ಹಳೆಯಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂಕ್ತ ಚರಂಡಿಯ ವ್ಯವಸ್ಥೆ ಇಲ್ಲದೇ, ಧಾರಾಕಾರವಾಗಿ ಸುರಿಯುತ್ತಿರುವ ಮಳೆ ನೀರು ಹೆದ್ದಾರಿಯಲ್ಲಿಯೇ ನಿಂತು ಸಮಸ್ಯೆ ಸೃಷ್ಟಿಯಾಗಿದೆ. ಹಳೆಯಂಗಡಿಯ ಹೆದ್ದಾರಿಯಿಂದ ಪಕ್ಷಿಕೆರೆ ರಸ್ತೆಯಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಈ ತಿರುವಿನಲ್ಲಿಯೇ ನಿಂತಿರುವ ಮಳೆ ನೀರಿನ ಮೇಲೆ ವಾಹನಗಳು ಸಂಚರಿಸುವಾಗ ಪಾದಚಾರಿಗಳಿಗೆ ನೀರಿನ ಸಿಂಚನವಾಗುತ್ತಿದೆ. ಇಲ್ಲಿನ ಹೊಂಡ ಗುಂಡಿಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ವಾಹನಗಳು ಸಹ ಹೊಂಡ ಗುಂಡಿಯಲ್ಲಿ ಯೇ ಚಲಿಸಬೇಕಾದ ಅನಿವಾರ್ಯತೆ ಇದೆ.
ಉಡುಪಿಯತ್ತ ಚಲಿಸುವ ಹಳೆಯಂಗಡಿ ಬಸ್ ನಿಲ್ದಾಣದಲ್ಲಿ ಒಂದಷ್ಟು ಕಲ್ಲು ಮಣ್ಣುಗಳನ್ನು ಹಾಕಿರುವುದರಿಂದ ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲದೇ ಪಕ್ಕದ ಚರಂಡಿಗೆ ನೇರವಾಗಿ ಸೇರುತ್ತಿದೆ. ಜತೆಗೆ ಮಂಗಳೂರಿನತ್ತ ಸಂಚರಿಸುವ ಬಸ್ ನಿಲ್ದಾಣದಲ್ಲಿನ ಚರಂಡಿ ಹಾಗೂ ಹೊಂಡಗಳಿಗೆ ಇತ್ತೀಚೆಗೆ ಸ್ಥಳೀಯ ಸೇವಾ ಸಂಸ್ಥೆಗಳು ಶ್ರಮದಾನದ ಮೂಲಕ ದುರಸ್ತಿ ಮಾಡಿದ್ದರಿಂದ ಇಲ್ಲಿ ಸಮಸ್ಯೆಗಳು ಕಾಡುತ್ತಿಲ್ಲ.
ಪಕ್ಷಿಕೆರೆ ರೈಲ್ವೇ ಕ್ರಾಸಿಂಗ್‌ನ ಲೋಕೋ ಪಯೋಗಿ ಇಲಾಖೆಗೆ ಸೇರಿದ ರಸ್ತೆ ಯಲ್ಲಿಯೂ ಸಹ ಅಲ್ಲಲ್ಲಿ ಮಳೆ ನೀರು ನಿಂತಿದೆ. ಇಂಟರ್ ಲಾಕ್ ರಸ್ತೆಯಾಗಿದ್ದು, ಎರಡೂ ಪಕ್ಕದಲ್ಲಿಯೂ ಜಮೀನು ಸಮಸ್ಯೆ ಯಿಂದ ಚರಂಡಿಗಳನ್ನು ನಿರ್ಮಿಸಿಲ್ಲ ರಸ್ತೆಯ ಮೇಲೆಯೇ ಮಳೆ ನೀರು ಹರಿಯುತ್ತಿದೆ.
ಗ್ರಾಮ ಪಂಚಾಯತ್‌ಗಳ ಒಳ ರಸ್ತೆಗಳಲ್ಲಿ ಹೂಳನ್ನು ತೆಗೆದು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರಿಂದ ಈ ರಸ್ತೆಯ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುತ್ತಿದೆ. ಆದರೆ ಹೆದ್ದಾರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಸೇರಿದ ರಸ್ತೆಗಳಲ್ಲಿ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದರಿಂದ ಈ ಸಮಸ್ಯೆಗಳು ಕಾಡಿದೆ. ಪ್ರಥಮ ಮಳೆಗೆ ಈ ರೀತಿಯಾದಲ್ಲಿ ಮುಂದೇನು ಎಂದು ಸ್ಥಳೀಯ ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಕಳೆದ ವಾರ ನೇರ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿಯೂ ಸಹ ಸ್ಥಳೀಯ ನಾಗರಿಕರೊಬ್ಬರು ಈ ಸಮಸ್ಯೆಯ ಬಗ್ಗೆ ಪೊಲೀಸ್ ಇಲಾಖೆಯ ಮೂಲಕ ಹೆದ್ದಾರಿ ಇಲಾಖೆಯ ಗಮನ ಸೆಳೆದಿದ್ದರೂ ಸಹ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಮೂಲ್ಕಿ: ಉತ್ತಮ ಮಳೆ
ಮೂಲ್ಕಿ: ಎರಡು ದಿನಗಳಿಂದ ಮೂಲ್ಕಿಯ ಪರಿಸರದ ಗ್ರಾಮಗಳಲ್ಲಿ ಸಿಡಿಲು, ಮಿಂಚು ರಹಿತವಾಗಿ ಸ್ವಲ್ಪ ಗಾಳಿಯೊಂದಿಗೆ ಉತ್ತಮ ಮಳೆಯಾಗಿದೆ. ಯಾವುದೇ ರೀತಿಯ ಅನಾಹುತಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಕೆಲವು ಪ್ರದೇಶಗಳ ಚರಂಡಿಯಲ್ಲಿ ನೀರು ಹರಿದು ಹೋಗಲು ಅನಾನುಕೂಲವಾಗುತ್ತಿರುವುದು ನಗರದ ಆಡಳಿತ ಗಮನಕ್ಕೆ ಬಂದಿದ್ದು ಸೂಕ್ತ ಕ್ರಮಕ್ಕೆ ಮುಂದಾಗಿದೆ.