Advertisement

ಕುಡಿಯುವ ನೀರಿನ ಬಿಲ್‌ ಕಟ್ಟದಿದ್ದರೆ ಪೊಲೀಸ್‌ ಕೇಸ್‌!

09:43 AM Jan 25, 2019 | |

ಬಡಗನ್ನೂರು : ಕುಡಿಯುವ ನೀರಿನ ಸಂಪರ್ಕ ಪಡೆದವರು ನೋಟಿಸ್‌ ಕಳುಹಿಸಿದ ಅನಂತರವೂ ನೀರಿನ ಬಿಲ್‌ ಪಾವತಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಪೊಲೀಸ್‌ ದೂರು ನೀಡುವ ಕುರಿತು ಒಳಮೊಗ್ರು ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement

ಗ್ರಾ.ಪಂ. ಅಧ್ಯಕ್ಷ ಯತಿರಾಜ್‌ ರೈ ನೀರ್ಪಾಡಿ ಅಧ್ಯಕ್ಷತೆಯಲ್ಲಿ ಜ. 23ರಂದು ಗ್ರಾ.ಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.

ನಿರ್ವಹಣೆಗೆ ತೊಂದರೆ
ಕುಡಿಯುವ ನೀರಿನ ಬಿಲ್‌ ಪಾವತಿಸದೆ ಇರುವುದರಿಂದ ಗ್ರಾ.ಪಂ. ವಿದ್ಯುತ್‌ ಬಿಲ್‌, ಪೈಪ್‌ಲೈನ್‌ ದುರಸ್ತಿ ಮತ್ತು ನಿರ್ವಹಣೆ ಕಷ್ಟಕರವಾಗುತ್ತಿದೆ. ಮುಂದಕ್ಕೆ ನೀರಿನ ಕೊರತೆಯೂ ಬರಬಹುದು. ಇದರಿಂದಾಗಿ ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅಧ್ಯಕ್ಷ ಯತಿರಾಜ್‌ ರೈ ನೀರ್ಪಾಡಿ ಹೇಳಿದರು. ಸದಸ್ಯ ಅಬ್ದುಲ್‌ ರಹಮಾನ್‌ ಧ್ವನಿಗೂಡಿಸಿದರು. ಈ ಬಗ್ಗೆ ಚರ್ಚಿಸಿ ಸದಸ್ಯರ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಪರವಾನಿಗೆ: ತೀರ್ಮಾನ
ಸ್ವಚ್ಛ ಭಾರತ ಪರಿಕಲ್ಪನೆ ದೃಷ್ಟಿಯಿಂದ ಅಂಗಡಿ ಪರವಾನಿಗೆ ನವೀಕರಣ ಸಂದರ್ಭ ಕಸದ ತೊಟ್ಟಿ ಇಟ್ಟ ಮಾಲಕರಿಗೆ ಮಾತ್ರ ಪರವಾನಿಗೆ ನೀಡಬೇಕು ಎಂದು ಸದಸ್ಯ ಶಶಿಕಿರಣ್‌ ರೈ ಹೇಳಿದರು. ಈ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಯಿತು.

ಪೈಪ್‌ಲೈನ್‌ ಕಟ್: ನಿರ್ಣಯ
ಬೆಟ್ಟಂಪ್ಪಾಡಿ ಗ್ರಾಮದ ಗಡಿ ಭಾಗದ ದೆಕ್ಕಿತೋಡಿ ಪ್ರದೇಶದ ಜನರಿಗೆ ಒಳಮೊಗ್ರು ಗ್ರಾ.ಪಂ. ವತಿಯಿಂದ ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದು, ಒಂದು ವರ್ಷದಿಂದ ಈ ಭಾಗದ ಫ‌ಲಾನುಭವಿಗಳು ಬಿಲ್‌ ಪಾವತಿಸಿಲ್ಲ. ಈ ಭಾಗದ ಕುಡಿಯುವ ನೀರಿನ ಪ್ರಧಾನ ಪೈಪ್‌ಲೈನ್‌ ಕಡಿತಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಕೊಳವೆ ಬಾವಿ ಇರುವ ಫ‌ಲಾನುಭವಿಗಳಿಗೆ ನಳ್ಳಿ ನೀರಿನ ವ್ಯವಸ್ಥೆ ಕಡಿತಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

Advertisement

ಉಪಾಧ್ಯಕ್ಷೆ ಸುನಂದಾ, ಸದಸ್ಯರಾದ, ಮಹೇಶ್‌ ರೈ, ಶಶಿಕಿರಣ್‌ ರೈ, ಸುಂದರಿ, ವಸಂತಿ ಡಿ., ಅಬ್ದುಲ್‌ ರಹಮಾನ್‌ ಚಂದ್ರಕಲಾ, ವಿಶ್ವನಾಥ, ಶೀನಪ್ಪ ನಾಯ್ಕ, ಉಷಾ ನಾರಾಯಣ, ಭಾಗೀರಥಿ, ತ್ರಿವೇಣಿ, ವಸಂತಿ ಶೆಟ್ಟಿ ಉಪಸ್ಥಿತರಿದ್ದರು.

ಗ್ರಾ.ಪಂ. ಕಾರ್ಯದರ್ಶಿ ದಾಮೋದರ ಸ್ವಾಗತಿಸಿ, ವಂದಿಸಿದರು. ಸಿಬಂದಿ ಜಯಶೀಲ ರೈ, ಕೇಶವ ಪೂಜಾರಿ, ಗುಲಾಬಿ, ಜಾನಕಿ ಸಹಕರಿಸಿದರು.

ಕಾಮಗಾರಿಗೆ ಮೊದಲು ಪರಿಶೀಲನೆ
ಯಾವುದೇ ಇಲಾಖೆಯ ಅನುದಾನದಲ್ಲಿ ಪೈಪ್‌ಲೈನ್‌ ಅಳವಡಿಸಲು ಕಾಮಗಾರಿ ನಡೆಸುವುದಾದಲ್ಲಿ ಆಯಾ ಗುತ್ತಿಗೆದಾರರು ಪೈಪ್‌ಲೈನ್‌ ಅಳವಡಿಸುವ ಮೊದಲು ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡಬೇಕು. ಇಲ್ಲದೇ ಇದ್ದಲ್ಲಿ ಪದೇ ಪದೇ ಪೈಪ್‌ ಒಡೆದು ಹೋಗಿ ದುರಸ್ತಿ ವೆಚ್ಚ ಅಧಿಕವಾಗುತ್ತದೆ ಎಂದು ಗ್ರಾ.ಪಂ. ಸದಸ್ಯ ಶಶಿಕಿರಣ್‌ ರೈ ತಿಳಿಸಿದರು. ಮುಂದಕ್ಕೆ ಯಾವುದೇ ಕಾಮಗಾರಿ ನಡೆಸುವ ಮೊದಲು ಪರಿಶೀಲನೆ ಮಾಡುವ ಬಗ್ಗೆ ನಿರ್ಣಯಿಸಲಾಯಿತು

ಹಟ್ಟಿ ರಚನೆ: ಸಹಾಯಧನ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಹಟ್ಟಿ ರಚನೆ ಮಾಡುವ ಫ‌ಲಾನುಭವಿಗಳು ಜ. 31ರ ಒಳಗೆ ಅರ್ಜಿ ಸಲ್ಲಿಸಬೇಕು. ಪ.ಜಾತಿ ಪಂಗಡಕ್ಕೆ 42 ಸಾವಿರ ರೂ., ಇತರರಿಗೆ 19 ಸಾವಿರ ರೂ. ದೊರೆಯುತ್ತದೆ. ಅನಂತರ ಅರ್ಜಿ ಸಲ್ಲಿಸಿದ ಫ‌ಲಾನುಭವಿಗಳಿಗೆ ಕೂಲಿ ದರ ಪ.ಜಾತಿ ಪಂಗಡದವರಿಗೆ ಅಂದಾಜು 22 ಸಾವಿರ ರೂ., ಇತರರಿಗೆ 8 ಸಾವಿರ ರೂ. ಸಿಗಬಹುದು ಎಂದು ಪಿಡಿಒ ಗೀತಾ ಬಿ.ಎಸ್‌. ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next