ಬೆಂಗಳೂರು: ಓಲಾ ಮತ್ತು ಉಬರ್ ಚಾಲಕರು ಗುರುವಾರ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಹಕರಿಸುವಂತೆ ಮನವಿ ಮಾಡಿದರು.
ಬಿಜೆಪಿ ಸಣ್ಣ ಉದ್ದಿಮೆಗಳ ಪ್ರಕೋಷ್ಠದ ರಾಜ್ಯ ಸಂಚಾಲಕ ಕೆ.ವಿ.ರಾಜೇಂದ್ರಕುಮಾರ್ ನೇತೃತ್ವದಲ್ಲಿ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ಚಾಲಕರು, ಯಡಿಯೂರಪ್ಪ ಅವರಿಗೆ ತಮ್ಮ ಸಮಸ್ಯೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, “ಚಾಲಕರ ಸಮಸ್ಯೆ ಬಗೆಹರಿಸುವ ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು. ಕೇಂದ್ರ ಭೂಸಾರಿಗೆ ಸಚಿವರ ಗಮನಕ್ಕೂ ತರಲಾಗುವುದು,” ಎಂದು ಭರವಸೆ ನೀಡಿದರು.
ಪ್ರತಿಭಟನೆ ಮೊಟಕು: ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಓಲಾ-ಉಬರ್ ಟ್ಯಾಕ್ಸಿ ಚಾಲಕರು ಆರಂಭಿಸಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಳಾವಕಾಶ ಸಿಗದ ಕಾರಣ ಗುರುವಾರ ಮೊಟಕುಗೊಂಡಿತು.
ಒಂದು ದಿನದ ಮಟ್ಟಿಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿತ್ತು. ಆದರೆ, ಅಲ್ಲಿ ಟ್ಯಾಕ್ಸಿ ಚಾಲಕರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಈ ಮಧ್ಯೆ ಶುಕ್ರವಾರ ಇದೇ ಸ್ವಾತಂತ್ರ್ಯ ಉದ್ಯಾನದಲ್ಲಿ ರೈತರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರು ತಿಂಗಳು ಮೊದಲೇ ಅನುಮತಿ ಪಡೆದಿದ್ದರಿಂದ ಚಾಲಕರಿಗೆ ನೀಡಿದ್ದ ಅನುಮತಿ ಹಿಂಪಡೆಯಲಾಗಿದೆ.
ಸ್ಥಳಾವಕಾಶ ದೊರೆಯದ ಕಾರಣ ತಾತ್ಕಾಲಿಕವಾಗಿ ಉಪವಾಸ ಸತ್ಯಾಗ್ರಹ ಕೈಬಿಡಲಾಗಿದೆ. ಆದರೆ, ಶಾಂತಿಯುತ ಪ್ರತಿಭಟನೆ ಮುಂದುವರಿಯಲಿದೆ. ಬೇಡಿಕೆಗಳು ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಓಲಾ-ಉಬರ್ ಟ್ಯಾಕ್ಸಿ ಮಾಲಿಕರು ಮತ್ತು ಚಾಲಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.