ವರದಿ: ಶಶಿಧರ್ ಬುದ್ನಿ
ಧಾರವಾಡ: ಒಂದು ಕಾಲದಲ್ಲಿ ರೈತರು ಬೆಳೆದ ಬೆಳೆಗಳಿಗೆ ಬೆಲೆ ನಿಗದಿ ಮಾಡುವ ಹಾಗೂ ರೈತರ ಶ್ರಮಕ್ಕೆ ಫಲ ನೀಡುವ ಸ್ಥಳವಾಗಿದ್ದ ಇಲ್ಲಿನ ಹಳೇ ಎಪಿಎಂಸಿ ಇದೀಗ ಅಕ್ಷರಶಃ ಹಾಳು ಕೊಂಪೆಯಂತೆ ಆಗಿದ್ದು, ಅದರಲ್ಲೂ ರಾತ್ರಿಯಾದರೆ ಸಾಕು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ.
ರೈತರ ಅನುಕೂಲಕ್ಕಾಗಿ ಹೊಸ ಎಪಿಎಂಸಿ ನಿರ್ಮಾಣ ಮಾಡಿ ಸಕಲ ಮೂಲಸೌಕರ್ಯ ನೀಡಲಾಗಿದೆ. ಆದರೆ ಹಳೇ ಎಪಿಎಂಸಿ ಕಡೆ ನಿರ್ಲಕ್ಷ್ಯ ಭಾವ ತಾಳಿರುವ ಕಾರಣ ಹಾಳು ಕೊಂಪೆಯಂತೆ ಮಾರ್ಪಟ್ಟು ಈಗ ರೈತರು ಕಾಲಿಡಲೂ ಸಹ ಹೇಸಿಗೆ ಪಡುವಂತಾಗಿದೆ. ಪ್ರವೇಶ ದ್ವಾರದಲ್ಲಿರುವ ಕಮಾನು ಶಿಥಿಲಾವಸ್ಥೆ ತಲುಪಿದ್ದು, ಯಾವಾಗ ಬೇಕಾದರೂ ಕುಸಿದು ಬೀಳುವ ದುಸ್ಥಿತಿಯಲ್ಲಿದೆ.
ಓಪನ್ ಬಾರ್ ಆದ ಮಾರುಕಟ್ಟೆ: ಹೊಸ ಎಪಿಎಂಸಿ ನಿರ್ಮಾಣಕ್ಕೆ ಚಾಲನೆ ಸಿಕ್ಕ ಬಳಿಕ ಹಳೇ ಎಪಿಎಂಸಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಬಂದಿದೆ. ಹೊಸ ಎಪಿಎಂಸಿಗೆ ಸಿಕ್ಕ ಆದ್ಯತೆ ಹಳೇ ಎಪಿಎಂಸಿಗೆ ಸಿಗದೇ ನಿರ್ವಹಣೆಯ ಕೊರತೆಯಿಂದ ಈ ದುಸ್ಥಿತಿಗೆ ಬಂದು ನಿಂತಿದೆ.
ಎಪಿಎಂಸಿ ಆವರಣದ ಎಲ್ಲ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿವೆ. ಶುಚಿತ್ವದ ಕೊರತೆ ಎಲ್ಲೆಡೆ ಎದ್ದು ಕಾಣುವಂತಾಗಿದ್ದು, ಹಂದಿಗಳ ಸಾಮ್ರಾಜ್ಯಕ್ಕೆ ನಾಂದಿ ಹಾಡಿದೆ. ರಾತ್ರಿಯಾದರೆ ಸಾಕು ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಮದ್ಯದ ಬಾಟಲಿಗಳು ಮಾರುಕಟ್ಟೆ ಆವರಣದಲ್ಲಿ ಅಲ್ಲಲ್ಲಿ ಕಂಡು ಬರುತ್ತವೆ. ಪ್ರತಿನಿತ್ಯ ರಾತ್ರಿ ಹೊತ್ತು ಕುಡುಕರ ದರ್ಬಾರ್ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಕೆಲಸ ಈವರೆಗೂ ಆಗಿಲ್ಲ.