Advertisement

6 ತಿಂಗಳು ಓಲಾ ಪರವಾನಗಿ ಅಮಾನತು

06:55 AM Mar 23, 2019 | |

ಬೆಂಗಳೂರು: ನಗರದಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಓಲಾ ಸಂಸ್ಥೆ, ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಾವಳಿಗಳನ್ನು ಉಲ್ಲಂ ಸಿದ ಹಿನ್ನೆಲೆಯಲ್ಲಿ ಆ ಸಂಸ್ಥೆಗೆ ನೀಡಿದ ಪರವಾನಗಿ ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.

Advertisement

ಇತ್ತೀಚಿನ ದಿನಗಳಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗೆ ನಗರದ ಜನರು ಹೆಚ್ಚು ಮಾರು ಹೋಗಿದ್ದು, ಪರಿಣಾಮ ತಮ್ಮ ಸೇವಾ ವ್ಯಾಪ್ತಿ ವಿಸ್ತರಿಸುವ ಭರದಲ್ಲಿ ಓಲಾ ಸಂಸ್ಥೆಯು ನಿಯಮಗಳನ್ನು ಗಾಳಿಗೆ ತೂರಿ, ಆ್ಯಪ್‌ ಆಧಾರಿತ ಬೈಕ್‌ ಸಂಚಾರ ಸೇವೆ ಆರಂಭಿಸಿದೆ. ಆ ಮೂಲಕ ನಿಯಮಗಳನ್ನು ಉಲ್ಲಂ ಸಿದ ಹಿನ್ನೆಲೆಯಲ್ಲಿ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಾವಳಿಗಳು -2018ರ 11 (1)ರ ರಂತೆ ಸಂಸ್ಥೆಗೆ ನೀಡಲಾಗಿದ್ದ ಪರವಾನಗಿ ಅಮಾನತುಗೊಳಿಸಿ, ತಕ್ಷಣದಿಂದಲೇ ಸೇವೆ ಸ್ಥಗಿತಗೊಳಿಸಬೇಕೆಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಸಾರಿಗೆ ಇಲಾಖೆಯ ನಿಯಮಗಳಂತೆ ಅನಿ ಟೆಕ್ನಾಲಜಿಸ್‌ ಪ್ರೈವೇಟ್‌ ಲಿಮಿಟೆಡ್‌ ಹೆಸರಿನ ಓಲಾ ಸಂಸ್ಥೆಗೆ ಕೇವಲ ಆ್ಯಪ್‌ ಆಧಾರಿತ ಮೋಟರು ಕ್ಯಾಬ್ಸ್ ಸೇವೆ ಒದಗಿಸಲು ಮಾತ್ರ ಪರವಾನಗಿ ನೀಡಲಾಗಿದೆ. ಆದರೆ, ಇತ್ತೀಚೆಗೆ ಓಲಾ ಸಂಸ್ಥೆಯು ಆ್ಯಪ್‌ ಆಧಾರಿತ ಬೈಕ್‌ ಸೇವೆಯನ್ನು ಕಾನೂನು ಬಾಹಿರವಾಗಿ ಆರಂಭಿಸಿರುವುದು ತನಿಖೆಯಿಂದ ಬಯಲಾಗಿದೆ.

ಬೆಂಗಳೂರು ನಗರದಲ್ಲಿ ನಗರ ಸಾರಿಗೆ ಸಂಪೂರ್ಣ ರಾಷ್ಟ್ರೀಕರಣವಾಗಿರುವ ಪ್ರದೇಶಗಳಲ್ಲಿ ಕಾನೂನುಬಾಹಿರವಾಗಿ ಆ್ಯಪ್‌ ಮೂಲಕ ಬೈಕ್‌ ಸೇವೆ ನೀಡುತ್ತಿರುವುದು ಪರಿಶೀಲನೆಯಿಂದ ದೃಢಪಟ್ಟಿದೆ. ಆ ಹಿನ್ನೆಲೆಯಲ್ಲಿ ನಿಯಮ ಉಲ್ಲಂ ಸಿದ ಸಂಸ್ಥೆಯ ಪರವಾನಗಿ ಏಕೆ ಅಮಾನತು ಅಥವಾ ರದ್ದುಗೊಳಿಸಬಾರದು ಎಂಬುದಕ್ಕೆ ಸ್ಪಷ್ಟನೆ ನೀಡುವಂತೆ ಸಾರಿಗೆ ಇಲಾಖೆ, ಓಲಾ ಸಂಸ್ಥೆಗೆ ನೋಟಿಸ್‌ ಜಾರಿಗೊಳಿಸಿತ್ತು.

ಸಂಸ್ಥೆಯು ವಾರದೊಳಗೆ ಉತ್ತರ ಬೇಕು. ತಪ್ಪಿದ್ದಲ್ಲಿ ನಿಮ್ಮ ವಿವರಣೆ ಏನೂ ಇರುವುದಿಲ್ಲ ಎಂದು ನಿರ್ಧರಿಸಿ,  ಪರವಾನಗಿ ಅಮಾನತು ಅಥವಾ ಏಕಪಕ್ಷೀಯವಾಗಿ ರದ್ದುಗೊಳಿಸಲು ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಇಲಾಖೆ ನೀಡಿತ್ತು. ಆದರೆ, ಓಲಾ ಸಂಸ್ಥೆಯ ಆಡಳಿತ ವರ್ಗ ಸಮಪರ್ಕವಾಗಿ ಉತ್ತರ ನೀಡದ ಹಿನ್ನೆಲೆಯಲ್ಲಿ ಆರು ತಿಂಗಳ ಮಟ್ಟಿಗೆ ಸಂಸ್ಥೆಗೆ ನೀಡಿರುವ ಪರವಾನಗಿ ಅಮಾನತುಗೊಳಿಸಿದ್ದು, ತಕ್ಷಣದಿಂದಲೇ ಸೇವೆ ಸ್ಥಗಿತಗೊಳಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದಾರೆ.

Advertisement

ಸರ್ಕಾರದ ಆದೇಶಕ್ಕೆ ಬೆಲೆಯಿಲ್ಲ: ಸಾರಿಗೆ ಇಲಾಖೆಯ ಆಯುಕ್ತರು ಓಲಾ ಸಂಸ್ಥೆಗೆ ತಕ್ಷಣದಿಂದಲೇ ಸೇವೆ ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿ ಮೂರು ದಿನಗಳು ಕಳೆದಿದೆ. ಆದರೆ, ಓಲಾ ಸಂಸ್ಥೆ ಮಾತ್ರ ಸರ್ಕಾರದ ಆದೇಶಕ್ಕೆ ಮನ್ನಣೆ ನೀಡಿಲ್ಲ. ಅದರಂತೆ ಇಲಾಖೆಯ ಆದೇಶದ ನಂತರವೂ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಯೊಂದಿಗೆ ಕಾನೂನು ಬಾಹಿರವಾಗಿ ಬೈಕ್‌ ಸೇವೆಯನ್ನು ಮುಂದುವರಿಸುವ ಮೂಲಕ ಸರ್ಕಾರದ ಆದೇಶವನ್ನು ದಿಕ್ಕಿಸಿದ್ದಾರೆ. 

ಮುಂದಿನ ನಡೆಯೇನು?: ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಓಲಾ ಸಂಸ್ಥೆಗೆ ನೀಡಿರುವ ಪರವಾನಗಿಯನ್ನು ವಾಪಸ್‌ ನೀಡುವಂತೆ ಸಾರಿಗೆ ಇಲಾಖೆ ನೋಟಿಸ್‌ನಲ್ಲಿ ತಿಳಿಸಿದೆ. ಅದರಂತೆ ಓಲಾ ಸಂಸ್ಥೆಯವರು ಮೂರು ದಿನಗಳಲ್ಲಿ ಪರವಾನಗಿಯನ್ನು ಸಾರಿಗೆ ಇಲಾಖೆಗೆ ಸಲ್ಲಿಸಬೇಕಾಗಿದೆ. ಒಂದೊಮ್ಮೆ ಸಲ್ಲಿಸದಿದ್ದರೆ ಅಂತಹ ಕಾರುಗಳನ್ನು ಹಿಡಿದು ಜಪ್ತಿ ಮಾಡಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಓಲಾ ಸಂಸ್ಥೆ ಸ್ಪಷ್ಟನೆ: ಬೈಕ್‌ ಸೇವೆ ಕೇವಲ ಪ್ರಾಯೋಗಿಕವಷ್ಟೇ!: ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಓಲಾ ಮೂಲಸೌಕರ್ಯ, ಉತ್ತಮ ಸಂಚಾರ ವ್ಯವಸ್ಥೆ, ಹೊಸ ತಂತ್ರಜ್ಞಾನಗಳ ಬಳಕೆಯಲ್ಲಿ ಮುಂದಿದೆ. ಬೇರೆ ಸಂಸ್ಥೆಗಳು ಅನಧಿಕೃತವಾಗಿ ಬೈಕ್‌ ಸೇವೆ ಮುಂದುವರಿಸುತ್ತಿವೆ.

ಆದರೆ, ಓಲಾ ಸಂಸ್ಥೆಯಿಂದ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತಾದರೂ, ಕೆಲವು ತಿಂಗಳ ಹಿಂದೆಯೇ ಬೈಕ್‌ ಸೇವೆ ಸ್ಥಗಿತಗೊಳಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು. ಸರ್ಕಾರ ಹೊರಡಿಸಿರುವ ಅಮಾನತು ಆದೇಶದ ಕುರಿತು ನೇರವಾಗಿ ಸರ್ಕಾರದೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 

ಓಲಾ ಸಂಸ್ಥೆಯವರು ನಿಯಮಗಳನ್ನು ಗಾಳಿಗೆ ತೂರಿ  ಬೈಕ್‌ ಸೇವೆ ಆರಂಭಿಸಿದ್ದರಿಂದ ಕ್ರಮಕೈಗೊಳ್ಳುವಂತೆ ಸಂಚಾರ ಇಲಾಖೆಗೆ ದೂರು ನೀಡಲಾಗಿತ್ತು. ಅದರಂತೆ ಪರಿಶೀಲನೆ ನಡೆಸಿದ ಅಧಿಕಾರಿಗಳು, ಕಾನೂನು ಬಾಹಿರವಾಗಿ ಬೈಕ್‌ ಸೇವೆ ಒದಗಿಸುತ್ತಿರುವುದನ್ನು ಪತ್ತೆ ಹಚ್ಚಿದ್ದು, ನಾಲ್ಕೈದು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. 
-ತನ್ವೀರ್‌ ಪಾಷ, ರಾಜ್ಯ ಓಲಾ, ಉಬರ್‌ ಚಾಲಕರು, ಮಾಲೀಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next