Advertisement
ಮಾತೃಸಂಘದ ಅಧ್ಯಕ್ಷ ಗುರುದೇವ್ ಯು.ಬಿ. ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೊಲೀಸರು ಬಂಧಿಸಿದ್ದ ಸಂತೋಷ್ ರಾವ್ ನಿರಪರಾಧಿ ಎಂಬುದಾಗಿ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಹಾಗಾಗಿ ನಿಜವಾದ ಅಪರಾಧಿ ಯಾರು? ತನಿಖಾ ಸಂಸ್ಥೆಗಳು ಎಡವಿದ್ದೆಲ್ಲಿ? ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ. ನೈಜ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೆ ಸಮಾಜಕ್ಕೆ ಕಟ್ಟ ಸಂದೇಶ ಹೋಗುತ್ತದೆ. ಸಮಾಜದಲ್ಲಿ ಇಂತಹ ಅಪರಾಧ ಕೃತ್ಯಗಳು ಹೆಚ್ಚಾಗುವ ಅಪಾಯವಿದೆ. ರಾಜ್ಯ ಸರಕಾರ ಕೂಡಲೇ ಮರು ತನಿಖೆ ಮಾಡಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ರಾಜ್ಯದಾದ್ಯಂತ ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಸಂಘದ ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಮಾತನಾಡಿ, ಈ ಕೃತ್ಯ ಒಬ್ಬನಿಂದ ನಡೆದಿಲ್ಲ. ಒಂದಕ್ಕಿಂತ ಹೆಚ್ಚು ಜನ ಸೇರಿ ಮಾಡಿದ್ದಾರೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖೀಸಿದೆ. ಹಾಗಾದರೆ ಅವರು ಯಾರು? ಎಂಬ ಬಗ್ಗೆ ತನಿಖೆಯಾಗಬೇಕು. ನೈಜ ಅಪರಾಧಿಯ ಬಂಧನ ಆಗದಿರುವುದಕ್ಕೆ ಪ್ರಕರಣದ ತನಿಖಾಧಿಕಾರಿ ಮುಖ್ಯ ಕಾರಣ. ಅವರನ್ನು ತನಿಖೆಗೊಳಪಡಿಸಬೇಕು. ಐದು ಮಂದಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಹೇಳಿದರು. ಪುತ್ತೂರಿನಲ್ಲಿ ಸಭೆ
ಸೌಜನ್ಯಾ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಹೋರಾಟ ನಡೆಸಬೇಕು ಎಂಬ ಬಗ್ಗೆ ತೀರ್ಮಾನಿಸಲು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಜಿಲ್ಲಾ ಮಟ್ಟದ ಸಭೆ ಆ.6ರಂದು ಪುತ್ತೂರಿನ ಸಂಘದ ಸಭಾಭವನದಲ್ಲಿ ನಡೆಯಲಿದೆ ಎಂದವರು ತಿಳಿಸಿದರು.
Related Articles
ಸಂಘದ ಖಜಾಂಚಿ, ನ್ಯಾಯವಾದಿ ನವೀನ್ ಚಿಲ್ಪಾರ್ ಮಾತನಾಡಿ, ತನಿಖಾಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಿ ಅವರನ್ನು ವಿಚಾರಣೆಗೊಳ ಪಡಿಸಬೇಕು. ಯಾವ ಪ್ರೇರಣೆಯಿಂದ ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಸರಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯ ದರ್ಶಿ ಬಾಲಕೃಷ್ಣ ಡಿ.ಬಿ., ಯುವ ಘಟಕದ ಕಾರ್ಯದರ್ಶಿ ಕಿರಣ್ ಹೊಸವಳಿಕೆ, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಕೆ.ಎಂ., ಕಾರ್ಯದರ್ಶಿ ಸಾರಿಕಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
Advertisement