ಮಕ್ಕಳು ಬೇಕಾ ಎನ್ನುವ ಪ್ರಶ್ನೆ ವೃದ್ದಾಪ್ಯದಲ್ಲಿ ಕಾಡುವ ಪ್ರತಿ ಪಾಲಕರ ಹೃದಯದ ಕೊರಗಿನ ಅಳಲು ಮತ್ತು ವ್ಯಾಕುಲತೆ. ನಾವು ಹೆತ್ತ ಮಕ್ಕಳಿಗೆ ಭಾರವೇ..? ಪ್ರೀತಿ ಕಾಳಜಿ ತೋರಿಸುವ ಹೃದಯ ಬರಿದಾಗಿದೆಯೇ ಮಕ್ಕಳ ಪಾಲಿಗೆ? ಅದಕ್ಕೆ ನಮ್ಮನ್ನು ವೃದ್ರಾಶ್ರಮ ಬಿಟ್ಟು ಬಿಡುತ್ತಾರ..? ಮಕ್ಕಳು ಒಂದು ತುತ್ತು ಅನ್ನ ಹಾಕಿದರೆ ಅವರ ಸಂಪಾದನೆ ಕರಗಿ ಹೋಗುತ್ತದೆ ಎನ್ನುವ ಸ್ವಾರ್ಥವ? ಮಕ್ಕಳು ನೋಡಿಕೊಳ್ಳಲಿ ಎಂದು ಕಾನೂನಿನ ಮೊರೆ ಹೋಗಬೇಕಾ? ಪ್ರಶ್ನೆಗಳ ಸಾಲು ಉತ್ತರ ಸಿಗದ ಮೌನದ ನರಳಾಟದ ಪಾಡು ಹೆತ್ತು ಹೊತ್ತು ಸಾಕಿದ ಪಾಲಕರಿಗೆ.
“ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರೀಕರ ರಕ್ಷಣೆ ಕಾಯ್ದೆ 2007” ಅಡಿಯಲ್ಲಿ ಹಿರಿಯ ನಾಗರಿಕರ ರಕ್ಷಣೆಗಾಗಿ ಕಾನೂನುಗಳು ಅನುಷ್ಠಾನಗೊಂಡಿದೆ. ಮಕ್ಕಳ ವಿರುದ್ಧ ಹೋಗುವುದು ಸರಿಯೇ ಅಂಜಿಕೆಯಿಂದ ಕಾನೂನು ಮೊರೆ ಹೋಗದೆ ಅದೆಷ್ಟೋ ಪಾಲಕರು ಮೂಕವೇದನೆಯಲ್ಲೇ ಜೀವನ ಸಾಗಿಸುತ್ತಾರೆ.
ದುಡ್ಡು ಇರೋರ್ಗೆ ಹೇಗೋ ಆಗುತ್ತೆ ವೃದ್ದಾಪ್ಯ ಜೀವನ. ಆದರೆ ಮಧ್ಯಮ ವರ್ಗದವರು ಬಡತನದಲ್ಲಿ ಬೆಂದವರು ಜೀವನಪೂರ್ತಿ ಗಳಿಸಿದ ಸಂಪಾದನೆಯೆಲ್ಲ ಮಕ್ಕಳ ಅಭಿವೃದ್ದಿಗಾಗಿ ವ್ಯಯಿಸಿರುತ್ತಾರೆ. ಕೂಡಿಟ್ಟ ಅಲ್ಪ ಸ್ವಲ್ಪ ಹಣ, ಒಡವೆ ಹಾಗೂ ಬರುವ ಪಿಂಚಣಿಯನ್ನು ಸಹ ಬಿಡದೆ ಕಸಿದುಕೊಂಡು ಬರಿದು ಮಾಡಿಬಿಡುತ್ತಾರೆ. ಕೊನೆಗೆ ವೃದ್ದಾಪ್ಯದಲ್ಲಿ ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುವ ಸ್ಥಿತಿ ಕಣ್ಣಿಗೆ ಕಾಣುವ ಭೀಕರ ದೃಶ್ಯ. ಏಕೆ ಹೀಗೆ.. ವಿಮರ್ಶಿಸಿದಷ್ಟು ಸೋಜಿಗವೇ ..
ಪಾಲಕರು ಮಕ್ಕಳು ಹುಟ್ಟಿದಾಗ ಬಹು ಸಂಭ್ರಮದಿಂದ ಬಂಧುಗಳಿಗೆ, ಸ್ನೇಹಿತರಿಗೆ ಮತ್ತು ಅಕ್ಕ ಪಕ್ಕದವರಿಗೆ ಸಿಹಿ ಹಂಚಿ ತಮ್ಮ ಖುಷಿಯನ್ನು ವ್ಯಕ್ತಿಪಡಿಸಿಕೊಳ್ಳುತ್ತಾರೆ. ಕಾಳಜಿಯ ಮಹಪೂರ ಹರಿಸಿ ಮಕ್ಕಳಿಗೆ ಕಣ್ಣಾಗಿ ಕಾಪಾಡುತ್ತಾರೆ. ಅವರಿಗಾಗಿ ಹಗಲಿರುಳು ಶ್ರಮಿಸಿ ದುಡಿಯುತ್ತಾರೆ. ಕರ್ತವ್ಯ ಹೌದು! ಜೊತೆಗೆ ಪ್ರೀತಿ ಮಮತೆಯ ಮುತ್ತು ಅಡಗಿರುತ್ತದೆ. ಮಕ್ಕಳ ಜೀವನ ಉಜ್ವಲವಾಗಿರಬೇಕು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ನಾಲ್ಕು ಜನರು ಮುಂದೆ ಒಳ್ಳೆಯ ಹೆಸರು ಪಡೆಯ ಬೇಕೆಂದು ಮನಪೂರ್ತಿ ಹಾರೈಸುತ್ತಾರೆ.
ಮಕ್ಕಳೇ ಸರ್ವಸ್ವ ಮಕ್ಕಳೇ ಬದುಕು-ಬವಣೆ ಅಂದುಕೊಂಡು ಬೆವರು ಸುರಿಸಿ ಕಷ್ಟಪಟ್ಟು ಬೆಳೆಸುತ್ತಾರೆ. ತಮ್ಮ ಬಳಿ ಇರದಿದ್ದರೂ ಸಾಲ ಸೋಲ ಮಾಡಿ ಒಳ್ಳೆಯ ಶಿಕ್ಷಣ ಕೊಡಿಸಲು ಶ್ರಮಪಡುತ್ತಾರೆ. ಮಕ್ಕಳು ಒಂದು ಹಂತಕ್ಕೆ ತಲುಪಿದರೆ ಸಾಕು ರೆಕ್ಕೆ ಬಲಿತ ಹಕ್ಕಿ ಹರಿಬಿಡುವಂತೆ ಅವರ ಬದುಕೇ ಅವರಿಗೆ ದೊಡ್ಡದು!
ಹೆತ್ತವರ ಪಾತ್ರವೇ ಮುಗಿದು ಹೋಗಿದೆ ಅನ್ನುವ ಭ್ರಮೆಯಲ್ಲಿ ಜೀವಿಸಿ ಅವರನ್ನು ದೂರ ಮಾಡುತ್ತಾರೆ ಮತ್ತು ನಮಗೂ ಮುಂದೆ ಒಂದು ದಿನ ವೃದ್ಧಪದ ದಿನಗಳು ಬರುವುದು ? ಇದೆ ಪರಿಸ್ಥಿತಿ ಎದುರಾಗುವುದು ಎನ್ನುವ ಸಾಮಾನ್ಯ ಪರಿಜ್ಞಾನವೂ ಇಲ್ಲದೆ ಬದುಕು ಸಾಗಿಸುತ್ತಿರುವುದು ವಿಪರ್ಯಾಸವೇ ಸರಿ.
ಇತ್ತೀಚೆಗಷ್ಟೇ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಷಯ ಇತಿಹಾಸವೇ ತಲೆತಗ್ಗಿಸುವ ಮನಕಲಕುವ ದೃಶ್ಯ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸಾವು. ಮಗಳಿಗೆ ಹೆತ್ತ ತಂದೆಯ ಮುಖವನ್ನು ಕೊನೆಯ ಬಾರಿಗೆ ನೋಡಿ ಅಂತಿಮ ಸಂಸ್ಕಾರ ಮಾಡದಷ್ಟು ಮಾನವೀಯತೆ ಸತ್ತು ಹೋಗಿದೆಯೇ?
ಹೆತ್ತವರ ಋಣ ತೀರಿಸೊಕೆ ಇರುವ ಒಂದು ದಾರಿಯನ್ನು ತುಳಿದು ಬದುಕುವ ಬದುಕು ಒಂದು ಬದುಕೇ ? ಉಫ್ ! ಮುಂದಿನ ಸ್ಥಿತಿ ಹೀಗೆ ಮುಂದುವರೆದರೆ ಕುಟುಂಬ ಪ್ರೀತಿ ವಾತ್ಸಲ್ಯಗಳ ಮೌಲ್ಯ ಕಳೆದುಕೊಂಡು ಪ್ರೀತಿ ಕಾಳಜಿ ಮತ್ತು ಮಮತೆ ಬಾಂಧವ್ಯದ ಅರ್ಥವೇ ನಶಿಸಿ ಯಂತ್ರದ ಬದುಕು ಸಾಗಿಸುವಂತೆ ಆಗಿಬಿಡುತ್ತದೆ ಅಷ್ಟೇ !
ಮಕ್ಕಳ ಕಾಳಜಿ ಪ್ರೀತಿಗಾಗಿ ಹಪಹಪಿಸುವ ಪಾಲಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಹೆತ್ತವರ ಋಣ ತೀರಿಸಲಾಗದು ಅವರ ಪರಿಶ್ರಮಕ್ಕೆ ಬೆಲೆ ಕಟ್ಟಲೇಬೇಕು ಇನ್ನಾದರೂ ಯುವ ಮನಸುಗಳು ಅರಿತುಕೊಂಡರೆ ವೃದ್ಧಶ್ರಮಗಳ ಸಂಖ್ಯೆ ಕ್ಷೀಣಿಸಬಹುದು ಮಕ್ಕಳ ಪ್ರೀತಿ ಕಾಳಜಿ ಕೊಂಚವಾದರೂ ಸಿಕ್ಕರೆ ಪಾಲಕರ ಪಾಲಿಗೆ ನೆಮ್ಮದಿಯ ನಿಟ್ಟುಸಿರು.
ವಾಣಿ,
ಮೈಸೂರು