Advertisement

ಓಲಾ-ಉಬೇರ್‌ ಮಾದರಿ ಆಂಬ್ಯುಲನ್ಸ್‌ ಸಂಪರ್ಕ ಆ್ಯಪ್‌

03:16 PM May 31, 2017 | Team Udayavani |

ಹುಬ್ಬಳ್ಳಿ: ಗ್ರಾಮೀಣ ಭಾಗದ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ನೂತನ ಆ್ಯಪ್‌ ಅಭಿವೃದ್ಧಿ ಪಡಿಸುವ ಮೂಲಕ ತುರ್ತು ವೈದ್ಯಕೀಯ ಸೇವೆಗೆ ಅನುಕೂಲ ಕಲ್ಪಿಸಲು ಮುಂದಾಗಿದ್ದಾರೆ. ವರೂರಿನ ನವಗೃಹ ಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜ ಕಾಲೇಜ್‌ ಆಫ್ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯ ವಿದ್ಯಾರ್ಥಿಗಳು ಮೈಸೂರಿನ ವಿ.ಎಸ್‌.ಟೆಕ್ನಾಲಜೀಸ್‌ ಸಹಯೋಗದಲ್ಲಿ ಆಂಬ್ಯುಲನ್ಸ್‌ಗಳನ್ನು ಸಂಪರ್ಕಿಸುವ ಆ್ಯಪ್‌ ಅಭಿವೃದ್ಧಿ ಪಡಿಸಲು ಸಜ್ಜಾಗಿದ್ದಾರೆ. 

Advertisement

ಕಾಲೇಜಿನ ಆವರಣದಲ್ಲಿ ಆರಂಭಗೊಳ್ಳುವ ಇನ್‌ಕ್ಯುಬೇಶನ್‌ ಸೆಂಟರ್‌ನಲ್ಲಿ ಇದು ಮೊದಲ ಪ್ರಾಜೆಕ್ಟ್ ಆಗಲಿದೆ. ಓಲಾ, ಉಬೇರ್‌ ಸೇವೆಯನ್ನು ವಾಣಿಜ್ಯಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಕಾರು ಸೇವೆ ಬೇಕಾದರೆ ಸಮೀಪದ ಕಾರು ಬಾಡಿಗೆ ಪಡೆಯಲು ಸ್ಮಾರ್ಟ್‌ಫೋನ್‌ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ. ತ್ವರಿತ ಹಾಗೂ ಸುರಕ್ಷಿತ ಸೇವೆಗಾಗಿ ಇದನ್ನು ಅವಲಂಬಿಸುವವರ ಸಂಖ್ಯೆ ಹೆಚ್ಚಾಗಿದೆ. 

ಭಾರತದಂಥ ದೇಶದಲ್ಲಿ ಸಮರ್ಪಕ ವೈದ್ಯಕೀಯ ಸೇವೆ ಸಿಗದೇ ಪ್ರತಿದಿನ ಸಹಸ್ರಾರು ಜನರು ಸಾಯುತ್ತಾರೆ. ಆಸ್ಪತ್ರೆಗಳಿದ್ದರೂ ಸಹ ಸಮಯಕ್ಕೆ ಸರಿಯಾಗಿ ಆಂಬ್ಯುಲನ್ಸ್‌ಗಳು ಸಿಗದಿದ್ದರಿಂದ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಮನಗಂಡ ವಿದ್ಯಾರ್ಥಿಗಳು ಪೂರಕ ಆ್ಯಪ್‌ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.

ರಾಜ್ಯ ಸರ್ಕಾರ 108 ಆಂಬ್ಯುಲನ್ಸ್‌ ಸೇವೆ ಒದಗಿಸುತ್ತಿದ್ದರೂ ಸಹ ಹಲವು ಬಾರಿ ಸಮಯಕ್ಕೆ ಸರಿಯಾಗಿ ಅವುಗಳ ಸೇವೆ ಲಭ್ಯವಾಗುವುದಿಲ್ಲ. ಸಂಚಾರ ದಟ್ಟಣೆ ಸೇರಿದಂತೆ ಹಲವು ಕಾರಣಗಳಿಗಾಗಿ ದುರ್ಘ‌ಟನೆ ನಡೆದ ಸ್ಥಳ ತಲುಪುವುದು ವಿಳಂಬವಾಗುತ್ತದೆ. ಇದನ್ನು ಪರಿಗಣಿಸಿ ನೂತನ ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ. 

ಇದರಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಆಂಬ್ಯುಲನ್ಸ್‌ಗಳನ್ನು ಸಂಪರ್ಕ ಜಾಲಕ್ಕೆ ಸೇರಿಸಲಾಗುತ್ತದೆ. ಇದರಿಂದ ಆಂಬ್ಯುಲನ್ಸ್‌ ಚಾಲಕನಿಗೆ ಸಂದೇಶ ರವಾನೆಯಾಗುತ್ತದೆ. ಅಲ್ಲದೇ ನಮ್ಮ ಮೊಬೈಲ್‌ಗೆ ಎಷ್ಟು ನಿಮಿಷಗಳಲ್ಲಿ ಎಂಬುಲೆನ್ಸ್‌ ಆಗಮಿಸಲಿದೆ ಎಂಬ ಮಾಹಿತಿ ಕೂಡ ಬರುತ್ತದೆ.

Advertisement

ಅಲ್ಲದೇ ಯಾವ ಸಮಸ್ಯೆಯಾಗಿದೆ ಎಂಬುದನ್ನು ಆಂಬ್ಯುಲನ್ಸ್‌ ಚಾಲಕನಿಗೆ ತಿಳಿಸಿದರೆ ಆಸ್ಪತ್ರೆಯಲ್ಲಿ ಅದಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳಬಹುದು. ಆಸ್ಪತ್ರೆಯಲ್ಲದೇ ಪೊಲೀಸ್‌, ಅಗ್ನಿಶಾಮಕದಳಕ್ಕೂ ಮಾಹಿತಿ ರವಾನೆಯಾಗುತ್ತದೆ. ಕರೆ ಮಾಡಿದ ಸ್ಥಳದ ಸಮೀಪದಲ್ಲಿರುವ ಆಂಬ್ಯುಲನ್ಸ್‌ ಸ್ಥಳಕ್ಕೆ ಆಗಮಿಸಿ ಅನಾರೋಗ್ಯಕ್ಕೀಡಾದವರನ್ನು ಆಸ್ಪತ್ರೆಗೆ ತಲುಪಿಸುವ ಕೆಲಸ ಮಾಡುತ್ತದೆ.

ಇದರಿಂದ 108 ಆಂಬ್ಯುಲನ್ಸ್‌ ಬರುವವರೆಗೂ ಕಾಯುವುದು ತಪ್ಪುತ್ತದೆ. ಹೃದಯಾಘಾತ ಅಥವಾ ಅಪಘಾತ ಸಂದರ್ಭಗಳಲ್ಲಿ ಇಂಥ ಸೇವೆ ಹೆಚ್ಚು ಉಪಯುಕ್ತವೆನಿಸುವುದು.  ಗ್ರಾಮೀಣ ಭಾಗದ ಎಜಿಎಂಆರ್‌ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಆ್ಯಪ್‌ ಅಭಿವೃದ್ಧಿ ಪಡಿಸಲಾಗುತ್ತದೆ. 

ಇನ್‌ಕ್ಯುಬೇಶನ್‌ ಸೆಂಟರ್‌ನಲ್ಲಿ ವಿದ್ಯಾರ್ಥಿಗಳು ಇಂಟರ್ನ್ಶಿಪ್‌ ಮಾಡಬಹುದಲ್ಲದೇ, ಉದ್ಯೋಗ ವಕಾಶವನ್ನೂ ಪಡೆಯಬಹುದಾಗಿದೆ. ಇದೇ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ಬೆಳೆಸುವುದರೊಂದಿಗೆ ನವೋದ್ಯಮ ಆರಂಭಿಸಲು ಉತ್ತೇಜನ ನೀಡುವ ಉದ್ದೇಶವನ್ನು ಕಾಲೇಜಿನ ಆಡಳಿತ ಮಂಡಳಿ ಹೊಂದಿದೆ.

ಕೆಎಲ್‌ಇ ತಂತ್ರಜ್ಞಾನ ವಿಶ್ವವಿದ್ಯಾಲಯದ ಮಾದರಿಯಲ್ಲಿ  ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಹಲವಾರು ಉದ್ಯಮ ಘಟಕಗಳನ್ನು ಒಂದೇ ಕ್ಯಾಂಪಸ್‌ನಲ್ಲಿ ಆರಂಭಿಸುವ ಇರಾದೆಯೂ ಇದೆ. ಗ್ರಾಮೀಣ ಮಟ್ಟದ ಎಂಜಿನಿಯರಿಂಗ್‌ ಕಾಲೇಜು ವಿನೂತನ ಪ್ರಾಜೆಕ್ಟ್ನೊಂದಿಗೆ ಇನ್‌ಕ್ಯುಬೇಶನ್‌ ಸೆಂಟರ್‌ ಆರಂಭಿಸಲು ಮುಂದಾಗಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡರೆ ಪದವೀಧರರಷ್ಟೇ ಅಲ್ಲ, ಉದ್ಯಮಿಗಳೂ ಹೊರಹೊಮ್ಮಬಹುದಾಗಿದೆ. 

* ವಿಶ್ವನಾಥ ಕೋಟಿ  

Advertisement

Udayavani is now on Telegram. Click here to join our channel and stay updated with the latest news.

Next