ಹೊಸದಿಲ್ಲಿ: ದೇಶಾದ್ಯಂತ 70 ವರ್ಷ ದಾಟಿದ ಎಲ್ಲರನ್ನೂ ಆಯುಷ್ಮಾನ್ ವಿಮೆ ಯೋಜನೆ ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಹಿರಿಯ ನಾಗರಿಕರಿಗೆ ಅಗತ್ಯವಿರುವ ಹೆಚ್ಚುವರಿ ಆರೋಗ್ಯ ಪ್ಯಾಕೇಜ್‌ಗಳನ್ನು ಯೋಜನೆಗೆ ಸೇರಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ವೃದ್ಧರಲ್ಲಿ ಹೆಚ್ಚಾಗಿರುವ ಮರೆಗುಳಿತನ, ಬುದ್ಧಿಮಾಂದ್ಯ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳನ್ನು ವಿಮೆ ವ್ಯಾಪ್ತಿಗೆ ಸೇರಿಸುವ ಕುರಿತು ಕೇಂದ್ರ ಸರಕಾರದ ಮಟ್ಟದಲ್ಲಿ ಚಿಂತನೆಗಳು ನಡೆದಿವೆ ಎನ್ನಲಾಗಿದೆ.
ಇಂಥ ಸೇವೆಗಳು ಸೇರ್ಪಡೆಯಾದರೆ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಎಲ್ಲ ಹಿರಿಯರನ್ನೂ ಯೋಜನೆ ವ್ಯಾಪ್ತಿಗೆ ತರುವುದರಿಂದ 4.5 ಕೋಟಿ ಕುಟುಂಬಗಳ ಸುಮಾರು 6 ಕೋಟಿ ನಾಗರಿಕರಿಗೆ ಪ್ರಯೋಜನವಾಗಲಿದೆ. ಈ ಮಾಸಾಂತ್ಯದಲ್ಲೇ ಅಧಿಕೃತವಾಗಿ ಈ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ. ಅದರಂತೆ ಮಾಸಾಂತ್ಯಕ್ಕೆ ವಿಸ್ತೃತ ಸೇವೆಗಳು ಸಿಗುವ ಸಾಧ್ಯತೆಗಳು ಇವೆ.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ)ಯ ಅನುಷ್ಠಾನ ಸಂಸ್ಥೆಯಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಈ ಕುರಿತು ಪರಿಶೀಲನೆ ನಡೆಸುತ್ತಿದೆ.
ಎಬಿ-ಪಿಎಂಜೆಎವೈ ವ್ಯಾಪ್ತಿಯಲ್ಲಿ 27 ವಿವಿಧ ವೈದ್ಯಕೀಯ ವಿಭಾಗಗಳಿಗೆ ಸೇರಿದ 1,949 ವೈದ್ಯಕೀಯ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿವೆ. ಸೆ. 1ರ ವರೆಗೆ ದೇಶದಲ್ಲಿರುವ ಖಾಸಗಿ ವಲಯದ 12,696 ಸಹಿತ 29,648 ಆಸ್ಪತ್ರೆಗಳಲ್ಲಿ ಈ ಯೋಜನೆಯ ಲಾಭಗಳನ್ನು ಸಾರ್ವಜನಿಕರು ಪಡೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಧಾರ್ ಕಾರ್ಡ್‌ನಲ್ಲಿ 70 ವರ್ಷ ಮೀರಿದ ಹಿರಿಯ ನಾಗರಿಕರು ಯೋಜನೆಯ ಲಾಭ ಪಡೆಯಲು ಅರ್ಹರು. ಪಿಎಂಜೆಎವೈ ಆ್ಯಪ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಆಯುಷ್ಮಾನ್ ಭಾರತ ಕಾರ್ಡ್ ಇದ್ದವರು ಮತ್ತೂಂದು ಕಾರ್ಡ್ ಬೇಕಿದ್ದರೆ ಹೊಸದಾಗಿ ನೋಂದಣಿ ಮಾಡಿಸಿ ಕೊಳ್ಳಬೇಕು. ಜತೆಗೆ ಕೈವೈಸಿ ಪ್ರಕ್ರಿಯೆ ನಡೆಸಬೇಕು. 70 ವರ್ಷ ದಾಟಿದವರು ಮತ್ತು ಅವರ ಕುಟುಂಬದವರು ಈಗಾಗಲೇ ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರೆ, 5 ಲಕ್ಷ ರೂ. ವರೆಗೆ ಹೆಚ್ಚುವರಿ ಆರೋಗ್ಯ ವಿಮೆ ಸಿಗಲಿದೆ.
ಉಪಯೋಗವೇನು?
-ಮರೆಗುಳಿತನ, ಕ್ಯಾನ್ಸರ್, ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರಿಗೆ ಅನುಕೂಲ
-4.5 ಕೋಟಿ ಕುಟುಂಬಗಳ ಸುಮಾರು 6 ಕೋಟಿ ಹಿರಿಯ ನಾಗರಿಕರಿಗೆ ವಿಮಾ ಸೌಲಭ್ಯ
– ಈಗಾಗಲೇ ನೋಂದಣಿ ಆದವರಿಗೆ ಹೆಚ್ಚುವರಿ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ