಸೀಟ್ ಹಿಡಿದು ಕೂರುವ ಮೊದಲೇ ಎರಡು ವಿಕೆಟ್ ಗಳು ಬಿದ್ದಿರುತ್ತಿದ್ದವು. ಆಕಸ್ಮಾತ್ ಎದುರಾಳಿ ತಂಡದ ಆಟಗಾರರು, ವೇಗದ ಬೌಲಿಂಗ್ ಎದುರಿಸುವ ಚಾಕಚಕ್ಯತೆ ಹೊಂದಿದ್ದಾರೆ ಎಂದು ಗೊತ್ತಾದರೆ, ಆಗ ವಿಂಡೀಸ್‌ನ ಬೌಲರ್‌ಗಳು ಬೌನ್ಸರ್ ಹಾಕುತ್ತಿದ್ದರು. ರೊಯ್ಯನೆ ಬಂದ ಚೆಂಡು, ಹೊಟ್ಟೆ,ಭುಜ ಅಥವಾ ತಲೆಗೆ ಅಪ್ಪಳಿಸುವ ಸಾಧ್ಯತೆಗಳಿದ್ದವು. ಹಾಗೆ ಪೆಟ್ಟು ತಿಂದು ಆಟ ನಿಲ್ಲಿಸಿದವರಿಗೆ ಲೆಕ್ಕವಿಲ್ಲ.
Advertisement
ಚೆಂಡಿನ ಏಟು ತಪ್ಪಿಸಿಕೊಳ್ಳುವ ಭರದಲ್ಲಿ, ಆಟಗಾರರು ಅಡ್ಡಾದಿಡ್ಡಿಯಾಗಿ ಬ್ಯಾಟ್ ಬೀಸುತ್ತಿದ್ದರು. ಪರಿಣಾಮ, ಕ್ಯಾಚ್ ಕೊಟ್ಟು ಔಟ್ ಆಗುತ್ತಿದ್ದರು.ಆದರೆ, ಒಬ್ಬ ಆಟಗಾರ ಮಾತ್ರ ವಿಂಡೀಸ್ ನ ವೇಗಿಗಳ ಬೌನ್ಸರ್‌ಗೆ ತಲೆಯೇ ಕೆಡಿಸಿಕೊಳ್ಳಲಿಲ್ಲ. ಆತ ಯಾವಾಗಲೂ ಬಿಡುಬೀಸಾಗಿಯೇ ಆಡುತ್ತಿದ್ದ. ದೈಹಿಕವಾಗಿ ಆತ ಕುಳ್ಳಗಿದ್ದ ಕಾರಣ, ಬೌನ್ಸರ್ ಹಾಕಿದರೆ ಚೆಂಡು ಆತನ ತಲೆಯ ಮೇಲಿಂದ ಹಾರಿಹೋಗಿ ವಿಕೆಟ್ ಕೀಪರ್ ಕೈ ಸೇರುತ್ತಿತ್ತು. ಆಕಸ್ಮಾತ್, ಕೀಪರ್ ಸ್ವಲ್ಪ ಮೈಮರೆತರೂ ಆ ಚೆಂಡು ಬೌಂಡರಿ ತಲುಪುತ್ತಿತ್ತು. ಮತ್ತೂಂದು ಸ್ವಾರಸ್ಯವೆಂದರೆ, ಉಳಿದೆಲ್ಲಾ ಆಟಗಾರರೂ ವಿಂಡೀಸ್ ನ ಬೌಲರ್‌ಗಳ ಎದುರು ತಿಣುಕಾಡಿದರೆ, ಆ ಕುಳ್ಳ ಆಟಗಾರ, ಆರಾಮಾಗಿ ಸೆಂಚುರಿ ಹೊಡೆಯುತ್ತಿದ್ದ! ಆ ಕುಳ್ಳ ಬ್ಯಾಟ್ಸಮನ್ ಯಾರು ಗೊತ್ತೆ?- ಸುನೀಲ್ ಗವಾಸ್ಕರ್!
ಭಾರತ ಅಥ್ಲೆಟಿಕ್ಸ್ ರಂಗದ ಧ್ರುವತಾರೆ ಎಂದು ಹೆಸರು ಗಳಿಸಿದಾಕೆ ಪಿ ಟಿ ಉಷಾ. ಹೆಂಗಸರು ಏನು ಮಹಾ ಸಾಧಿಸ್ತಾರೆ ಎಂದು ಎಲ್ಲರೂ ಹೇಳುತ್ತಿದ್ದ ದಿನಗಳಲ್ಲಿ ಓಟದ ರಾಣಿ ಅನ್ನಿಸಿಕೊಂಡಿದ್ದು, ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಪದಕ ಗೆದ್ದು ಕೊಟ್ಟದ್ದು ಉಷಾ ಅವರ ಹೆಗ್ಗಳಿಕೆ. ಉಷಾ ಪದಕ ಗೆದ್ದ ನಂತರ ಅವರಿಗೆ ನೌಕರಿ ನೀಡಿದ್ದ ರೈಲ್ವೇಸ್ ಇಲಾಖೆ ಪ್ರಮೋಷನ್ ನೀಡಿತು. ಅಷ್ಟೇ ಅಲ್ಲ,ಹಲವು ಸಂದರ್ಭಗಳಲ್ಲಿ ತನ್ನ ಬ್ರ್ಯಾಂಡ್ ರಾಯಭಾರಿಯಾಗಿಯೂ ಆಯ್ಕೆ ಮಾಡಿತು. ಹೃದಯಸ್ಪರ್ಶಿ ಅನ್ನುವಂಥ ಬೆಳವಣಿಗೆಯೊಂದು ಜರುಗಿದ್ದೇ ಆಗ. ಏನೆಂದರೆ, ಉಷಾ ಅವರು ನೋಡಲು ಅಷ್ಟೇನೂ ಸುಂದರವಾಗಿ ಇರಲಿಲ್ಲ. ಇಲಾಖೆಯ ರಾಯಭಾರಿ ಅಂದಮೇಲೆ, ಹಲವು ಜನರನ್ನು ಭೇಟಿ ಆಗಬೇಕಾಗುತ್ತದೆ. ಅಂಥಾ ಸಂದರ್ಭದಲ್ಲಿ ನಾನು ಸಾಧಾರಣ ರೂಪಿನವಳು ಎಂಬ ಗಿಲ್ಟ್ ಅವರನ್ನು ಕಾಡಬಾರದು ಎಂದು ಯೋಚಿಸಿದ ಇಲಾಖೆ, ಉಷಾ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಲು ಮುಂದಾಯಿತು. ಆ ಮೂಲಕ ಉಷಾ ಅವರ ಸೌಂದರ್ಯ ಸ್ವಲ್ಪ ಹೆಚ್ಚಾಗುವಂತೆ ನೋಡಿಕೊಂಡಿತು.