Advertisement

ಏಳು ತಿಂಗಳಿಂದ ಬಂದಿಲ್ಲ ವೃದ್ಧಾಪ್ಯ ವೇತನ

03:42 PM Jan 17, 2020 | Suhan S |

ಗಂಗಾವತಿ: ಸಾಮಾಜಿಕ ಭದ್ರತಾ ಯೋಜನೆಯಲ್ಲಿ ವಯೋವೃದ್ಧರು ಹಾಗೂ ಹಿರಿಯರಿಗೆ ನೀಡಲಾಗುತ್ತಿದ್ದ ಪಿಂಚಣಿ ಮಾಶಾಸನ ಕಳೆದ 7 ತಿಂಗಳಿಂದ ನಿಲುಗಡೆಯಾಗಿದ್ದು, ತಹಸೀಲ್ದಾರ್‌ ಕಚೇರಿ ಹಾಗೂ ತಾಲೂಕು ಖಜಾನಾಧಿಕಾರಿಗಳ ಕಚೇರಿಗೆ ಪ್ರತಿದಿನ ಸುತ್ತಿದರೂ ಪ್ರಯೋಜನವಾಗುತ್ತಿಲ್ಲ.

Advertisement

ಸಾಮಾಜಿಕ ಭದ್ರತಾ ಯೋಜನೆಯ ಮಾಶಾಸನ ಹಾಗೂ ವೃದ್ಧಾಪ್ಯ ವೇತನ ಯೋಜನೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಅಗತ್ಯ ದಾಖಲಾತಿ ಪಡೆದು ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಅಥವಾ ಅಂಚೆ ಕಚೇರಿ ಖಾತೆಗಳಿಗೆ ಜಮಾ ಮಾಡಲು ಸಾಮಾಜಿಕ ಭದ್ರತಾ ನಿರ್ದೇಶನಾಲಯ ತೀರ್ಮಾನಿಸಿ ಮಾಶಾಸನವನ್ನು ತಾತ್ಕಾಲಿಕವಾಗಿ ರದ್ದು ಮಾಡಿದೆ.

ಗಂಗಾವತಿ ಸೇರಿದಂತೆ ಜಿಲ್ಲೆಯ 32 ಸಾವಿರಕ್ಕೂ ಅಧಿಕ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲರ ಮಾಸಾಶನ ಕಳೆದ 7 ತಿಂಗಳಿಂದ ಮಂಜೂರಿಯಾಗಿಲ್ಲ. ಇದರಿಂದ ವೃದ್ಧರು ಅಗತ್ಯಕ್ಕೆ ಹಣವಿಲ್ಲದೆ ಪರಿತಪಿಸುವಂತಾಗಿದೆ. ಪ್ರತಿದಿನ ಮನೆ ಹತ್ತಿರ ಬರುವ ಪೋಸ್ಟ್‌ಮ್ಯಾನ್‌ ಅವರನ್ನು ವೇತನಕ್ಕಾಗಿ ಕೇಳುವ ಸ್ಥಿತಿ ಬಂದಿದೆ.

ಇನ್ನು ತಹಸೀಲ್ದಾರ್‌ ಕಚೇರಿಯಲ್ಲಿ ವಿಚಾರಿಸಿದರೆ ಕೆ2 ತೊಂದರೆ ಸರಿಪಡಿಸಿದ ನಂತರ ವೇತನ ಬರುತ್ತದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಇನ್ನೂ ಕೆಲವರು ವೇತನ ಮಂಜೂರಾತಿ ಪ್ರಮಾಣ ಪತ್ರ, ಆಧಾರ ಕಾರ್ಡ್‌, ಪಾನ್‌ಕಾರ್ಡ್‌, ಮತದಾರರ ಯಾದಿ, ಅಂಚೆಕಚೇರಿ ಪಾಸ್‌ ಬುಕ್‌ ನೀಡುವಂತೆ ಕೇಳುತ್ತಿದ್ದಾರೆ. ಕೆಲವು ಮಧ್ಯವರ್ತಿಗಳು ನಗರ ಮತ್ತು ತಾಲೂಕಿನ ಬಸಾಪಟ್ಟಣ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಅನರ್ಹರಿಗೂ ವೃದ್ಧಾಪ್ಯ ಸಂಧ್ಯಾ ಸುರಕ್ಷಕ, ಅಂಗವಿಕಲ, ವಿಧವಾ ವೇತನ ಮಂಜೂರು ಮಾಡಿಸಿರುವುದು ಕೆಲ ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದಿದೆ. ಇದರಿಂದ ಸರಕಾರ ಮೇಲಿನ ಹೊರೆ ತಪ್ಪಿಸಲು ಸಾಮಾಜಿಕ ಭದ್ರತಾ ಯೋಜನೆಯ ನಿರ್ದೇಶನಾಲಯ ಪುನಃ ರಾಜ್ಯದ ಎಲ್ಲಾ ತಾಲೂಕಿನಿಂದ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾ ವೇತನ ಫಲಾನುಭವಿಗಳ ದಾಖಲಾತಿ ಪರಿಶೀಲನೆ ನಡೆಸಿ ಪ್ರತಿಯೊಬ್ಬ ಸಾಮಾಜಿಕ ಭದ್ರತಾ ಯೋಜನೆಯ ವೇತನವನ್ನು ಬ್ಯಾಂಕ್‌ ಮತ್ತು ಅಂಚೆ ಕಚೇರಿ ಖಾತೆಗಳಿಗೆ ಜಮಾ ಮಾಡಲು ಯೋಜಿಸಿದೆ.

ಸಾಮಾಜಿಕ ಭದ್ರತಾ ಯೋಜನೆಯ ಮಾಶಾಸನವನ್ನು ನೇರವಾಗಿ ಬ್ಯಾಂಕ್‌ ಮತ್ತು ಅಂಚೆ ಕಚೇರಿ ಖಾತೆಗಳಿಗೆ ಜಮಾ ಮಾಡಲು ದಾಖಲಾತಿ ಜೋಡಣೆ ಕಾರ್ಯ(ಕೆ2) ಮಾಡಲಾಗುತ್ತಿದೆ. ಇನ್ನು ಸ್ವಲ್ಪ ಫಲಾನುಭವಿಗಳ ಖಾತೆ ಜೋಡಣೆ ಬಾಕಿ ಇದೆ. ಶೀಘ್ರ ಸಮಸ್ಯೆ ಬಗೆಹರಿಯಲಿದೆ. ಗಂಗಾವತಿ ತಾಲೂಕಿನಲ್ಲಿ ಶೀಘ್ರವೇ ಪಿಂಚಣಿ ಪಡೆಯುವವರ ಅದಾಲತ್‌ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ.ಎಲ್‌.ಡಿ.ಚಂದ್ರಕಾಂತ, ತಹಸೀಲ್ದಾರ್‌.

Advertisement

 

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next