ಮಹಾನಗರ: ನಗರದಲ್ಲಿ ಓಲಾ-ಉಬರ್ ಕಾರುಗಳು ಕಾನೂನು ಬಾಹಿರವಾಗಿ ಓಡಾಟ ನಡೆಸುತ್ತಿದ್ದು, ಇವು
ಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಕ್ರಮ ಕೈಗೊಂಡು ಅವುಗಳ ಓಡಾಟಕ್ಕೆ ತತ್‌ಕ್ಷಣ ತಡೆಯೊಡ್ಡಬೇಕು ಎಂದು ಆಗ್ರಹಿಸಿ ಮಂಗಳೂರು ನಗರ ಆಟೋ ಚಾಲಕ-ಮಾಲಕರ ಒಕ್ಕೂಟದ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ನಗರದ ಮಿನಿವಿಧಾನಸೌಧದ ಮುಂಭಾಗದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಿಬಂದ ರಿಕ್ಷಾ ಚಾಲಕರು ಬಳಿಕ ಅಲ್ಲಿ ಪ್ರತಿಭಟನೆ ನಡೆಸಿದರು.
ವಿವಿಧ ಸಂಘಟನೆಗಳಿಗೆ ಸಂಯೋಜಿತ ರಿಕ್ಷಾ ಯೂನಿಯನ್‌ಗಳ ಮುಖಂಡರಾದ ಅಲಿಹಸನ್ (ಅಲ್ಪಸಂಖ್ಯಾಕರ ಆಟೋರಿಕ್ಷಾ ಚಾಲಕರ ಸಂಘ) ಅಶೋಕ್ ಶೆಟ್ಟಿ (ಎಚ್ ಎಂಎಸ್), ಮಹಮ್ಮದ್ ಇರ್ಫಾನ್ (ಸಿಐಟಿಯು), ಅರುಣ್ ಕುಮಾರ್ (ಕರವೇ) ಪ್ರಕಾಶ್ ವಿ.ಎನ್. (ಎಆರ್‌ಸಿಎಸ್), ಯೋಗೇಂದ್ರ (ಹೋರಾಟ ಸಮಿತಿ), ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಮೋಹನ್ ಕುಮಾರ್ ಅತ್ತಾವರ ಮುಂತಾದವರು ಮಾತನಾಡಿ, ಕಳೆದ 7-8 ದಶಕಗಳಿಂದ ನಗರದ ಜನತೆಗೆ ರಿಕ್ಷಾಚಾಲಕರು ಉತ್ತಮ ಸೇವೆ ನೀಡುತ್ತಾ ಬಂದಿದ್ದಾರೆ. ಉದ್ಯೋಗ ವಂಚಿತರಾದ ಅದೆಷ್ಟೊ ಮಂದಿ ಇಂದು ರಿಕ್ಷಾ ಚಾಲನೆಯಿಂದ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಕುಟುಂಬವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಈಗ ಓಲಾ-ಉಬರ್ ಕಂಪೆನಿಗಳ ಕಾರುಗಳು ಸಾರಿಗೆ ಪ್ರಾಧಿಕಾರದ ಅನುಮತಿ ಇಲ್ಲದಿದ್ದರೂ ಮಂಗಳೂರಿನಲ್ಲಿ ಓಡಾಟ ನಡೆಸುತ್ತಿದ್ದು, ರಿಕ್ಷಾ ಚಾಲಕರ ಬದುಕು ಅತಂತ್ರವಾಗುತ್ತಿದೆ. ಓಲಾ-ಉಬರ್ ಕಂಪೆನಿಗಳ ಕಾರುಗಳು ತಾವು ಕಡಿಮೆ ದರದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತೇವೆಎಂಬ ಭ್ರಮೆಯನ್ನು ಹುಟ್ಟಿಸುತ್ತಿದ್ದಾರೆ. ವಾಸ್ತವ ದಲ್ಲಿ ಇದು ಸಂಪೂರ್ಣ ಸುಳ್ಳಾಗಿದ್ದು, ಪ್ರಯಾಣಿಕರಿಂದಲೂ ದೂರುಗಳು ಬರುತ್ತಿವೆ ಎಂದರು.
ಸಾರಿಗೆ ಇಲಾಖೆ ಕ್ರಮಕ್ಕೆ ಆಗ್ರಹ
ಓಲಾ-ಉಬರ್ ಕಾರುಗಳ ಕಾನೂನು ಬಾಹಿರವಾದ ಓಡಾಟದಿಂದ ಸಂಕಷ್ಟಕ್ಕೆ ಸಿಲುಕಿರುವ ರಿಕ್ಷಾ ಚಾಲಕರು ಇದರ
ವಿರುದ್ಧ ಸಿಡಿದೆದ್ದಿದ್ದಾರೆ. ನಗರದಲ್ಲಿ ಸುಮಾರು 7,000 ಹಾಗೂ ಜಿಲ್ಲೆಯಲ್ಲಿ ಸುಮಾರು 12,000 ರಿಕ್ಷಾಗಳಿವೆ. 2,000 ಟೂರಿಸ್ಟ್ ಕಾರುಗಳಿವೆ. ಎಲ್ಲ ರಿಕ್ಷಾ ಚಾಲಕರು, ಕಾರುಗಳ ಮಾಲಕರು, ಚಾಲಕರು ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಓಲಾ-ಉಬರ್ ಕಾರುಗಳ ಕಾನೂನು ಬಾಹಿರ ಓಡಾಟ ನಿಲ್ಲುವವರೆಗೆ ನಮ್ಮ ಹೋರಾಟ ಮುಂದುವರಿಯಲಿದ್ದು, ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಶೇಖರ ದೇರಳಕಟ್ಟೆ (ಎಂಎಸಿಎಸ್) ಸಂದೀಪ್ ಯೆಯ್ನಾಡಿ, ಸಂದೀಪ್ ಬಾಬುಗುಡ್ಡೆ ನಿಖೀತ್ (ಹೋರಾಟ ಸಮಿತಿ) ಸುಭಾಷ್ ಕಾವೂರು (ಎಆರ್‌ಸಿಎಸ್), ಅಬೂಬಕ್ಕರ್ ಸುರತ್ಕಲ್ (ಸುರತ್ಕಲ್ ಆಟೋರಿಕ್ಷಾ ಚಾಲಕ-ಮಾಲಕರ ಸಂಘ) ಉಪಸ್ಥಿತರಿದ್ದರು. ಬಳಿಕ ಜಿಲ್ಲಾಧಿಕಾರಿಯವರಿಗೆ ಮನವಿ ಅರ್ಪಿಸಲಾಯಿತು.