ಬೆಂಗಳೂರು: ಸಾರಿಗೆ ಇಲಾಖೆಯ ಖಡಕ್ ಸೂಚನೆ ನಂತರವೂ ನಗರದಲ್ಲಿ ಓಲಾ, ಉಬರ್ ಸೇರಿದಂತೆ ಆ್ಯಪ್ ಆಧಾರಿತ ಆಟೋ ಗಳ ಸೇವೆ ಬುಧವಾರ ರಾಜಾರೋಷವಾಗಿ ಮುಂದುವರಿಯಿತು.
ಎಂದಿನಂತೆ ಜನ ಆಟೋಗಳನ್ನು ಆ್ಯಪ್ ಗಳ ಮೂಲಕವೇ ಬುಕಿಂಗ್ ಮಾಡಿದರು. ಅದರಂತೆ ಚಾಲಕರು ಕೂಡ ನಿರ್ಭೀತಿಯಿಂದ ಗ್ರಾಹಕರಿದ್ದಲ್ಲಿಗೆ ಬಂದು, ಕರೆದೊಯ್ಯುವ ಮೂಲಕ ಸೇವೆ ಒದಗಿಸಿದರು. ಕಂಪನಿಗಳು ಅಥವಾ ಅವುಗಳಡಿ ಸೇವೆ ಒದಗಿಸುತ್ತಿರುವ ಆಟೋಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕಾರ್ಯಾಚರಣೆಗೂ ಮುಂದಾಗಲಿಲ್ಲ.
“ಬುಧವಾರ ಬೆಳಗ್ಗೆಯಿಂದಲೇ ಆ್ಯಪ್ ಆಧಾರಿತ ಆಟೋಗಳ ಸೇವೆಯ ಆಯ್ಕೆಯನ್ನು ಆಯಾ ಅಗ್ರಿಗೇಟರ್‌ಗಳು ತಮ್ಮ ಆ್ಯಪ್‌ನಿಂದ ತೆಗೆದುಹಾಕಬೇಕು. ಒಂದು ವೇಳೆ ತೆಗೆದುಹಾಕದಿದ್ದರೆ, ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಆ್ಯಪ್‌ಗ್ಳಲ್ಲಿ ತೆಗೆದುಹಾಕಲು ಕ್ರಮ ಕೈಗೊಳ್ಳಲಾಗುವುದು’ ಸಾರಿಗೆ ಇಲಾಖೆ ಆಯುಕ್ತ ಟಿ.ಎಚ್.ಎಂ. ಕುಮಾರ್ ಮಂಗಳವಾರ ಎಚ್ಚರಿಸಿದ್ದರು. ಆದರೆ, ಈ ಸೂಚನೆಗೆ ಕ್ಯಾರೆ ಎನ್ನದ ಕಂಪನಿಗಳು ಆಟೋಗಳ ಸೇವೆ ಮುಂದುವರಿಸಿದವು.
“ಬೆಳಗ್ಗೆ ರಸ್ತೆಗಿಳಿಯುವಾಗ ತುಸು ಆತಂಕ ಇತ್ತು. ಒಂದೆರಡು ಟ್ರಿಪ್ ಪೂರೈಸಿದ ನಂತರ ಆತಂಕ ದೂರವಾಯಿತು. ಇಂದು ಸಂಜೆ 7ರವರೆಗೆ 13 ಟ್ರಿಪ್‌ಗ್ಳನ್ನು ಪೂರ್ಣಗೊಳಿಸಿದ್ದೇನೆ. ಎಂದಿನಂತೆ ಕಂಪನಿಯು ಪ್ಲಾಟ್‌ಫಾರಂ ಶುಲ್ಕ 20 ರೂ. ಕಡಿತ ಮಾಡಿಕೊಂಡಿದೆ. ಜತೆಗೆ ಪ್ರತಿ ಬಾಡಿಗೆಯಲ್ಲಿ ತನ್ನ ಕಮಿಷನ್ ಕೂಡ ಪಡೆದುಕೊಂಡಿದೆ. ಇನ್ನು ಇನ್ಸೆಂಟಿವ್ ಕೂಡ ಮಾಮೂಲಿ ಇದೆ’ ಎಂದು ಆಟೋ ಚಾಲಕ ಸಂತೋಷ್ ತಿಳಿಸಿದರು.
ಉಳಿದ ದಿನಗಳಂತೆಯೇ ಚಾಲಕರು ಅಗ್ರಿಗೇಟರ್ ಕಂಪನಿಗಳಡಿ ಆಟೋಗಳ ಸೇವೆ ನೀಡಿದ್ದಾರೆ. ಆದರೆ, ಬಾಡಿಗೆ ಎಂದಿಗಿಂತ ತುಸು ಕಡಿಮೆ ಇದ್ದುದು ಕಂಡುಬಂತು. ಉದಾಹರಣೆಗೆ 2 ಕಿ.ಮೀ.ಗೆ 100 ರೂ. ವಿಧಿಸುತ್ತಿರುವ ಕಡೆಗಳಲ್ಲಿ 70 ರೂ. ಬಿಲ್ ಬರುತಿತ್ತು. ಇದರಲ್ಲಿ ಚಾಲಕರಿಗೆ ಮಾತ್ರ ಕನಿಷ್ಠ ದರ ಅಂದರೆ 30 ರೂ. ಜಮೆ ಆಗುತ್ತಿದೆ. ಉಳಿದದ್ದು ಆಯಾ ಕಂಪನಿಯವರು ತೆಗೆದುಕೊಳ್ಳುತ್ತಿದ್ದಾರೆ. ಇನ್ಸೆಂಟಿವ್ 10 ಟ್ರಿಪ್ ಪೂರೈಸಿದರೆ 200 ರೂ. ನೀಡಲಾಗುತ್ತಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಆಟೋಗಳನ್ನು ಹಿಡಿದು ದಂಡ ವಿಧಿಸಿಲ್ಲ ಎಂದು ಆಟೋರಿಕ್ಷಾ ಡ್ರೈವರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಹೇಳಿದರು.
ಕೋರ್ಟ್ ಮೊರೆ ಹೋದ ಕಂಪನಿಗಳು
ಆ್ಯಪ್ ಆಧಾರಿತ ಆಟೋಗಳ ಸೇವೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಅಗ್ರಿಗೇಟರ್ ಕಂಪನಿಗಳು ನ್ಯಾಯಾಲಯದ ಮೊರೆಹೋಗಿವೆ. “ನಿಯಮಗಳಡಿ ಸೇವೆ ಒದಗಿಸುತ್ತಿದ್ದು, ಯಾವುದೇ ಕಾರಣಕ್ಕೂ ಆಟೋಗಳ ಸೇವೆಗಳಿಗೆ ತಡೆಯೊಡ್ಡದಿರಲು ಸಾರಿಗೆ ಇಲಾಖೆಗೆ ಸೂಚನೆ ನೀಡುವಂತೆ’ ನ್ಯಾಯಾಲಯಕ್ಕೆ ಮನವಿ ಕಂಪನಿಗಳು ಮನವಿ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆ ಆಯುಕ್ತ ಕುಮಾರ್, “ಆಟೋ ಸೇವೆ ಸ್ಥಗಿತಗೊಳಿಸಲು ಸೂಚಿಸಿದ ಬೆನ್ನಲ್ಲೇ ಅಗ್ರಿಗೇಟರ್‌ಗಳು ಕೋರ್ಟ್ ಮೊರೆಹೋಗಿರುವುದು ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ನಿಯಮಗಳ ಉಲ್ಲಂಘನೆ ಎಲ್ಲೆಲ್ಲಿ ಎಷ್ಟು ಆಗಿದೆ ಎಂಬುದರ ಬಗ್ಗೆ ಸರ್ಕಾರಿ ವಕೀಲರಿಗೆ ಮಾಹಿತಿ ಒದಗಿಸಲಾಗಿದೆ. ಅದನ್ನು ಆಧರಿಸಿ ವಾದ ಮಂಡಿಸಲಿದ್ದಾರೆ’ ಎಂದು ಹೇಳಿದರು.