ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮಾಡೆಲ್‌ವೊಬ್ಬರನ್ನು ಓಲಾ ಕ್ಯಾಬ್ ಚಾಲಕನೇ ಬರ್ಬರವಾಗಿ ಕೊಲೆ ಮಾಡಿರುವ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದೆ. ಪ್ರಯಾಣದ ನಡುವೆಯೇ ಆಕೆ ಯನ್ನು ಬೇರೆಡೆ ಕರೆದೊಯ್ದು ಕ್ಯಾಬ್ ಚಾಲಕನೇ ಕೊಲೆಗೈದಿರುವ ಸಂಗತಿ, “ಮಹಿಳಾ ಪ್ರಯಾಣಿಕರ ಸುರಕ್ಷತೆ’ ವೈಫಲ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜುಲೈ 31ರಂದು ಮುಂಜಾನೆ ಏರ್‌ಪೋರ್ಟ್ ತಡೆಗೋಡೆ ಸಮೀಪ ಘಟನೆ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿರುವ ಬಾಗಲೂರು ಪೊಲೀಸರು ಕೊಲೆಯಾಗಿರುವ ಮಹಿಳೆ ಕೊಲ್ಕತ್ತಾ ಮೂಲದ ಪೂಜಾ ಸಿಂಗ್ (30) ಎಂಬ ಮಾಹಿತಿ ಪತ್ತೆಹಚ್ಚಿದ್ದು, ಪ್ರಯಾಣದ ವೇಳೆ ಆಕೆಯ ದಿಕ್ಕು ತಪ್ಪಿಸಿ ಕೊಲೆಗೈದ ಓಲಾ ಕ್ಯಾಬ್ ಚಾಲಕ ನಾಗೇಶ್ (22) ಎಂಬಾತನನ್ನು ಬಂಧಿಸಿದ್ದಾರೆ. ಮೃತ ಪೂಜಾಸಿಂಗ್ ಅವರ ಬಳಿ ಚಿನ್ನಾಭರಣ ಹಾಗೂ ಹಣ ದೋಚುವ ಸಲುವಾಗಿ ನಾಗೇಶ್ ಕೊಲೆ ಕೃತ್ಯ ಎಸ ಗಿದ್ದು, ಕೊಲೆಗೂ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಶಂಕೆಯಿದೆ. ಮೃತದೇಹದ ಕೆಲ ಭಾಗಗಳಲ್ಲಿ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಈ ಆಯಾಮದಲ್ಲಿಯೂ ಪೊಲೀಸರ ತನಿಖೆ ಮುಂದುವರಿದಿದೆ.
ಡ್ರಾಪ್ ಮಾಡುವಾಗ ದಿಕ್ಕುತಪ್ಪಿಸಿ ಕೊಂದ: ಮಂಡ್ಯ ಮೂಲದ ಆರೋಪಿ ನಾಗೇಶ್ ಕುಟುಂಬ ಕಳೆದ ಹದಿನೈದು ವರ್ಷಗಳಿಂದ ಹೆಗ್ಗನಹಳ್ಳಿಯಲ್ಲಿ ವಾಸವಿದೆ. ನಾಗೇಶ್ ಕಳೆದ ಒಂದು ವರ್ಷದಿಂದ ಓಲಾ ಹಾಗೂ ಊಬರ್ ಕಂಪೆನಿ ಸೇವೆಗೆ ಕ್ಯಾಬ್ ಅಟ್ಯಾಚ್ ಮಾಡಿಕೊಂಡಿದ್ದ. ಮಾಡೆಲಿಂಗ್ ಕ್ಷೇತ್ರದ ಕಾರ್ಯಕ್ರಮಗಳ ಆಯೋಜಕಿಯಾಗಿ ಕೆಲಸ ಮಾಡುತ್ತಿದ್ದ ಪೂಜಾ ಸಿಂಗ್ ಜುಲೈ 30ರಂದು ಬೆಂಗಳೂರಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು, ಅದೇ ದಿನ ರಾತ್ರಿ ಉಳಿದುಕೊಂಡಿದ್ದ ಹೋಟೆಲ್‌ಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದರು.
ಈ ವೇಳೆ ಆಕೆಯನ್ನು ಹೋಟೆಲ್‌ಗೆ ಡ್ರಾಪ್ ಮಾಡಲು ತೆರಳಿದ್ದ ನಾಗೇಶ್ ಪರಿಚಯವಾಗಿದ್ದು ಹೋಟೆಲ್‌ಗೆ ಡ್ರಾಪ್ ಮಾಡಿದ್ದ. ಮುಂಜಾನೆ ಏರ್‌ಪೋರ್ಟ್‌ಗೆ ತೆರಳಬೇಕಿದೆ. ನೀವೇ ಬಂದು ಪಿಕ್ ಮಾಡಿ ಎಂದು ಪೂಜಾ ಹೇಳಿದ್ದರು. ಈ ವೇಳೆ 1850 ರೂ. ಆಗಲಿದೆ ಎಂದು ನಾಗೇಶ್ ತಿಳಿಸಿದ್ದ, ಇದಕ್ಕೆ ಪೂಜಾ ಕೊಡುವುದಾಗಿ ತಿಳಿಸಿದ್ದರು. ಕೇಳಿದಷ್ಟು ಹಣ ಕೊಡುವ ಪೂಜಾ ಅವರ ನಡೆ ಗಮನಿಸಿದ ನಾಗೇಶ್ ಆಕೆಯ ಬಳಿ ಭಾರೀ ಹಣವಿರಬಹುದು ಎಂದು ನಿರ್ಧರಿಸಿ ರಾತ್ರಿ ಇಡೀ ಹೋಟೆಲ್ ಸಮೀಪವೇ ಕಾದುಕೊಂಡಿದ್ದು. ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಅವರನ್ನು ಪಿಕ್ ಮಾಡಿ ಏರ್‌ಪೋರ್ಟ್ ಕಡೆ ಬರುತ್ತಿದ್ದ.
ಕಾರಿನಲ್ಲಿಯೇ ಪೂಜಾ ನಿದ್ದೆಗೆ ಜಾರಿದ್ದರು. ಈ ಸಮಯಕ್ಕೆ ಕಾದಿದ್ದ ನಾಗೇಶ್, ಟೋಲ್ ಗೇಟ್ ದಾಟುತ್ತಿದ್ದಂತೆ ಕಾಡಯರಪ್ಪನಹಳ್ಳಿ ಕಡೆ ಕಾರು ತಿರುಗಿಸಿಕೊಂಡು ರಸ್ತೆಬದಿ ನಿಲ್ಲಿಸಿ ರಾಡ್ ತೆಗೆದುಕೊಂಡು ಆಕೆಯ ತಲೆಯ ಮೇಲೆ ಹೊಡೆಯಲು ಹಿಂದಿನ ಡೋರ್ ತೆಗೆಯುತ್ತಿದ್ದಂತೆ ನಿದ್ರೆಯಿಂದ ಎಚ್ಚೆತ್ತ ಪೂಜಾ ಭಯದಿಂದ ಕಿರುಚಿಕೊಂಡು ಪ್ರತಿರೋಧ ತೋರಿದ್ದಾರೆ.
ಆದರೂ ಬಿಡದ ನಾಗೇಶ್ ಆಕೆಯ ತಲೆಗೆ ರಾಡ್‌ನಿಂದ ಹೊಡೆದಿದ್ದಾನೆ. ಬಳಿಕ ಚಾಕುವಿನಿಂದ ಕತ್ತು, ಎದೆ, ಹೊಟ್ಟೆಯ ಭಾಗಕ್ಕೆ ಇರಿದು ಕೊಲೆಮಾಡಿದ್ದಾನೆ.ಪೂಜಾ ಕೊಲೆಯಾದ ಬಳಿಕ ಆಕೆಯ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ, ಆಕೆಯ ಎರಡು ಮೊಬೈಲ್, ಎರಡು ಬ್ಯಾಗ್ ದೋಚಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.
ಅಂತ್ಯ ಸಂಸ್ಕಾರ ನೆರವೇರಿಸಿದ ಪೋಷಕರು!: ಕೊಲೆಯಾದ ಪೂಜಾ ಮೃತದೇಹವನ್ನು ಕಲ್ಪಳ್ಳಿ ಸ್ಮಶಾನದಲ್ಲಿ ಮಣ್ಣು ಮಾಡಲಾಗಿತ್ತು. ಕೊಲೆ ವಿಚಾರ ಮಾಹಿತಿ ನೀಡಿದ ಬಳಿಕ ಆಕೆಯ ಪತಿ, ಪೋಷಕರು, ಇಬ್ಬರು ತಮ್ಮಂದಿರು ಆಗಸ್ಟ್ 20ರಂದು ನಗರಕ್ಕೆ ಆಗಮಿಸಿ ಮೃತದೇಹ ಗುರುತು ಹಿಡಿದು. ಅದೇ ದಿನ ಮತ್ತೂಂದು ಬಾರಿ ಅವರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿ ತೆರಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.